ಸಾರಾಂಶ
ಕನ್ನಡಪ್ರಭವಾರ್ತೆ ಚಾಮರಾಜನಗರ
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಏ.26ರಂದು ಮತದಾನ ನಡೆಯಲಿದ್ದು, ಚುನಾವಣೆಯನ್ನು ಸುಸೂತ್ರವಾಗಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಅಗತ್ಯವಿರುವ ಎಲ್ಲಾ ಸಿದ್ದತಾ ಕಾರ್ಯಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ನೂತನ ಸಾಮಾನ್ಯ ವೀಕ್ಷಕ ಪಾರ್ಥ ಗುಪ್ತ ಅವರು ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಪೂರ್ವಸಿದ್ಧತೆ ಕುರಿತು ಚಾಮರಾಜನಗರ ಲೋಕಸಭಾ ಕ್ಷೇತ್ರವ್ಯಾಪ್ತಿಯ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಭೆಯ ಆರಂಭದಲ್ಲಿ ಜಿಲ್ಲಾ ಚುನಾವಣಾಧಿಕಾರಿದ ಶಿಲ್ಪಾನಾಗ್ ಲೋಕಸಭಾ ಸಾರ್ವತ್ರಿಕ ಚುನಾವಣೆ ಪೂರ್ವ ಸಿದ್ಧತೆಗಳ ಬಗ್ಗೆ ಸಾಮಾನ್ಯ ವೀಕ್ಷಕರಿಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಜಿಲ್ಲೆಯ ಭೌಗೋಳಿಕ ಪ್ರದೇಶ, ಕ್ಷೇತ್ರಕ್ಕೆ ಒಳಪಡುವ ವಿಧಾನಸಭೆಗಳ ಕ್ಷೇತ್ರವಾರು ಮಾಹಿತಿ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಜನಸಂಖ್ಯೆ, ಸಾಕ್ಷರತಾ ಪ್ರಮಾಣ, ಗ್ರಾಮಗಳು, ಗ್ರಾಪಂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು, ಮತಗಟ್ಟೆಗಳ, ಮತದಾರರ ಸಂಖ್ಯೆ, ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ಬಿ.ಎಲ್.ಒ. ಇತ್ಯಾದಿಗಳ ಕುರಿತು ಪ್ರಮುಖ ಅಂಕಿ ಅಂಶಗಳನ್ನು ಪವರ್ ಪಾಯಿಂಟ್ ಮೂಲಕ ವಿವರಿಸಿದರು.
ಲೋಕಸಭಾ ಕ್ಷೇತ್ರವ್ಯಾಪ್ತಿಯ ಮಾಹಿತಿ ಪಡೆದು ಬಳಿಕ ಮಾತನಾಡಿದ ಸಾಮಾನ್ಯ ವೀಕ್ಷಕರಾದ ಪಾರ್ಥ ಗುಪ್ತ ಅವರು ಮತದಾನಕ್ಕೆ ಇನ್ನು ಕೇವಲ 10 ದಿನಗಳು ಮಾತ್ರ ಬಾಕಿ ಇದ್ದು, ಈ ಅವಧಿಯಲ್ಲಿ ಚುನಾವಣಾ ಪ್ರಕ್ರಿಯೆಯ ಸಿದ್ದತೆಗಳ ಕೆಲಸ ಕಾರ್ಯಗಳಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಿ ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಚುನಾವಣೆಗೂ ಮುನ್ನ ಯಾವುದೇ ಗೊಂದಲಗಳಿಗೂ ಅವಕಾಶವಾಗದಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪೋಲಿಸ್ ವರಿಷ್ಠಾಧಿಕಾರಿಗಳ ಸಲಹೆ, ಮಾರ್ಗದರ್ಶನದೊಂದಿಗೆ ಅಧಿಕಾರಿಗಳು ಚುನಾವಣೆ ಸಿದ್ದರಾಗಬೇಕಿದೆ ಎಂದರು.ಚುನಾವಣೆಗೆ ನಿಯೋಜಿತರಾಗಿರುವ ಎಲ್ಲಾ ಅಧಿಕಾರಿಗಳು ಚುನಾವಣೆಯ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡಬೇಕು. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿನ ಶೇಕಡಾವಾರು ಮತದಾನದ ಪ್ರಮಾಣ ಕಡಿಮೆ ಇರುವುದರಿಂದ ಆಯಾ ಮತಗಟ್ಟೆಗಳಿಗೆ ಭೇಟಿ ನೀಡಿ ಹಲವು ಸ್ವೀಪ್ ಕಾರ್ಯಕ್ರಮಗಳ ಜನಜಾಗೃತಿ ಮೂಡಿಸಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಅಧಿಕಾರಿಗಳು ಮುಂದಾಗಬೇಕು. ಶೇಕಡಾ 100 ರಷ್ಟು ಮತದಾನವಾಗುವಂತೆ ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಚಿಸಿದರು.ಮತಗಟ್ಟೆಗಳ ಸ್ಥಳ ಹಾಗೂ ಸಂಖ್ಯೆಗನುಗುಣವಾಗಿ ಸಾರಿಗೆ ಸಂಪರ್ಕ, ಮೂಲಭೂತ ಸೌಕರ್ಯಗಳು ಸಮರ್ಪಕವಾಗಿರಬೇಕು. ವಲ್ನರಬಲ್ ಹಾಗೂ ಕ್ರಿಟಿಕಲ್ ಮತಗಟ್ಟೆಗಳ ಮಾಹಿತಿ ಸಂಗ್ರಹಿಸಿ ಮತಗಟ್ಟೆಗಳಲ್ಲಿ ಮತದಾರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆಗಳನ್ನು ಮಾಡಿಕೊಡಬೇಕು. ಒಂದು ಕಟ್ಟಡ ಅಥವಾ ಒಂದು ಸ್ಥಳದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾಪಿಸಿರುವ ಮತಗಟ್ಟೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಮತದಾನ ಕೇಂದ್ರವು 2 ಕಿ.ಮೀ ಒಳಗೆ ಇರುವಂತೆ ಪರಿಶೀಲಿಸಿ ಖಚಿತಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಧಾನಸಭಾ ಕ್ಷೇತ್ರದ ಕೇಂದ್ರ ಭಾಗದಿಂದ ಪ್ರತಿ ಮತಗಟ್ಟೆಗಳಿಗಿರುವ ದೂರ, ಮತಗಟ್ಟೆ ತಲುಪಲು ಇರುವ ಸಂಪರ್ಕಗಳ ಮಾಹಿತಿ ಹಾಗೂ ಮತಗಟ್ಟೆ ತಲುಪಲು ಅಗತ್ಯವಿರುವ ವಾಹನದ ವ್ಯವಸ್ಥೆಗಳನ್ನು ಪರಿಶೀಲಿಸಿಕೊಳ್ಳಬೇಕು. ವಿಧಾನಸಭಾ ಕ್ಷೇತ್ರವಾರು ನೇಮಕ ಮಾಡಲಾಗಿರುವ ಸೆಕ್ಟರ್ ಅಧಿಕಾರಿಗಳಿಗೆ ನೀಡಲಾಗಿರುವ ರೂಟ್ ಮ್ಯಾಪ್ ವಾಹನಗಳು ಸುಸ್ಥತಿಯಲ್ಲಿದ್ದು, ಹೆಚ್ಚುವರಿ ವಾಹನಗಳ ಅವಶ್ಯವಿದ್ದರೆ ವಾಹನಗಳ ನಿಯೋಜನೆ ಮಾಡಬೇಕು. ಮತದಾನ ಕೇಂದ್ರಗಳಲ್ಲಿ ವಿದ್ಯುತ್ ಸಂಪರ್ಕ ಸಮರ್ಪಕವಾಗಿ ಇರುವ ಬಗ್ಗೆ ಹಾಗೂ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಯಾವುದೇ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಮತದಾನ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವ ಹಾಗೂ ಕಟ್ಟಡ ಸುಸ್ತಿತಿಯಲ್ಲಿರುವ ಕುರಿತು ಸ್ಥಳ ಪರಿಶೀಲನೆ ನಡೆಸಬೇಕು. ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 353 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆ ಎಂದು ಗುರುತಿಸಿದ್ದು ಸದರಿ ಮತಗಟ್ಟೆಗಳಿಗೆ ವೈಯಕ್ತಿಕವಾಗಿ ಭೇಟಿ ಮಾಡಿ ಸದರಿ ಮತಗಟ್ಟೆ ವ್ಯಾಪ್ತಿಯ ಮತದಾರರಿಗೆ ಧೈರ್ಯ ಹಾಗೂ ಭದ್ರತೆ ಒದಗಿಸುವ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ಚುನಾವನಾ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮಗಳು, ಮತದಾನ ಪ್ರಮಾಣ ಹೆಚ್ಚಿಸಲು ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಸ್ವೀಪ್ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಾಮಾನ್ಯ ವೀಕ್ಷಕ ಪಾರ್ಥ ಗುಪ್ತ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿಸಲು ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು.ಎಡಿಸಿ ಗೀತಾ ಹುಡೇದ್, ಎಸ್ಪಿ ಪದ್ಮಿನಿ ಸಾಹು, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಪಿ ಲಕ್ಷ್ಮ, ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು, ನೋಡೆಲ್ ಅಧಿಕಾರಿಗಳು, ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.