ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಸಲು ಸೂಚನೆ: ಶಾಸಕ ಕೆ.ಎಂ.ಉದಯ್

| Published : Aug 09 2024, 12:36 AM IST

ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಸಲು ಸೂಚನೆ: ಶಾಸಕ ಕೆ.ಎಂ.ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ಮದ್ದೂರು ಕ್ಷೇತ್ರ ವ್ಯಾಪ್ತಿಯ ಮದ್ದೂರು ಕೆರೆ, ಸೂಳೆಕೆರೆ, ಆತಗೂರು ಹೋಬಳಿಯ ಕೆರೆಗಳು ಸೇರಿದಂತೆ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ವಿ.ಸಿ.ನಾಲೆ ಕೊನೆ ಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂದು ರೈತರು ದೂರುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಜೊತೆಗೆ ವಿ.ಸಿ.ನಾಲೆ ಕೊನೆ ಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿ.ಸಿ.ನಾಲೆ ಕೊನೆ ಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂದು ರೈತರು ದೂರುತ್ತಿದ್ದಾರೆ ಎಂದರು.

ಈ ಹಿನ್ನೆಲೆಯಲ್ಲಿ ನಾನು ಈಗಾಗಲೇ ತಮ್ಮ ಕಚೇರಿಯಲ್ಲಿ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ರಘುರಾಮನ್ ಹಾಗೂ ಕಾರ್ಯಪಾಲಕ ಎಂಜಿನಿಯರ್ ನಂಜುಂಡೇಗೌಡ ಅವರನ್ನು ಕಚೇರಿಗೆ ಕರೆಸಿ ಸಭೆ ನಡೆಸುವ ಮೂಲಕ ವಿ.ಸಿ.ನಾಲೆ ಕೊನೆ ಭಾಗದ ಜಮೀನುಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವುದರ ಜೊತೆಗೆ ಅಧಿಕಾರಿಗಳೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ನೀರು ತಲುಪಿ ಇರುವ ಬಗ್ಗೆ ಖಚಿತ ಪಡಿಸಿಕೊಳ್ಳುವಂತೆ ತಾಕೀತು ಮಾಡಲಾಗಿದೆ ಎಂದರು.

ಮದ್ದೂರು ಕ್ಷೇತ್ರ ವ್ಯಾಪ್ತಿಯ ಮದ್ದೂರು ಕೆರೆ, ಸೂಳೆಕೆರೆ, ಆತಗೂರು ಹೋಬಳಿಯ ಕೆರೆಗಳು ಸೇರಿದಂತೆ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

ಪ್ರಸಕ್ತ ಸಾಲಿನ ಮುಂಗಾರು ಬೆಳೆಗೆ ಕಟ್ಟು ಪದ್ಧತಿಯಲ್ಲಿ ನೀರು ಬಿಡುವ ಕ್ರಮ ಅವೈಜ್ಞಾನಿಕ. 18 ದಿನಗಳ ಕಾಲ ನೀರು ಹರಿಸಿ ನಂತರ ನೀರು ನಿಲ್ಲಿಸಿದರೆ ರೈತರು ಬೆಳೆ ಬೆಳೆಯುವುದು ಅಸಾಧ್ಯ ಎಂಬ ಅಂಶವನ್ನು ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಟ್ಟು ನಿರಂತರವಾಗಿ ಮುಂಗಾರು ಬೆಳೆಗೆ ನೀರು ಕೊಡಿಸಲು ಅಗತ್ಯ ಕ್ರಮ ವಹಿಸಲಾಗುವುದು. ರೈತರು ನಿರಾತಂಕವಾಗಿ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಮಾಡಿದರು.