ನರಸಿಂಹರಾಜಪುರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಇಲಾಖೆ ಜಿಲ್ಲಾ ಪಂಚಾಯ್ತಿಗೆ ಆ.13 ರಂದು ಆದೇಶ ಹೊರಡಿಸಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಟ್ಟಿದ ಕಟ್ಟಡ, ಮನೆಗಳ ತೆರಿಗೆ ವ್ಯಾಪ್ತಿಗೆ ಒಳಪಟ್ಟ ಆಸ್ತಿಗಳನ್ನು ಕೈ ಬಿಡುವಂತೆ ಆದೇಶಿಸಿದೆ ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಂಚಿನ ಮನೆ ರಾಘವೇಂದ್ರ ಆರೋಪಿಸಿದರು.
ಹಂಚಿನ ಮನೆ ರಾಘವೇಂದ್ರ ಆರೋಪ । ವಿರೋಧಿಸಿ ಅ.7 ರಂದು ತಾಲೂಕು ಕಚೇರಿ ಎದುರು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಆಹೋ ರಾತ್ರಿ ಧರಣಿ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಇಲಾಖೆ ಜಿಲ್ಲಾ ಪಂಚಾಯ್ತಿಗೆ ಆ.13 ರಂದು ಆದೇಶ ಹೊರಡಿಸಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಟ್ಟಿದ ಕಟ್ಟಡ, ಮನೆಗಳ ತೆರಿಗೆ ವ್ಯಾಪ್ತಿಗೆ ಒಳಪಟ್ಟ ಆಸ್ತಿಗಳನ್ನು ಕೈ ಬಿಡುವಂತೆ ಆದೇಶಿಸಿದೆ ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಂಚಿನ ಮನೆ ರಾಘವೇಂದ್ರ ಆರೋಪಿಸಿದರು.
ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದಿನಿಂದಲೂ ಗ್ರಾಮಗಳಲ್ಲಿ ಮನೆ ಕಟ್ಟಿಕೊಂಡವರಿಗೆ ಗ್ರಾಮ ಪಂಚಾಯಿತಿ ಕಂದಾಯ ವಿಧಿಸುತ್ತಿತ್ತು. ಆದರೆ, ಈಗ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶಿಸಿ 2025 ರ ಅನ್ವಯ ತೆರಿಗೆ ನಿರ್ಧಾರ ಮತ್ತು 2.0.ತಂತ್ರಾಂಶದಿಂದ ಆಸ್ತಿ ಕೈ ಬಿಡಬೇಕು ಎಂದು ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದೆ.ಈ ಬಗ್ಗೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಕಳೆದ 3 ದಿನದ ಹಿಂದೆ ಅಧಿವೇಶನ ನಡೆವ ಸಂದರ್ಭದಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ. ಈ ಸುತ್ತೋಲೆ ಬಂದು ಒಂದೂವರೆ ತಿಂಗಳ ಕಳೆದರೂ ಶೃಂಗೇರಿ ಕ್ಷೇತ್ರದ ಶಾಸಕರು ಎಲ್ಲೂ ಪ್ರಸ್ತಾಪ ಮಾಡುತ್ತಿಲ್ಲ. ಇದನ್ನು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಖಂಡಿಸುತ್ತದೆ ಎಂದರು.
ಈ ಸುತ್ತೋಲೆ ಪ್ರಕಾರ ರಾಜ್ಯ ಅಥವಾ ಕೇಂದ್ರ ಮತ್ತು ಸ್ಥಳೀಯ ಸಂಸ್ಥೆಗಳ ಭೂಮಿ ಮತ್ತು ನಿವೇಶನಗಳಲ್ಲಿ ನಿಯಮ ಬಾಹಿರ ವಾಗಿ ನಿರ್ಮಿಸಲ್ಪಟ್ಟ ಕಟ್ಟಡ ಅಥವಾ ನಿವೇಶನ ತೆರಿಗೆ ವ್ಯಾಪ್ತಿಗೆ ತರಲು ಅವಕಾಶವಿಲ್ಲ. ಈಗಾಗಲೇ ಗ್ರಾಪಂ ವ್ಯಾಪ್ತಿ ಯಲ್ಲಿ ತೆರಿಗೆ ವ್ಯಾಪ್ತಿಯಲ್ಲಿ ಒಳಪಟ್ಟ ಆಸ್ತಿಗಳನ್ನು ಕೈ ಬಿಡುವಂತೆ ಆದೇಶಿಸಲಾಗಿದೆ ಎಂದು ದೂರಿದರು.ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಈ ಆದೇಶ ಮಾಡಿದ್ದು ಅವರು ಯಾವುದೇ ಇಲಾಖೆಗೆ ಬಂದರೂ ರೈತರನ್ನು ಟಾರ್ಗೆಟ್ ಮಾಡುತ್ತಾರೆ. ಈ ಹಿಂದೆ ಅರಣ್ಯ ಸಚಿವರಾಗಿದ್ದಾಗ ರೈತರನ್ನು ಅರಣ್ಯದಿಂದ ತೆರವು ಗೊಳಿಸಲು ಆದೇಶ ಮಾಡಿದ್ದರು. ಮುಖ್ಯ ಮಂತ್ರಿಗಳು ಈಶ್ವರ ಖಂಡ್ರೆ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ ಫಾರಂ ನಂ. 50,53 ಹಾಗೂ 94ಸಿ, 94 ಸಿಸಿಸಿ ದಾಖಲೆ ನೀಡಬೇಕು ಎಂದು ಕಂದಾಯ ಇಲಾಖೆಗೆ ಅರ್ಜಿ ನೀಡಿ ದ್ದೇವೆ. ಮುಂದಿನ ದಿನಗಳಲ್ಲಿ ರೈತರ ಪರವಾಗಿ ಈ ದಾಖಲೆ ಇಟ್ಟುಕೊಂಡು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಕಾನೂನು ಹೋರಾಟ ಮಾಡುತ್ತೇವೆ ಎಂದರು.ಬರಗಾಲ ಬಂದ ರೈತರ ಖಾತೆಗೆ ₹2500 ಪರಿಹಾರ ನೀಡುತ್ತೇವೆ ಎಂದು ಅಧಿವೇಶನದಲ್ಲಿ ಸರ್ಕಾರ ಘೋಷಣೆ ಮಾಡಿದೆ. ಈ ಪರಿಹಾರ ರೈತರಿಗೆ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಕನಿಷ್ಠ ₹50 ಸಾವಿರದಿಂದ 1 ಲಕ್ಷ ಪರಿಹಾರ ನೀಡಬೇಕು ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಹಕ್ಕೊತ್ತಾಯ ಮಾಡುತ್ತಿದೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ತಾಲೂಕು ಅಧ್ಯಕ್ಷ ಕಿಚೇಬಿ ಪ್ರದೀಪ್, ಕ್ಷೇತ್ರ ಸಂಚಾಲಕ ಅಶೋಕ್ ನೀಲುವಾನಿ, ಕ್ಷೇತ್ರ ವಕ್ತಾರರಾದ ಪ್ರಮೋದ್ ನೀಲುವಾನಿ, ವಿಕಾಸ್ ಬಂಗುವಾನಿ ಇದ್ದರು.- ಬಾಕ್ಸ್--
ರೈತರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ಗದ್ದೇಮನೆ ವಿಶ್ವನಾಥ್ ಹಾಗೂ ಗೌರವಾಧ್ಯಕ್ಷ ಶೆಟ್ಟಿಗದ್ದೆ ರಾಮಸ್ವಾಮಿ ನೇತೃತ್ವದಲ್ಲಿ ಅ.7 ರ ಬುಧವಾರ ಎನ್.ಆರ್.ಪುರ ತಾಲೂಕು ಕಚೇರಿ ಎದುರು ಆಹೋ ರಾತ್ರಿ ಧರಣಿ ನಡೆಸಲು ತೀರ್ಮಾನಿಸಿದ್ದೇವೆ. ಈ ಪ್ರತಿಭಟನೆಗೆ ಎಲ್ಲಾ ರಾಜಕೀಯ ಪಕ್ಷಗಳು, ರೈತ ಸಂಘಟನೆ ಹಾಗೂ ವಿವಿಧ ಸಂಘಟನೆಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.