ಸಂಸ್ಥೆಗಳು ರೈತರಿಗೆ ಲಾಭ ತಂದುಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು: ಪ್ರಸಾದ್‌

| Published : Dec 14 2023, 01:30 AM IST

ಸಂಸ್ಥೆಗಳು ರೈತರಿಗೆ ಲಾಭ ತಂದುಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು: ಪ್ರಸಾದ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಥೆಗಳು ರೈತರಿಗೆ ಲಾಭ ತಂದುಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು: ಪ್ರಸಾದ್‌ ಚಿಕ್ಕಮಗಳೂರಿನ ಹೊರವಲಯದ ಬೈನರಿ ಎಕ್ಸೋಟಿಕ ರೆಸಾರ್ಟ್‌ನಲ್ಲಿ ದಾಳಿಂಬೆ ತಾಂತ್ರಿಕ ಕಾರ್ಯಾಗಾರ

- ಚಿಕ್ಕಮಗಳೂರಿನ ಹೊರವಲಯದ ಬೈನರಿ ಎಕ್ಸೋಟಿಕ ರೆಸಾರ್ಟ್‌ನಲ್ಲಿ ದಾಳಿಂಬೆ ತಾಂತ್ರಿಕ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಯಾವುದೇ ಸಂಸ್ಥೆಗಳಾದರೂ ಮೊದಲು ರೈತರಿಗೆ ಲಾಭ ತಂದುಕೊಡುವ ಕೆಲಸ ಮಾಡಬೇಕು. ಆಗ ರೈತ ಉದ್ಧಾರ ವಾಗುವ ಜೊತೆಗೆ ಸಂಸ್ಥೆಗಳೂ ಬೆಳೆಯುತ್ತವೆ. ಯಾವುದೇ ಬೆಳೆಯಾಗಲಿ ರೈತರು ಆ ಬೆಳೆಗಳಿಗೆ ಬರುವ ರೋಗಗಳ ನಿರ್ವಹಣೆ ಕಲೆ ತಿಳಿದಿದ್ದರೆ ಮಾತ್ರ ಉತ್ತಮ ಫಸಲು ಪಡೆದು ಲಾಭ ಗಳಿಸಲು ಸಾಧ್ಯ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿ.ಎನ್.ಪ್ರಸಾದ್ ಸಲಹೆ ನೀಡಿದರು.

ನಗರದ ಹೊರವಲಯದ ಬೈನರಿ ಎಕ್ಸೋಟಿಕ ರೆಸಾರ್ಟ್‌ನಲ್ಲಿ ದಕ್ಷಿಣ ಭಾಗದ ದಾಳಿಂಬೆ ಬೆಳೆಗಾರರ ರೈತೋತ್ಪಾದಕ ಸಂಸ್ಥೆ ಹಾಗೂ ಸೊಲ್ಲಾಪುರದ ದಾಳಿಂಬೆ ಸಂಶೋಧನಾ ಕೇಂದ್ರದಿಂದ ಬುಧವಾರ ಆಯೋಜಿಸಲಾಗಿದ್ದ ದಾಳಿಂಬೆ ತಾಂತ್ರಿಕ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ರೈತರನ್ನು ಸದೃಢ ಗೊಳಿಸು ವುದೇ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಕೆಲಸ. ಆದರೆ ಕೆಲವೊಮ್ಮೆ ಇದು ಇಲಾಖೆಗಳಿಂದ ಸಾಧ್ಯವಾಗ ದಿದ್ದಾಗ ರೈತರ ಪರವಾಗಿರುವ ಬೆಳೆಗಾರರ ರೈತೋತ್ಪಾದಕ ಸಂಸ್ಥೆಗಳಿಗೆ ಸಹಕಾರ ನೀಡುತ್ತೇವೆ. ಒಟ್ಟಾರೆ ರೈತರು ಅಭಿವೃದ್ಧಿಯಾಗಬೇಕು ಎಂಬುದೇ ನಮ್ಮ ಉದ್ದೇಶ ಎಂದು ತಿಳಿಸಿದರು.

ಕೆಲ ಮನುಷ್ಯರಲ್ಲಿ ಒಳ್ಳೆಯತನ, ಇನ್ನು ಕೆಲವರಲ್ಲಿ ಕೆಟ್ಟತನವಿರುತ್ತದೆ. ಹೀಗಿರುವಾಗ ಯಾರಿಗಾದರೂ ಒಳ್ಳೆಯದು ಮಾಡಲು ಹೋದಾಗ ಟೀಕಿಸಿ ಮಾತನಾಡುವವರು ಇರುತ್ತಾರೆ. ಅಂಥವರನ್ನು ನಿರ್ಲಕ್ಷ್ಯ ಮಾಡಬೇಕು. ಸಣ್ಣತನ ಬಿಟ್ಟು ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಒಂದಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಎಸ್‌ಆರ್‌ಪಿಜಿ ಅಧ್ಯಕ್ಷ ಡಾ.ಎಚ್.ಆರ್.ಯೋಗೀಶ್ವರ್‌ ಮಾತನಾಡಿ, ನಮ್ಮ ರೈತೋತ್ಪಾದಕ ಸಂಸ್ಥೆ ಉದ್ದೇಶ ರೈತರಿಗೆ ಕಡಿಮೆ ದರದಲ್ಲಿ ಕೃಷಿ ಪರಿಕರ, ಮಾರುಕಟ್ಟೆ ಹಾಗೂ ತಾಂತ್ರಿಕ ಸಲಹೆ ಸಿಗಬೇಕು ಎನ್ನುವುದಾಗಿದೆ. ಈಗಾಗಲೇ ರೈತರಿಗೆ ಎಲ್ಲ ರೀತಿಯ ಸಲಹೆ ನೀಡಿ ಅವರ ಅಭ್ಯುದಯಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸಂಸ್ಥೆ ಆರಂಭಗೊಂಡ ಎರಡೂವರೆ ವರ್ಷದಲ್ಲಿಯೇ ದಾಳಿಂಬೆ ಬೆಳೆಗಾರರಿಗೆ ತಾಂತ್ರಿಕ ಸಲಹೆ ನೀಡುವ ಮೂಲಕ ಅವರ ಬೆಳೆಗಳಲ್ಲಿ ಅದನ್ನು ಅಳವಡಿಸಿಕೊಳ್ಳಲು ಕ್ರಮಗೊಳ್ಳಲಾಗಿದೆ. ಸಂಸ್ಥೆ ರೈತರ ಸಹಕಾರದಿಂದ ಉತ್ತಮವಾಗಿ ನಡೆಯುತ್ತಿದ್ದು, ಮುಂದಿನ ವರ್ಷದಿಂದ ಸದಸ್ಯರಿಗೆ ಡಿವಿಡೆಂಟ್‌ ನೀಡಲು ತೀರ್ಮಾನಿಸಿದ್ದೇವೆ. ರೈತರ ಬೆಳೆಗಳನ್ನು ಸಂಗ್ರಹಿಸಲು ಸಂಸ್ಕರಣಾ ಘಟಕವನ್ನೂ ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸೊಲ್ಲಾಪುರ ದಾಳಿಂಬೆ ಸಂಶೋಧನಾ ಕೇಂದ್ರದ ಸಸ್ಯರೋಗ ಶಾಸ್ತ್ರದ ಹಿರಿಯ ವಿಜ್ಞಾನಿ ಡಾ.ಎನ್. ಮಂಜುನಾಥ್, ತಳಿಶಾಸ್ತ್ರ ಮತ್ತು ಸಸ್ಯ ಸಂತಾನೋತ್ಪತ್ತಿ ವಿಭಾಗದ ವಿಜ್ಞಾನಿ ಡಾ. ಶಿಲ್ಪಾ ಪರಶುರಾಮ್, ಹಿರಿಯ ವಿಜ್ಞಾನಿ ಡಾ.ಸೋಮನಾಥ್ ಸುರೇಶ್ ಪೊಕರೆ, ಹಾಸನದ ಜಂಟಿ ಕೃಷಿ ನಿರ್ದೇಶಕರಾದ ರಾಜು ಸುಲೋಚನಾ, ಚಿಕ್ಕಮಗಳೂರಿನ ಜಂಟಿ ಕೃಷಿ ನಿರ್ದೇಶಕಿ ಎಚ್.ಎಲ್.ಸುಜಾತಾ, ನಿರ್ದೇಶಕರಾದ ಮಂಜುನಾಥ್, ಮಹಾಬಲೇಶ್, ಯತೀಶ್, ದಿನೇಶ್ ಟಿ.ಬಿ ಕಾವಲು, ಯತೀಶ್ ಸೇರಿದಂತೆ ದಾಳಿಂಬೆ ಬೆಳೆಗಾರರು ಪಾಲ್ಗೊಂಡಿದ್ದರು.13 ಕೆಸಿಕೆಎಂ 6

ಚಿಕ್ಕಮಗಳೂರಿನ ಹೊರವಲಯದ ಬೈನರಿ ಎಕ್ಸೋಟಿಕ ರೆಸಾರ್ಟ್‌ನಲ್ಲಿ ಬುಧವಾರ ನಡೆದ ದಾಳಿಂಬೆ ತಾಂತ್ರಿಕ ಕಾರ್ಯಾಗಾರವನ್ನು ಎಸ್‌ಆರ್‌ಪಿಜಿ ಅಧ್ಯಕ್ಷ ಡಾ.ಎಚ್.ಆರ್.ಯೋಗೀಶ್ವರ್ ಉದ್ಘಾಟಿಸಿದರು. ಬಿ.ಎನ್‌. ಪ್ರಸಾದ್‌, ಡಾ. ಮಂಜುನಾಥ್‌ ಇದ್ದರು.