ಗ್ರಾಮೀಣದಲ್ಲಿ ಕುಡಿವ ನೀರಿನ ಯೋಜನೆ ಕಾಮಗಾರಿ ಚಾಲನೆಗೆ ಸೂಚಿಸಿ

| Published : Sep 30 2024, 01:32 AM IST

ಗ್ರಾಮೀಣದಲ್ಲಿ ಕುಡಿವ ನೀರಿನ ಯೋಜನೆ ಕಾಮಗಾರಿ ಚಾಲನೆಗೆ ಸೂಚಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾವತಿಯಲ್ಲಿ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಕಾಮಗಾರಿ ಕೈಗೊಳ್ಳಲು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಖ್ಯ ಅಭಿಯಂತರ ಎಜಾಜ್ ಹುಸೇನ್‌ಗೆ ಮನವಿ ಸಲ್ಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಭದ್ರಾವತಿ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಾಮಗಾರಿ ಕೈಗೊಳ್ಳಲು ಗುದ್ದಲಿ ಪೂಜೆ ಕೈಗೊಳ್ಳುವುದು ಹಾಗೂ ಭದ್ರಾನದಿಯಿಂದ ಪೈಪ್‌ಲೈನ್ ಮೂಲಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಅಗತ್ಯವಿರುವ ಕಾಮಗಾರಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನೊಳಗೊಂಡ ಯೋಜನಾ ವರದಿ (ಡಿಪಿಆರ್) ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆಯಿಂದ ಇಲಾಖೆ ಮುಖ್ಯ ಅಭಿಯಂತರ ಎಜಾಜ್ ಹುಸೇನ್ ಸಾಹೇಬ್‌ಗೆ ಮನವಿ ಸಲ್ಲಿಸಲಾಗಿದೆ.

ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಉಂಬ್ಲೆಬೈಲು, ಕಲ್ಲಹಳ್ಳಿ, ತಡಸ, ದೊಣಬಘಟ್ಟ, ಸಿಂಗನಮನೆ, ಕೂಡ್ಲಿಗೆರೆ, ಬಿಳಿಕಿ, ಬಾರಂದೂರು, ಕಂಬದಾಳ್ ಹೊಸೂರು, ಗ್ರಾಮ ಪಂಚಾಯತಿ ವ್ಯಾಪ್ತಿ ಹಳ್ಳಿಗಳ ಗ್ರಾಮಸ್ಥರಿಗೆ ಪರಿಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆಗಳ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದೆ. ಈ ಹಿನ್ನೆಲೆ ಶಿಷ್ಟಾಚಾರ ಪಾಲನೆ ಪ್ರಕಾರ ಗುದ್ದಲಿ ಪೂಜೆ ನೆರವೇರಿಸುವ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಲಾಗಿದೆ.

ದೊಣಬಘಟ್ಟ, ಬಿಳಿಕಿ, ತಡಸ, ಕಾಗೆಕೋಡಮಗ್ಗಿ ಮತ್ತು ನಾಗತಿಬೆಳಗಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಪರಿಶುದ್ಧವಾದ ಹಾಗೂ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡಲು ಪ್ರಸ್ತುತ ಕೆರೆಯ ನೀರಿನ ಸರಬರಾಜು ಬದಲಿಗೆ ನಗರಸಭೆ ವ್ಯಾಪ್ತಿ ಕಾಗದ ನಗರದ ಬಳಿ ಭದ್ರಾ ನದಿಯಿಂದ ನೀರನ್ನು ಪೈಪ್‌ಲೈನ್ ಮೂಲಕ ಒದಗಿಸಲು ಹಾಗೂ ಅವಶ್ಯಕವಿರುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚುವರಿ ಕುಡಿಯುವ ನೀರಿನ ಟ್ಯಾಂಕ್‌ಗಳ ನಿರ್ಮಾಣ ಮಾಡಲು ಸಂಪೂರ್ಣ ವಿವರಗಳನ್ನೊಳಗೊಂಡ ಯೋಜನಾ ವರದಿ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಲಾಗಿದೆ.

ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಚೇರ್ಮನ್, ಮಾಜಿ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್.ವೇಣುಗೋಪಾಲ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು, ಈ ನಡುವೆ ಮುಖ್ಯ ಅಭಿಯಂತರ ಎಜಾಜ್ ಹುಸೇನ್ ಸಾಹೇಬ್‌ ಕಾರ್ಯವೈಖರಿ ಹಾಗು ಭದ್ರಾವತಿ ಹಾಗು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತರುವಲ್ಲಿ ಹೆಚ್ಚಿನ ಶ್ರಮಿವಹಿಸಿರುವ ಹಿನ್ನೆಲೆ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ.ವಿ ಗಿರಿನಾಯ್ಡು, ದೊಣಬಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಜೀಬಾಸುಲ್ತಾನ್, ಉಪಾಧ್ಯಕ್ಷ ಜೋಹರ್‌ಬಾನು, ಮುಖಂಡರಾದ ಯೂನಸ್‌ಬೇಗ್, ಮಹಮ್ಮದ್ ಪಾರೂಕ್, ಖಾಸಿಂಸಾಬ್, ದೇವೇಂದ್ರಪ್ಪ ಮತ್ತು ಕಲ್ಲಹಳ್ಳಿ ಗ್ರಾಮಪಂಚಾಯತಿ ಸದಸ್ಯ ಧರ್ಮಪ್ಪ ಸೇರಿದಂತೆ ಇನ್ನಿತರರಿದ್ದರು.