ಅರಮನೆಯಲ್ಲಿ ಜಂಬೂಸವಾರಿ ಮಾರ್ಗ ಬದಲು, 15 ಸಾವಿರ ಆಸನ ಹೆಚ್ಚಳ: ಡಾ.ಮಹದೇವಪ್ಪ

| Published : Sep 22 2024, 01:50 AM IST

ಅರಮನೆಯಲ್ಲಿ ಜಂಬೂಸವಾರಿ ಮಾರ್ಗ ಬದಲು, 15 ಸಾವಿರ ಆಸನ ಹೆಚ್ಚಳ: ಡಾ.ಮಹದೇವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ವರ್ಷದಿಂದ ವರ್ಷಕ್ಕೆ ದಸರಾಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಟಿಕೆಟ್, ಪಾಸ್ ತೆಗೆದುಕೊಂಡವರು ಆಸನ ಸಿಗದೆ ಸಮಸ್ಯೆ ಎದುರಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಅರಮನೆಯಲ್ಲಿ ಆಸನಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಮಹೋತ್ಸವಕ್ಕೆ ದೇಶ ವಿದೇಶದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದ ಆಸನಗಳ ಸಮಸ್ಯೆ ಆಗುತ್ತಿದೆ. ಈ ಬಾರಿ ಅರಮನೆಯಲ್ಲಿ ಜಂಬೂಸವಾರಿ ಮಾರ್ಗ ಬದಲಾವಣೆ ಮಾಡಲು ನಿರ್ಧರಿಸಿದ್ದು, 10 ರಿಂದ 15 ಸಾವಿರ ಆಸನಗಳು ಹೆಚ್ಚಾಗಲಿವೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

ಮೈಸೂರು ಅರಮನೆ ಆವರಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಷದಿಂದ ವರ್ಷಕ್ಕೆ ದಸರಾಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಟಿಕೆಟ್, ಪಾಸ್ ತೆಗೆದುಕೊಂಡವರು ಆಸನ ಸಿಗದೆ ಸಮಸ್ಯೆ ಎದುರಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಅರಮನೆಯಲ್ಲಿ ಆಸನಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು.

ಅರಮನೆ ಆವರಣದಲ್ಲಿ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಕೆಲವು ಮಾರ್ಪಾಡು ಮಾಡಲು ನಿರ್ಧರಿಸಿದ್ದು, ಸುಮಾರು 500 ಮೀಟರ್ ಹೆಚ್ಚಾಗಲಿದೆ. ಇದರಿಂದ ಆಸನಗಳ ಸಂಖ್ಯೆಯೂ ಹೆಚ್ಚಾಗಲಿದ್ದು, ಅರಮನೆ ಆವರಣದಲ್ಲಿ 35 ರಿಂದ 40 ಸಾವಿರ ಆಸನಗಳ ವ್ಯವಸ್ಥೆ ಮಾಡಬಹುದಾಗಿದೆ ಎಂದರು.

ದಸರಾ ಆಚರಣೆಗೆ 19 ಉಪಸಮಿತಿಗಳನ್ನು ರಚಿಸಲಾಗಿದೆ. ಯಾವುದೇ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ಉತ್ಸವ ನಡೆಸಲು ಜವಾಬ್ದಾರಿಯುತವಾಗಿ, ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸೂಚಿಸಿದ್ದೇನೆ. ಇಷ್ಟು ದೊಡ್ಡ ಹಬ್ಬ ಆಚರಣೆ ಮಾಡುವಾಗ ಸಣ್ಣಪುಟ್ಟ ವ್ಯತ್ಯಾಸಗಳಾಗುವುದು ಸಹಜ. ಎಲ್ಲವನ್ನು ಸರಿದೂಗಿಸಿಕೊಂಡು ಅದ್ಧೂರಿಯಾಗಿ ದಸರಾ ಆಚರಣೆ ಮಾಡುತ್ತೇವೆ. ಮುಖ್ಯಮಂತ್ರಿಗಳು ಕೇಂದ್ರ ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದು ಅನುಮತಿ ದೊರೆತರೆ ಏರ್ ಶೋ ಮಾಡುತ್ತೇವೆ ಎಂದರು.

ಡಾ.ಹಂಪ ನಾಗರಾಜಯ್ಯ ಆಯ್ಕೆಗೆ ಸ್ವಾಗತಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಉದ್ಘಾಟಕರಾಗಿ ವಿದ್ವಾಂಸ ಡಾ. ಹಂಪ ನಾಗರಾಜಯ್ಯ ಅವರನ್ನು ಆಯ್ಕೆ ಮಾಡಿರುವುದನ್ನು ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಸ್ವಾಗತಿಸಿದ್ದಾರೆ.

2024ರ ದಸರಾ ಮಹೋತ್ಸವ ಉದ್ಘಾಟಕರಾಗಿ ಖ್ಯಾತ ವಿದ್ವಾಂಸರು, ಚಿಂತಕ ಪ್ರೊ. ಹಂಪ ನಾಗರಾಜಯ್ಯ ಆಯ್ಕೆ ಆಗಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ಹರ್ಷ ತಂದಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಸೃಜನಶೀಲ ಕೃತಿಗಳ ಮೂಲಕ ಡಾ. ಹಂಪನಾ ಮಹತ್ವದ ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ. ಅವರ ಆಯ್ಕೆಗೆ ಮನ್ನಣೆ ನೀಡಿರುವ ಮುಖ್ಯಮಂತ್ರಿಗಳ ನಿರ್ಧಾರ ಸ್ವಾಗತಾರ್ಹ ಎಂದು ಅವರು ತಿಳಿಸಿದ್ದಾರೆ.