ಗದಗ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಸಂಬಂಧಿತ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ಗದಗ: ಗದಗ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಸಂಬಂಧಿತ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಣ್ಗಾವಲು ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳು, ಹಾವು ಕಡಿತಕ್ಕೆ ನೀಡುವ ಆ್ಯಂಟಿ ಸ್ನೇಕ್ ವೆನಮ್ ಹಾಗೂ ಪ್ರಾಣಿ ಕಡಿತಕ್ಕೆ ನೀಡುವ ಆ್ಯಂಟಿ ರೇಬೀಸ್ ಲಸಿಕೆ ಮತ್ತು ಇಮ್ಯುನೋಗ್ಲೋಬ್ಯುಲಿನ್ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.ಜಿಲ್ಲೆಯಲ್ಲಿ 2026ರ ಜನವರಿಯಿಂದ ಜುಲೈವರೆಗೆ ವರದಿಯಾದ ಸಾಂಕ್ರಾಮಿಕ ರೋಗಗಳ ವಿವರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. 2140 ಕರುಳುಬೇನೆ, 33 ಡೆಂಘೀ, 8 ಚಿಕೂನ್ ಗುನ್ಯಾ, 5 ಮಲೇರಿಯಾ, 10 ಆನೆಕಾಲು ರೋಗ, 10 ಇನ್‌ಫ್ಲುಯೆಂಜಾ ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ 5805 ನಾಯಿ ಕಡಿತ, 1319 ಇತರ ಪ್ರಾಣಿ ಕಡಿತ ಹಾಗೂ 213 ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, 2 ಸಂಶಯಾಸ್ಪದ ರೇಬೀಸ್ ಸಾವು ಮತ್ತು 3 ಹಾವು ಕಡಿತದ ಸಾವುಗಳು ಸಂಭವಿಸಿವೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಕುಡಿಯುವ ನೀರಿನ ಶುದ್ಧತೆ, ಸೊಳ್ಳೆ ನಿಯಂತ್ರಣ, ಹಾವು ಮತ್ತು ಪ್ರಾಣಿ ಕಡಿತದ ಕುರಿತು ಜನಜಾಗೃತಿ ಆಂದೋಲನಗಳನ್ನು ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಪ್ರಾಣಿ ಕಡಿತಕ್ಕೊಳಗಾದ ತಕ್ಷಣ ಗಾಯವನ್ನು ಕನಿಷ್ಠ 15 ನಿಮಿಷಗಳ ಕಾಲ ಸೋಪು ಮತ್ತು ಹರಿಯುವ ನೀರಿನಿಂದ ತೊಳೆಯಬೇಕು ಹಾಗೂ ಯಾವುದೇ ವಿಳಂಬವಿಲ್ಲದೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆಯಂತೆ ಸಂಪೂರ್ಣ ಲಸಿಕೆ ಪಡೆಯಬೇಕು. ಜ್ವರ, ವಾಂತಿ, ಭೇದಿಯಂತಹ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ರಕ್ತ ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸಿದರು.ಸಭೆಯಲ್ಲಿ ಡಿಎಚ್ಒ ಡಾ. ಎಸ್.ಎಸ್. ನೀಲಗುಂದ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಿ.ಸಿ. ಕರಿಗೌಡರ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಹುಲಗಣ್ಣವರ, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.