ಸ್ವ- ಸಹಾಯ ಸಂಘದ ಸದಸ್ಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚನೆ

| Published : Jan 11 2025, 12:48 AM IST

ಸ್ವ- ಸಹಾಯ ಸಂಘದ ಸದಸ್ಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಜ. 15ರಂದು ನಡೆಯುವ ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ನಡೆಯುವ ಸರಸ್ ಮೇಳದಲ್ಲಿ ಭಾಗವಹಿಸುವ ರಾಜ್ಯದ ವಿವಿಧ ಜಿಲ್ಲೆಯ ಸ್ವ- ಸಹಾಯ ಸಂಘದ ಸದಸ್ಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಸೂಚಿಸಿದ್ದಾರೆ. ಪೂರ್ವಭಾವಿ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೊಪ್ಪಳ: ಜ. 15ರಂದು ನಡೆಯುವ ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ನಡೆಯುವ ಸರಸ್ ಮೇಳದಲ್ಲಿ ಭಾಗವಹಿಸುವ ರಾಜ್ಯದ ವಿವಿಧ ಜಿಲ್ಲೆಯ ಸ್ವ- ಸಹಾಯ ಸಂಘದ ಸದಸ್ಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಸೂಚಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಶ್ರೀ ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದ ವಿವಿಧ 16 ಜಿಲ್ಲೆಗಳಿಂದ ಬರುವ ಸ್ವ- ಸಹಾಯ ಸಂಘದ ಸದಸ್ಯರು ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಮಳಿಗೆಗಳನ್ನು ಹಾಕಿ ತಮ್ಮ ಉತ್ಪನ್ನ ಮಾರಾಟ ಮಾಡುವರು. ಅವರಿಗೆ ಉಳಿದುಕೊಳ್ಳಲು ಸೂಕ್ತ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಅವರಿಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರಸ್ ಮೇಳದ ಮಳಿಗೆಗಳಿಗೆ ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಸೂಕ್ತ ಜಾಗ ನೀಡಿದ್ದಾರೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸೇರಿದಂತೆ ಇತರ ವಿವಿಧ ಇಲಾಖೆಯ ಮಳಿಗೆಗಳನ್ನು ಸಹ ಹಾಕಲಾಗುತ್ತದೆ. ನಮ್ಮ ಜಿಲ್ಲೆಯ ಸ್ವ- ಸಹಾಯ ಸಂಘದ ಸದಸ್ಯರಿಗಿಂತ ಬೇರೆ ಜಿಲ್ಲೆಯಿಂದ ಬರುವ ನಮ್ಮ ಅತಿಥಿಗಳಿಗೆ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಹೇಳಿದರು.

ಕಳೆದ ಸಲ ಸ್ವ-ಸಹಾಯ ಸಂಘದ ಸದಸ್ಯರು ಯಾವ-ಯಾವ ವಸತಿ ನಿಲಯಗಳಲ್ಲಿ ಉಳಿದುಕೊಂಡಿದ್ದರೋ ಅಲ್ಲಿಯೇ ಅವರಿಗೆ ಇರಲು ವ್ಯವಸ್ಥೆ ಮಾಡಿ ಮತ್ತು ಕಳೆದ ಸಲ ಏನಾದರೂ ಸಮಸ್ಯೆಗಳಾಗಿದ್ದರೆ ಅದು ಈ ಸಲ ಮರುಕಳಿಸಿದಂತೆ ನೋಡಿಕೊಳ್ಳಬೇಕು. ಒಂದು ವಸತಿ ನಿಲಯಗಳಲ್ಲಿ ಎಷ್ಟು ಜನ ಇರಬಹುದು ಎಂಬುದರ ಅಂದಾಜುಪಟ್ಟಿ ತಯಾರಿಸಿ ಹಾಗೂ ಸ್ವ ಸಹಾಯ ಸಂಘದ ಎಲ್ಲ ಮಳಿಗೆಗಳಲ್ಲಿ ಕ್ಯೂ-ಆರ್ ಕೋಡ್‌ ಉಪಯೋಗಿಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ., ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಲೀಡ್ ಬ್ಯಾಂಕ್ ಮ್ಯಾನೇಜರ್ ವೀರೇಂದ್ರಕುಮಾರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ. ಗವಿಶಂಕರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ನಾಗಮಣಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಜ್ಮೀರ ಅಲಿ ಇದ್ದರು.