ಸಾರಾಂಶ
ನಿಗಮದ ಎಲ್ಲ ಶಾಖೆಗಳ ಶಾಖಾಧಿಕಾರಿಗಳ ಸಭೆ ನಡೆಸಿದ ಮಾಲಾ, 2024-25ನೇ ವರ್ಷದಲ್ಲಿ ನಿಗಮದಿಂದ ಕರಾವಳಿ ಮತ್ತು ಒಳನಾಡು ವಿಭಾಗದ ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ನೂತನ ಯೋಜನೆಗಳನ್ನು ಜಾರಿಗೊಳಿಸಲು ಮತ್ತು ಪ್ರಸ್ತುತ ಯೋಜನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ನಾಡದೋಣಿಗಳ ನಿಲುಗಡೆಗೆ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ಕೈಗೊಂಡಿರುವ ತೇಲುವ ಜಟ್ಟಿ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ನಿಗಮದ ಅಧ್ಯಕ್ಷೆ ಮಾಲಾ ಬಿ. ರಾವ್ ಸೂಚಿಸಿದ್ದಾರೆ.ಮಂಗಳೂರಿನಲ್ಲಿರುವ ನಿಗಮದ ಕೇಂದ್ರ ಕಚೇರಿಗೆ ಭೇಟಿ ನೀಡಿದ ಅವರು, ಮೀನುಗಾರಿಕಾ ಬಂದರು, ಮಂಜುಗಡ್ಡೆ ಸ್ಥಾವರ, ಡೀಸೆಲ್ ಬಂಕ್, ತೇಲುವ ಜೆಟ್ಟಿ ಕಾಮಗಾರಿ ಸ್ಥಿತಿಗತಿ ಪರಿಶೀಲನೆ ನಡೆಸಿ ಮಾತನಾಡಿದರು. ವಿಳಂಬವಿಲ್ಲದೆ ಕಾಮಗಾರಿ ಮುಕ್ತಾಯಗೊಳಿಸಿ ನಾಡದೋಣಿ ಮೀನುಗಾರರಿಗೆ ಅನುಕೂಲ ಮಾಡಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರು.
ಬಳಿಕ ನಿಗಮದ ಎಲ್ಲ ಶಾಖೆಗಳ ಶಾಖಾಧಿಕಾರಿಗಳ ಸಭೆ ನಡೆಸಿದ ಮಾಲಾ, 2024-25ನೇ ವರ್ಷದಲ್ಲಿ ನಿಗಮದಿಂದ ಕರಾವಳಿ ಮತ್ತು ಒಳನಾಡು ವಿಭಾಗದ ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ನೂತನ ಯೋಜನೆಗಳನ್ನು ಜಾರಿಗೊಳಿಸಲು ಮತ್ತು ಪ್ರಸ್ತುತ ಯೋಜನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಿಗಮದ ವತಿಯಿಂದ ನಾಡದೋಣಿಗಳಿಗೆ ಅವಶ್ಯವಿರುವ ಸೀಮೆಎಣ್ಣೆ ವಿತರಣೆಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಹೊನ್ನಾವರ ಬಂದರಿನಲ್ಲಿ ಮೀನುಗಾರ ಬೋಟುಗಳಿಗೆ ಕರರಹಿತ ಡೀಸೆಲ್ ವಿತರಿಸಲು ಹೊಸ ಡೀಸೆಲ್ ಬಂಕ್‌ನ್ನು ಮೀನುಗಾರಿಕಾ ಋತು ಪ್ರಾರಂಭವಾಗುವ ಮುಂಚೆಯೇ ಪ್ರಾರಂಭಿಸಲು ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರು.
ಹೊಸ ಮೀನು ಮಾರುಕಟ್ಟೆ:ಮೀನು ಮಾರಾಟಕ್ಕೆ ನೈರ್ಮಲ್ಯಕರ ವಾತಾವರಣ ಕಲ್ಪಿಸುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಹೊಸದಾಗಿ ಮೀನು ಮಾರುಕಟ್ಟೆಗಳನ್ನು ಸ್ಥಾಪನೆ ಮಾಡಲು ಯೋಜಿಸಲಾಗಿದೆ ಎಂದು ಇದೇ ಸಂದರ್ಭ ಅವರು ಮಾಹಿತಿ ನೀಡಿದರು.
ನಂತರ ಉಳ್ಳಾಲ ಮಹಿಳಾ ಮೀನುಗಾರಿಕಾ ಸಹಕಾರಿ ಸಂಘದ ಕಚೇರಿಗೆ ಭೇಟಿ ನೀಡಿ, ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರೊಂದಿಗೆ ಸಂವಾದ ನಡೆಸಿದರು. ಸಂಘದ ಅಧ್ಯಕ್ಷೆ ಜಾನಕಿ ಪುತ್ರನ್, ಉಪಾಧ್ಯಕ್ಷೆ ಮೀನಾಕ್ಷಿ, ನಿರ್ದೇಶಕರಾದ ನಾರಾಯಣಿ, ರೋಹಿಣಿ, ಸಂಘದ ಕಾರ್ಯದರ್ಶಿ ಉಮಾವತಿ ಮತ್ತಿತರರು ಇದ್ದರು.