ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ವೇಳಾಪಟ್ಟಿಯಂತೆ ಕುಡಿಯುವ ನೀರು ಪೂರೈಕೆಯಾಗಬೇಕು. ತಾಂತ್ರಿಕ ಕಾರಣದಿಂದ ನಲ್ಲಿ ಮೂಲಕ ನೀರು ಬಿಡುಗಡೆ ಮಾಡಲು ಸಾಧ್ಯವಾಗದಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವುದು ಪಾಲಿಕೆ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಗುರುವಾರ ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ, ಕೆ.ಯು.ಐ.ಡಿ.ಎಫ್.ಸಿ., ಎಲ್ & ಟಿ ಕಂಪನಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಬೇಸಿಗೆ ಜೊತೆಗೆ ಹಬ್ಬ-ಹರಿದಿನಗಳ ಸಮಯ ಇದಾಗಿದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ನೀರು ಬಿಡುಗಡೆ ಮಾಡದಿದ್ದಲ್ಲಿ ಸಾರ್ವಜನಿಕರಿಗೆ ಅನಾನುಕೂಲತೆ ಹೆಚ್ಚಾಗುತ್ತದೆ. ಅಧಿಕಾರಿಗಳು ಇದನ್ನರಿತು ಕೆಲಸ ಮಾಡಬೇಕು ಎಂದರು.
ಕಲಬುರಗಿ ನಗರದ ವಾರ್ಡ್ ಸಂಖ್ಯೆ 14, 15, 31, 32, 47, 48 ಸೇರಿದಂತೆ ಒಟ್ಟಾರೆ 11 ವಾರ್ಡ್‌ಗಳಲ್ಲಿ ವೇಳಾಪಟ್ಟಿ ಪ್ರಕಾರ ನೀರು ಬಿಡುಗಡೆ ಮಾಡುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ. ನೀರು ಬಿಡುಗಡೆ ಮಾಡುವ ವೇಳಾಪಟ್ಟಿಯನ್ನು ಸಾರ್ವಜನಿಕರಿಗೆ ಮೊದಲೇ ತಿಳಿಸಬೇಕು. ಅದರಂತೆ ನೀರು ಪೂರೈಸಬೇಕು ಎಂದು ಪಾಲಿಕೆ ಅಧಿಕಾರಿಗಳ ಡಿ.ಸಿ. ಅವರು ನಿರ್ದೇಶನ ನೀಡಿದರು.ಬೆಂಗಳೂರಲ್ಲಿ ಇತ್ತೀಚೆಗೆ ಕಲುಷಿತ ನೀರು ಸೇವನೆಯಿಂದ ಕಾಲೆರಾ ಪ್ರಕರಣ ಬೆಳಕಿಗೆ ಬರುತ್ತಿದ್ದು, ಇಲ್ಲಿ ಇದು ಮರುಕಳಿಸದಂತೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಶುದ್ಧೀಕರಣಗೊಂಡ ಕುಡಿಯುವ ನೀರು ಮಾತ್ರ ಪೂರೈಸಬೇಕು. ಶುದ್ಧೀಕರಣ ಘಟಕಕ್ಕೆ ಅಧಿಕಾರಿಗಳು ಆಗಾಗ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಪರಿಶೀಲಿಸಬೇಕು ಎಂದರು.
ಕುರಿಕೋಟಾ ಇನ್‍ಟೇಕ್‍ನಲ್ಲಿ ಲೀಕೇಜ್ ಕಾರಣ ನಗರಕ್ಕೆ ಕಾಲಮಿತಿಯಲ್ಲಿ ನೀರು ಪೂರೈಕೆ ಮಾಡಲು ಆಗುತ್ತಿಲ್ಲ ಎಂಬ ಪಾಲಿಕೆ ಅಧಿಕಾರಿಗಳು ಡಿ.ಸಿ. ಗಮನಕ್ಕೆ ತಂದರು. ಈ ಕುರಿತು ಮಾತನಾಡಿದ ಡಿ.ಸಿ. ಅವರು, ಕೂಡಲೆ ಶನಿವಾರದೊಳಗೆ ಲೀಕೇಜ್ ದುರಸ್ತಿ ಮಾಡಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ನೀರು ಮಿತವಾಗಿ ಬಳಸಿ:
ಭೀಕರ ಬರಗಾಲ ಎದುರಾಗಿದೆ. ಎಲ್ಲೆಡೆ ನೀರಿನ ಸಮಸ್ಯೆ ಕಂಡುಬರುತ್ತಿದ್ದು, ಸಾರ್ವಜನಿಕರು ಕುಡಿಯುವ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು. ಅವಶ್ಯಕತೆ ಅನುಗುಣವಾಗಿ ಮಿತವಾಗಿ ನೀರು ಬಳಸಬೇಕು. ಜೀವನಕ್ಕೆ ಜೀವ ಜಲ ತುಂಬಾ ಅವಶ್ಯಕ, ಇದನ್ನು ಸಮರ್ಪಕ ರೀತಿಯಲ್ಲಿ ಉಪಯೋಗಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಯಾ ತರನ್ನುಮ್ ಅವರು ಜಿಲ್ಲೆಯ ಜನತೆಯಲ್ಲ್ಲಿ ಮನವಿ ಮಾಡಿದ್ದಾರೆ.ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ.ಜಾಧವ, ಕೆ.ಯು.ಐ.ಎಫ್.ಡಿ.ಸಿ. ಕಾರ್ಯನಿರ್ವಾಹಕ ಅಭಿಯಂತ ಅಹ್ಮದ್ ಹುಸೇನ್, ಎಲ್ & ಟಿ ಕಂಪನಿಯ ಟೀಮ್ ಲೀಡರ್ ಕುಮಾರೇಶ, ಸ್ನೆಕ್ ಕನ್ಸಲಟೆನ್ಸಿಯ ರಂಗಧಾಮ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.
ನೀರನ್ನು ಮಿತವಾಗಿ ಬಳಸಲು ಸೂಚನೆಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ನೀರಿನ ಮೂಲಗಳಾದ ಭೀಮಾ ನದಿ ಹಾಗೂ ಬೆಣ್ಣೆತೋರಾ ನದಿನಗಳಲ್ಲಿ ಪ್ರತಿದಿನ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಆದ್ದರಿಂದ ನಗರದ ಸಾರ್ವಜನಿಕರು ಅನಾವಶ್ಯಕವಾಗಿ ರಸ್ತೆ ಹಾಗೂ ವಾಹನ ತೊಳೆಯಬಾರದು ಮತ್ತು ನೀರು ಪೋಲಾಗದಂತೆ ನೋಡಿಕೊಳ್ಳಬೇಕೆಂದು ಕಲಬುರಗಿ ಕೆಯುಡಬ್ಲ್ಯೂಎಸ್‍ಎಂಸಿ-ಕೆಯುಐಡಿಎಫ್‍ಸಿ ಯೋಜನಾ ಘಟಕದ ಕಾರ್ಯಪಾಲಕ ಅಭಿಯಂತರರು ಮನವಿ ಮಾಡಿದ್ದಾರೆ.ಕಲಬುರಗಿ ನಗರದಲ್ಲಿ ನೀರಿನ ಕೊರತೆ ಇರುವುದರಿಂದ ಅವಶ್ಯಕತೆಗೆ ಅನುಗುಣವಾಗಿ ಟ್ಯಾಂಕರ್ ಮೂಲಕ ನಗರದ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ಗ್ರಾಹಕರು ಟ್ಯಾಂಕರ್ ಮೂಲಕ ಬಂದಂತಹ ನೀರನ್ನು ತಮ್ಮ ಮನೆಯಲ್ಲಿನ ಸಂಪಿನಲ್ಲಿ ತುಂಬಿಸಿಕೊಳ್ಳಬಾರದು ಹಾಗೂ ಎಲ್ಲರಿಗೂ ಸರಿ ಸಮಾನವಾಗಿ ನೀರು ಸಿಗುವಂತೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ನಗರದ ಸಾರ್ವಜನಿಕರು ನೀರಿನ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಲು ಗ್ರಾಹಕರ ಸೇವಾ ಕೇಂದ್ರಕ್ಕೆ ಅಥವಾ ದೂ. 1800 425 8247 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.