''ಯತ್ನಾಳ್‌ ಬದಲು ರೇಣುಕಾಚಾರ್ಯನನ್ನೇ ಉಚ್ಚಾಟಿಸಿ : ಉಚ್ಚಾಟಿಸಿದ ಆದೇಶ ಮರುಪರಿಶೀಲಿಸಬೇಕು''

| N/A | Published : Apr 01 2025, 12:47 AM IST / Updated: Apr 01 2025, 12:48 PM IST

''ಯತ್ನಾಳ್‌ ಬದಲು ರೇಣುಕಾಚಾರ್ಯನನ್ನೇ ಉಚ್ಚಾಟಿಸಿ : ಉಚ್ಚಾಟಿಸಿದ ಆದೇಶ ಮರುಪರಿಶೀಲಿಸಬೇಕು''
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ ಕ್ಷೇತ್ರ ಶಾಸಕ, ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟಿಸಿದ ಆದೇಶವನ್ನು ಬಿಜೆಪಿಯ ರಾಷ್ಟ್ರೀಯ ನಾಯಕರು ಮರುಪರಿಶೀಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಯತ್ನಾಳ್ ಅಭಿಮಾನಿ ಬಳಗದ ಮುಖಂಡ ಎಂ.ಆರ್. ಮಹೇಶ್ ಮನವಿ ಮಾಡಿದ್ದಾರೆ.

 ಹೊನ್ನಾಳಿ :  ವಿಜಯಪುರ ಕ್ಷೇತ್ರ ಶಾಸಕ, ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟಿಸಿದ ಆದೇಶವನ್ನು ಬಿಜೆಪಿಯ ರಾಷ್ಟ್ರೀಯ ನಾಯಕರು ಮರುಪರಿಶೀಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಯತ್ನಾಳ್ ಅಭಿಮಾನಿ ಬಳಗದ ಮುಖಂಡ ಎಂ.ಆರ್. ಮಹೇಶ್ ಮನವಿ ಮಾಡಿದರು.

ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂಗಳ ಪರವಾಗಿ ಧ್ವನಿ ಎತ್ತುತ್ತಿದ್ದ ಏಕೈಕ ಶಾಸಕ ಯತ್ನಾಳ್. ಅಂಥವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದು ಸರಿಯಲ್ಲ. ಅವರು ಪಕ್ಷದ ವಿರುದ್ಧ ಮಾತನಾಡಿಲ್ಲ. ಆದರೆ ಕುಟುಂಬ ರಾಜಕಾರಣ ಹಾಗೂ ಅವರ ಭ್ರಷ್ಟಾಚಾರ ವಿರುದ್ಧ ಮಾತನಾಡಿದ್ದಾರೆ. ಕೇಂದ್ರ ನಾಯಕರ ಈ ಆದೇಶ ಬಿಜೆಪಿ ಪ್ರಾಮಾಣಿಕ ಕಾರ್ಯಕರ್ತರಿಗೆ ಅಚ್ಚರಿ ತಂದಿದೆ ಎಂದರು.

ಬಿ.ಎಸ್. ಯಡಿಯೂರಪ್ಪ ಅಧಿಕಾರದಲ್ಲಿ ಇದ್ದಾಗ ಅವರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಪಟ್ಟ, ಮಂತ್ರಿ ಪದವಿಗಾಗಿ ರೆಸಾರ್ಟ್ ರಾಜಕಾರಣ ಮಾಡಿದ, 2024ರ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಜೊತೆಗೆ ಒಳಒಪ್ಪಂದ ಮಾಡಿಕೊಂಡು ಬಿಜೆಪಿಯ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಲು ಕಾರಣರಾದ ಮಾಜಿ ಮಂತ್ರಿ ಎಂ.ಪಿ. ರೇಣುಕಾಚಾರ್ಯ ಅವರನ್ನು ಉಚ್ಚಾಟಿಸುವುದರ ಬದಲಿಗೆ, ಯತ್ನಾಳ್ ಉಚ್ಚಾಟನೆ ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಳೀನ್‌ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾಗ ಅವರನ್ನು ನೀನು ಬೃಹನ್ನಳೆ ಇದ್ದಂತೆ, ಪಕ್ಷದ ಸೋಲಿಗೆ ನೀನೇ ಕಾರಣ, ತಕ್ಷಣವೇ ರಾಜೀನಾಮೆ ಕೊಡು ಎಂದು ಹೇಳಿದ್ದು ಕೇಂದ್ರ ನಾಯಕರಿಗೆ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಮಾಡಿದ ಅವಮಾನವಲ್ಲವೇ? ಸಚಿವ ಸುಧಾಕರ್ ಅವರನ್ನು ಬಿಜೆಪಿ ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದಾಗ ನೆನ್ನೆ ಮೊನ್ನೆ ಬಂದವರಿಗೆಲ್ಲಾ ಇಂತಹ ಸ್ಥಾನಮಾನ ಕೊಟ್ಟಿದ್ದು ಸರಿಯಲ್ಲ ಎಂದು ಹೇಳಿದ್ದರು. ಇದು ಕೇಂದ್ರ ನಾಯಕರಿಗೆ ಮಾಡಿದ ಅವಮಾನವಲ್ಲವೇ ಎಂದರು.

ಐಪಿಎಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ ಕೊಡಿಸಿ ಅವರನ್ನು ರಾಜ್ಯ ಉಸ್ತುವಾರಿಯನ್ನಾಗಿ ನೇಮಕ ಮಾಡಿದಾಗ, ಇವನು ನಮಗೆ ಸೆಲ್ಯೂಟ್ ಹೊಡೆಯುತ್ತಿದ್ದ, ಈಗ ನಾವು ಅವನಿಗೆ ಸೆಲ್ಯೂಟ್ ಹೊಡೆಯಬೇಕೇ ಎಂದು ಪ್ರಶ್ನಿಸಿ ಹೇಳಿಕೆ ನೀಡಿದ್ದ ರೇಣುಕಾಚಾರ್ಯ ಅವರ ನಡೆ ಎಷ್ಟು ಸರಿ ಎಂದು ಮಹೇಶ್‌ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್, ಮಂಡಲ ಮಾಜಿ ಅಧ್ಯಕ್ಷ ಎ.ಬಿ. ಹನುಮಂತಪ್ಪ, ಮಾಜಿ ಉಪಾಧ್ಯಕ್ಷ ನೆಲಹೊನ್ನೆ ದೇವರಾಜ್, ಸಾಸ್ವೇಹಳ್ಳಿ ತಿಪ್ಪೇಶ್, ಕುಂದೂರು ನಾಗರಾಜ್, ಗೊಲ್ಲರಹಳ್ಳಿ ಹಳದಪ್ಪ, ಮಾಸಡಿ ಸಿದ್ದೇಶ್, ಕೋಟೆಮಲ್ಲೂರು ಕರಿಬಸಪ್ಪ ಉಪಸ್ಥಿತರಿದ್ದರು.

ಕೋಟ್‌ ರಾಜ್ಯದಲ್ಲಿ ಒಂದು ಗ್ರಾಪಂ ಚುನಾವಣೆಯೂ ಗೆಲ್ಲಲು ಯೋಗ್ಯತೆ ಇಲ್ಲದವನು ಎಂದು ಬಿ.ಎಲ್. ಸಂತೋಷ್ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು, ರಾಜ್ಯದಲ್ಲಿ 60 ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದರಿಂದಲೇ ಪಕ್ಷಕ್ಕೆ ಸೋಲಾಯಿತು, ಇದೇನು ಗುಜರಾತ್ ರಾಜ್ಯವೇ ಎಂದು ಟೀಕಿಸುವ ಮೂಲಕ ಮೋದಿ ಅವರಿಗೆ ಅವಮಾನ ಮಾಡಿದ ರೇಣುಕಾಚಾರ್ಯರ ಬಗ್ಗೆ ಕೇಂದ್ರ ನಾಯಕರು ಏಕೆ ಕ್ರಮ ಕೈಗೊಳ್ಳಬಾರದು

- ಎಂ.ಆರ್. ಮಹೇಶ್, ಮುಖಂಡ, ಯತ್ನಾಳ್ ಅಭಿಮಾನಿ ಬಳಗ