ಗುಣಾತ್ಮಕ ಶಿಕ್ಷಣ ನೀಡಿದಾಗ ಸಂಸ್ಥೆಗಳು ಉತ್ತಮ ಹೆಸರು ಸಂಪಾದಿಸಲು ಸಾಧ್ಯ: ಶಾಸಕ ಕೆ.ನೇಮರಾಜ್‌ ನಾಯ್ಕ

| Published : Jan 05 2025, 01:31 AM IST

ಗುಣಾತ್ಮಕ ಶಿಕ್ಷಣ ನೀಡಿದಾಗ ಸಂಸ್ಥೆಗಳು ಉತ್ತಮ ಹೆಸರು ಸಂಪಾದಿಸಲು ಸಾಧ್ಯ: ಶಾಸಕ ಕೆ.ನೇಮರಾಜ್‌ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಲಹರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಈಗಾಗಲೇ ಅನೇಕ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಮಾನದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ.

ಮರಿಯಮ್ಮನಹಳ್ಳಿ: ಗುಣಾತ್ಮಕ ಶಿಕ್ಷಣ ನೀಡಿದಾಗ ಮಾತ್ರ ಶಿಕ್ಷಣ ಸಂಸ್ಥೆಗಳು ಉತ್ತಮ ಹೆಸರು ಸಂಪಾದಿಸಲು ಸಾಧ್ಯ ಎಂದು ಶಾಸಕ ಕೆ.ನೇಮರಾಜ್‌ ನಾಯ್ಕ ಹೇಳಿದರು.

ಇಲ್ಲಿನ ದುರುಗಮ್ಮದೇವಿ ದೇವಸ್ಥಾನದ ಹಿಂಭಾಗದ ಅನ್ನದಾನೇಶ್ವರ ಮಠದಲ್ಲಿ ಶುಕ್ರವಾರ ಸಂಜೆ ನಡೆದ ಅಥರ್ವ ಎಜ್ಯುಕೇಶನ್‌ ಟ್ರಸ್ಟ್‌ ಮತ್ತು ಲಹರಿ ಇಂಗ್ಲೀಷ್‌ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 2024-25ನೇ ಸಾಲಿನ ನಕ್ಷತ್ರ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮರಿಯಮ್ಮನಹಳ್ಳಿಯಲ್ಲಿ ಮೊಟ್ಟ ಮೊದಲು ಇಂಗ್ಲೀಷ್‌ ಮಾಧ್ಯಮ ಶಾಲೆ ಆರಂಭಿಸಿದ್ದೇ ಲಹರಿ ಶಾಲೆ, ಗ್ರಾಮೀಣ ಪ್ರದೇಶದಲ್ಲಿ ಲಹರಿ ಇಂಗ್ಲೀಷ್‌ ಮಾಧ್ಯಮ ಶಾಲೆಯು 28 ವರ್ಷಗಳಿಂದ ಉತ್ತಮ ಶಿಕ್ಷಣ ನೀಡುತ್ತದೆ. ಲಹರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಈಗಾಗಲೇ ಅನೇಕ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಮಾನದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಮರಿಯಮ್ಮನಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಕಾರ್ಖಾನೆಗಳ ಸಿಎಸ್‌ಆರ್‌ ಹಣದಲ್ಲಿ ಲಹರಿ ಶಾಲೆಯಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳ ಶಾಲಾ ಫೀಜ್‌ ಕಟ್ಟಲು ಮುಂದಾಗಬೇಕು. ಬಡ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ಕಾರ್ಖಾನೆಯ ಮಾಲೀಕರೊಂದಿಗೆ ಮಾತನಾಡಿ ಬಡ ವಿದ್ಯಾರ್ಥಿಗಳ ಶಾಲಾ ಫೀಜ್ ಕಟ್ಟುವಂತೆ ಸೂಚಿಸುತ್ತೇನೆ ಎಂದು ಹೇಳಿದರು.

ವೈದ್ಯ ಡಾ.ಜಿ.ಎಂ. ಸೋಮೇಶ್ವರ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು. ಸಾಧನೆ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿ ಪ್ರೇರಣೆ ನೀಡಬೇಕು. ವಿದ್ಯೆ ಮನುಷ್ಯನನ್ನು ಉತ್ತಮ ರೀತಿಯಲ್ಲಿ ಬಾಳಲು ಪ್ರೇರಣೆ ನೀಡುತ್ತದೆ. ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ತಂದು ಕೊಡುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿ ಸಮಯವನ್ನು ವ್ಯರ್ಥವಾಗಿ ಕಳೆಯದೇ ವಿದ್ಯೆ ಕಲಿಯಲು ಸಮಯವನ್ನು ಸದುಪಯೋಗಪಡಿಸಿಕೊಂಡು ಪ್ರತಿಭಾವಂತರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಲಹರಿ ಶಾಲೆಯ ಎಸ್‌ಬಿಸಿ ಅಧ್ಯಕ್ಷ ಹುಬ್ಬಳ್ಳಿ ಪಾಂಡುರಂಗ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜೆಡಿಎಸ್‌ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಜೆಡಿಎಸ್‌ನ ಉಪಾಧ್ಯಕ್ಷ ಎನ್‌. ಕೃಷ್ಣಮೂರ್ತಿ, ರಾಂಪುರ ದುರ್ಗಾದೇವಿ ದೇವಸ್ಥಾನದ ಅರ್ಚಕ ಪೂಜಾರ್‌ ಬಸವರಾಜ, ವೈದ್ಯೆ ಡಾ.ಮಂಜುಳ ಮೂರ್ತಿ, ಮುಖಂಡರಾದ ಗುಂಡಾ ಸೋಮಣ್ಣ, ಡಾ.ಈ. ಯರ್ರಿಸ್ವಾಮಿ, ಬಾದಾಮಿ ಮುತ್ತಣ್ಣ, ಬಿ.ಎಂ.ಎಸ್‌. ಚಿನ್ನವೀರಯ್ಯಸ್ವಾಮಿ, ಮುಗಿಲಿ ವೆಂಕಟೇಶ್‌, ನೀತುರಾಣಿ, ತಿರುಪತಿ ಕಾಕರಕಿ, ಸಿದ್ದರಾಜು, ಟ್ರಸ್ಟ್‌ನ ಎ. ಆಶಾ ಭಾಗವಹಿಸಿದ್ದರು.

ಶಾಸಕ ಕೆ.ನೇಮರಾಜ್‌ ನಾಯ್ಕ, ವೈದ್ಯರಾದ ಡಾ.ಮಂಜುಳ ಮೂರ್ತಿ, ಡಾ. ಜಿ.ಎಂ. ಸೋಮೇಶ್ವರ, ಟ್ರಸ್ಟ್‌ನ ಎ.ಆಶಾ ಸೇರಿದಂತೆ ಅತಿಥಿಗಳನ್ನು ಹಾಗೂ ಶಾಲಾ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಿ.ಎಂ.ಎಸ್‌. ರೇಖಾ ಶಾಲಾ ವಾರ್ಷಿಕ ವರದಿ ವಾಚಿಸಿದರು. ಗೌರಮ್ಮ ವಂದಿಸಿದರು. ಮಂಜುಳ ಹೂಗಾರ್‌ ನಿರೂಪಿಸಿದರು.

ಶಾಲಾ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶಿಸಿದರು.