ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಕಡ್ಡಾಯವಾಗಿ ಬೆಳೆಸಿ ಎಂದು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪ್ರಥಮ ಸಮ್ಮೇಳನ ಅಧ್ಯಕ್ಷರಾದ ಟಿ.ಎಸ್.ಗೋಪಾಲ್ ಕರೆ ನೀಡಿದ್ದಾರೆ.ಪೊನ್ನಂಪೇಟೆ ತಾಲೂಕಿನ ಹುದಿಕೇರಿಯ ಜನತಾ ಪ್ರೌಢಶಾಲಾ ಮೈದಾನದ ಕೂರ್ಗ್ ಸ್ಟಾರ್ ಚೆಕ್ಕೇರ ಅಪ್ಪಯ್ಯ ವೇದಿಕೆಯಲ್ಲಿ ಸೋಮವಾರ ನಡೆದ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಭಾಷೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ತನ್ನದೇ ಆದ ಪ್ರಾಚೀನ ಇತಿಹಾಸ ಹೊಂದಿದೆ. ದಕ್ಷಿಣ ಭಾರತದ ದ್ರಾವಿಡ ಭಾಷೆಯಲ್ಲಿ ಕನ್ನಡ ಸೊಗಸಾದ ಭಾಷೆಯಾಗಿದ್ದು, ಮಕ್ಕಳಿಗೆ ಕನ್ನಡ ಭಾಷೆಯನ್ನು ಸರಳೀಕರಿಸಿ ಕಲಿಸುವಂತಾಗಬೇಕು ಎಂದು ಸಲಹೆ ಮಾಡಿದರು. ನಾಡಿನ ಭಾಷೆಯಾದ ಕನ್ನಡವನ್ನು ಹೆಚ್ಚು ಹೆಚ್ಚು ಕಲಿಯಬೇಕು. ಮಾತೃ ಭಾಷೆ ಜೊತೆಗೆ ನಾಡಿನ ಭಾಷೆಯನ್ನು ಕಲಿಸಬೇಕು ಎಂದು ಟಿ.ಎಸ್.ಗೋಪಾಲ್ ಅವರು ಹೇಳಿದರು.
ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು: ದಕ್ಷಿಣ ಕೊಡಗಿನ ಭಾಗದಲ್ಲಿ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವುದರಿಂದ ಕನ್ನಡ, ಕೊಡವ, ಮಲೆಯಾಳ, ಆದಿವಾಸಿ ಭಾಷೆಗಳನ್ನು ಮಾತನಾಡುತ್ತಾರೆ. ಜೊತೆಗೆ ಅಧ್ಯಯನಕ್ಕೆ ಸಂಬಂಧಿಸಿದಂತೆ ಕನ್ನಡ, ಇಂಗ್ಲೀಷ್, ಹಿಂದಿಯನ್ನು ಸಹ ಕಲಿಯುತ್ತಾರೆ. ಮಕ್ಕಳಿಗೆ ಭಾಷೆ ಕಲಿಕೆಗೆ ಒತ್ತು ನೀಡಬೇಕು. ಆದರೆ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸಮ್ಮೇಳನಾಧ್ಯಕ್ಷರು ಹೇಳಿದರು. ಕನ್ನಡವನ್ನು ಸಲೀಸಾಗಿ ಮಾತನಾಡುವ ಮಕ್ಕಳು ಓದಿ ಬರೆಯಲು ಕಷ್ಟ ಪಡುತ್ತಿರುವ ಬಗ್ಗೆ ಕೇಳಿ ಬರುತ್ತಿದೆ. ಮನೆಯಲ್ಲಿಯೇ ಕನ್ನಡ ಕಲಿಯುವ ಕೆಲಸ ಆಗಬೇಕು. ಹ್ರಸ್ವಸ್ವರ-ದೀರ್ಘ ಸ್ವರ, ಅಲ್ಪಪ್ರಾಣ-ಮಹಾಪ್ರಾಣ ಹೀಗೆ ಉಚ್ಛರಣೆಯ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಹಲವು ಸಾಹಿತಿಗಳು, ಕವಿಗಳು ಕನ್ನಡ ಭಾಷೆ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಚೆಕ್ಕೇರ ಅಪ್ಪಯ್ಯ ಅವರು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ ಎಂದು ತಿಳಿಸಿದರು.ಮಕ್ಕಳನ್ನು ಸಾಹಿತ್ಯ ಸಮ್ಮೇಳನಕ್ಕೆ ಕಳುಹಿಸಬೇಕು. ಮಕ್ಕಳಲ್ಲಿ ಕನ್ನಡದ ಪ್ರೇಮ ಬೆಳೆಸಬೇಕು. ಕನ್ನಡ ಭಾಷೆ ಬಳಸುವಂತಾಗಲು ಪ್ರೋತ್ಸಾಹಿಸಬೇಕು. ವಿಷಯವನ್ನು ಮನನ ಮಾಡಿಕೊಳ್ಳಬೇಕು ಎಂದರು. ಸಾಹಿತ್ಯಪರ ಕಾರ್ಯಕ್ರಮಗಳಿಗೆ ಮಕ್ಕಳು ಹೋಗದಂತೆ ಸುತ್ತೋಲೆ ಹೊರಡಿಸಿದಲ್ಲಿ ಅದನ್ನು ವಾಪಸ್ಸು ಪಡೆಯಬೇಕು. ಸಾಹಿತ್ಯ ಚಟುವಟಿಕೆಯಲ್ಲಿ ಮಕ್ಕಳು ಪಾಲ್ಗೊಂಡಲ್ಲಿ ಯಾವುದೇ ರೀತಿಯ ನಷ್ಟವಿಲ್ಲ ಎಂದು ಟಿ.ಪಿ.ರಮೇಶ್ ಅವರು ಪ್ರತಿಪಾದಿಸಿದರು.ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ಮಾತನಾಡಿ ಕನ್ನಡದ ಮನಸ್ಸುಗಳು ಒಂದಾಗಬೇಕು. ಕನ್ನಡ ಭಾಷೆ ಎಲ್ಲೆಡೆ ಪಸರಿಸಬೇಕು. ತಾಲೂಕು ಹಾಗೂ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವುದರಿಂದ ಅಲ್ಲಿನ ಕನ್ನಡ ಸಂಸ್ಕೃತಿ, ಸ್ಥಳೀಯ ಭಾಷೆ ಬಗ್ಗೆ ಮಾಹಿತಿ ನೀಡಲು ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಚಿರಿಯಪ್ಪಂಡ ಸುರೇಶ್ ನಂಜಪ್ಪ ಅವರು ಮಾತನಾಡಿ, ಹತ್ತನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದೇನೆ. ಕನ್ನಡ ಭಾಷೆ ಕಲಿಯುವುದಿರಿಂದ ಇತರೆ ಭಾಷೆ ಕಲಿಯಲು ಸಹಕಾರಿಯಾಗಿದೆ ಎಂದರು. ತಾ,ಪಂ.ಇಒ ಕೆ.ಆರ್.ರಾಜೇಶ್ ಅವರು ಮಾತನಾಡಿ, ಕನ್ನಡವನ್ನು ಕಟ್ಟಿ ಬೆಳೆಸಬೇಕು. ಇತಿಹಾಸವನ್ನು ತಿಳಿದುಕೊಂಡು ಮುಂದೆ ಸಾಗಬೇಕು ಎಂದರು. ತಹಸೀಲ್ದಾರ್ ಸಂಜನಾ, ಪೊಲೀಸ್ ಉಪ ನಿರ್ದೇಶಕರಾದ ಮಹೇಶ್ ಕುಮಾರ್, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗೋಪಿ, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕೋಳೆರ ದಯಾಚಂಗಪ್ಪ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ಸಂಘಟನಾ ಕಾರ್ಯದರ್ಶಿ ಬಿ.ಎಂ.ವಾಸುರೈ, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪ್ರಭು ಕುಮಾರ್, ಜಿಮ್ಮಿ ಅಯ್ಯಣ್ಣ, ಚೆಕ್ಕೇರ ಸುದೀರ್, ದಿವ್ಯ ಕಾವೇರಮ್ಮ, ಪುಟ್ಟರಾಜು, ಇತರರು ಇದ್ದರು. ಹುದಿಕೇರಿಯ ಲಿಟ್ಲ್ ಪ್ಲವರ್ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಗೋಣಿಕೊಪ್ಪ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು. ಸಮ್ಮೇಳನ ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಬಾನಂಗಡ ಅನೂಪ್ ಸ್ವಾಗತಿಸಿದರು. ಚಂದನಾ ಮತ್ತು ನಳಿನಿ ನಿರೂಪಿಸಿದರು. ದಯಾ ಚಂಗಪ್ಪ ವಂದಿಸಿದರು.ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಮುಖ್ಯ ರಸ್ತೆಗಾಗಿ ಸಾಗಿತು. ಮೆರವಣಿಗೆಯಲ್ಲಿ ಮಂಗಳ ವಾದ್ಯ, ಚಂಡೆ ವಾದ್ಯ, ಕಳಸ ಹೊತ್ತ ಮಹಿಳೆಯರು, ಗೊಂಬೆಗಳು, ಪೂಜಾ ಕುಣಿತ, ಡೊಳ್ಳು ಕುಣಿತ, ಬ್ಯಾಂಡ್ ಸೆಟ್, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಜೀವಿನಿ ಮಹಿಳಾ ಒಕ್ಕೂಟ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ಅಂಗನವಾಡಿ ಸಂಘಟನೆ, ಸ್ತ್ರೀಶಕ್ತಿ ಒಕ್ಕೂಟ, ಆಶಾ ಕಾರ್ಯಕರ್ತೆಯರು, ಶಿಕ್ಷಕರುಗಳು, ಸಂಘ ಸಂಸ್ಥೆಗಳ ಮತ್ತು ಸಮಾಜಗಳ ಪ್ರತಿನಿಧಿಗಳು, ಆಟೋ ಮತ್ತು ವಾಹನ ಚಾಲಕರ ಸಂಘದವರು, ಎನ್‌ಸಿಸಿ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡದೊಂದಿಗೆ ಮೆರವಣಿಗೆ ನಡೆಯಿತು. ವಿವಿಧ ಇಲಾಖೆಗಳು ಮಾಹಿತಿ ಮಳಿಗೆ ನಿರ್ಮಿಸಿ, ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ಗಮನ ಸೆಳೆದರು.