ಹಳ್ಳದ ಮೂಲ ಸ್ವರೂಪವೇ ಬದಲುಂ

| Published : Mar 20 2024, 01:15 AM IST

ಸಾರಾಂಶ

ಹನುಮಸಾಗರ ಗ್ರಾಮ ಜಿಲ್ಲೆಯಲ್ಲಿಯೇ ದೊಡ್ಡ ಗ್ರಾಪಂ ಎನಿಸಿಕೊಂಡಿದೆ. ತ್ಯಾಜ್ಯ, ಮುಳ್ಳಿನ ಗಿಡಗಳಿಂದಲೇ ಹಳ್ಳ ತುಂಬಿಕೊಂಡಿದೆ. ಇದರಿಂದಾಗಿ ಹಳ್ಳದ ಮೂಲ ಸ್ವರೂಪವೇ ಬದಲಾಗಿದೆ.

ಚರಂಡಿಗಳಲ್ಲಿ ಹೂಳು, ತ್ಯಾಜ್ಯ, ಮುಳ್ಳಿನ ಗಿಡಗಳಿಂದಲೇ ತುಂಬಿದ ಹಳ್ಳ

ಏಕನಾಥ ಜಿ ಮೆದಿಕೇರಿ

ಕನ್ನಡಪ್ರಭ ವಾರ್ತೆ ಹನುಮಸಾಗರ

ಹನುಮಸಾಗರ ಗ್ರಾಮ ಜಿಲ್ಲೆಯಲ್ಲಿಯೇ ದೊಡ್ಡ ಗ್ರಾಪಂ ಎನಿಸಿಕೊಂಡಿದೆ. ತ್ಯಾಜ್ಯ, ಮುಳ್ಳಿನ ಗಿಡಗಳಿಂದಲೇ ಹಳ್ಳ ತುಂಬಿಕೊಂಡಿದೆ. ಇದರಿಂದಾಗಿ ಹಳ್ಳದ ಮೂಲ ಸ್ವರೂಪವೇ ಬದಲಾಗಿದೆ.

ಜತೆಗೆ ಗ್ರಾಮದ ಚರಂಡಿಗಳಲ್ಲಿ ಹೂಳು ತುಂಬಿದೆ. ಮಳೆಯಾಗುವ ವೇಳೆಯಲ್ಲಿ ಚರಂಡಿ, ಹಳ್ಳದ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ.

ಮಾರ್ಗ ಎಲ್ಲಿಂದ:

ಗ್ರಾಮದ ಬೆಟ್ಟದ ಮೇಲಿನ ಮಳೆ ನೀರು ಹಾಗೂ ನಾನಾ ಕಾಲನಿಯ ಚರಂಡಿಯ ನೀರು ಸಂತೆ ಮಾರುಕಟ್ಟೆಯ ಚರಂಡಿ, ಹಳೆ ಬಸ್ ನಿಲ್ದಾಣ ಹಿಂಭಾಗ, ಹೊಸ ಬಸ್ ನಿಲ್ದಾಣದ ಮುಖಾಂತರ ರಾಜಕಾಲುವೆ ತಲುಪಿ, ಮುಂದೆ ಹಳ್ಳಕ್ಕೆ ಹರಿಯುತ್ತಿದೆ.

ರಾಜಕಾಲುವೆಯಲ್ಲಿ ಹೆಮ್ಮರವಾದ ಜಾಲಿ:

ಅಗಸಿಮುಂದಿನ ಕಿರಾಣಿ ಅಂಗಡಿಯಿಂದ, ಹೊಸ ಬಸ್ ನಿಲ್ದಾಣದ ಮುಂದಿನ ಮಾರ್ಗದ ರಾಜಕಾಲುವೆಯಲ್ಲಿ ಸುಮಾರು 2 ಮೀಟರ್‌ ವ್ಯಾಪ್ತಿಯಲ್ಲಿ ಜಾಲಿಗಿಡಗಳು ಹೆಮ್ಮರವಾಗಿ ಬೆಳೆದಿವೆ. ಇದರೊಂದಿಗೆ ತ್ಯಾಜ್ಯ ತುಂಬಿದ್ದು ನೀರು ಸರಾಗವಾಗಿ ಹರಿಯುತ್ತಿಲ್ಲ. ರಾಜಕಾಲುವೆ ಸುತ್ತಲಿನ ನಿವಾಸಿಗಳು ಸಂಜೆ ವೇಳೆಯಲ್ಲಿ ಸೊಳ್ಳೆ ಹಾಗೂ ದುರ್ವಾಸನೆಯಿಂದ ಬಳಲುತ್ತಿದ್ದಾರೆ. ನಾನಾ ರೋಗಗಳಿಗೆ ತುತ್ತಾಗುವ ಆತಂಕ ಹೆಚ್ಚಾಗಿದೆ.

ಹಳ್ಳದಲ್ಲಿ ಹೂಳು ಕೇಳುವವರಿಲ್ಲ ಗೋಳು:

ಮಳೆಯಾಗುವ ವೇಳೆಯಲ್ಲಿ ಈ ಹಳ್ಳ ತುಂಬಿದರೆ ಸುತ್ತಲಿನ ರೈತರಿಗೆ ಅನನುಕೂಲವಾಗುತ್ತದೆ. ಆದರೆ ಇದೇ ಹಳ್ಳಕ್ಕೆ ರಾಜಕಾಲುವೆ ಚರಂಡಿಯ ಸಂಪರ್ಕ ಇದೆ. ಚಿಕನ್ ಅಂಗಡಿಯವರು ಕೋಳಿಯ ರೆಕ್ಕೆ ಪುಕ್ಕ, ನಾನಾ ಅಂಗಡಿಯವರು ಹಾಗೂ ಸಾರ್ವಜನಿಕರ ಮನೆಯಲ್ಲಿನ ತ್ಯಾಜ್ಯವನ್ನು ಹಳ್ಳದಲ್ಲಿ ಹಾಕುತ್ತಿರುವ ಕಾರಣ ಹಳ್ಳ ತ್ಯಾಜ್ಯದಿಂದ ಭರ್ತಿಯಾಗಿದೆ. ಇದೇ ಸ್ಥಳದಲ್ಲಿ ಜಾಲಿಮರಗಳು ಹೆಚ್ಚಾಗಿ ಬೆಳೆದಿವೆ. ಇದು ಗಜೇಂದ್ರಗಡ ಮುಖ್ಯ ರಸ್ತೆಯಾಗಿದೆ. ಮಳೆಗಾಲದಲ್ಲಿ ನೀರು ಹರಿಯುವ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ರೈತರು, ಖಾಸಗಿ ಶಾಲೆಯ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಹಳ್ಳದ ಅಕ್ಕಪಕ್ಕದಲ್ಲಿ ಗ್ರಾಪಂಯು ಕೊಳವೆ ಬಾವಿ ಕೊರೆಸಿದ್ದು, ನೀರು ಇಲ್ಲದೆ, ಕೊಳವೆ ಬಾವಿಯ ಇಂಗು ಗುಂಡಿಗಳು ಸಹಿತ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಗ್ರಾಪಂ ಆಡಳಿತ ಹಳ್ಳದ ಸ್ವಚ್ಛತೆಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.