ಮೆಗಾ ಮಾರ್ಕೆಟ್‌ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ

| Published : Jul 21 2025, 01:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವವನಬಾಗೇವಾಡಿ ಪಟ್ಟಣದ ಮೆಗಾ ಮಾರುಕಟ್ಟೆ, ಎಪಿಎಂಸಿ ಮಾರ್ಕೆಟ್‌ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಶನಿವಾರ ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಪರಿಶೀಲಿಸಿದರು. ಅಲ್ಲದೇ, ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು

ಕನ್ನಡಪ್ರಭ ವಾರ್ತೆ ಬಸವವನಬಾಗೇವಾಡಿ

ಪಟ್ಟಣದ ಮೆಗಾ ಮಾರುಕಟ್ಟೆ, ಎಪಿಎಂಸಿ ಮಾರ್ಕೆಟ್‌ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಶನಿವಾರ ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಪರಿಶೀಲಿಸಿದರು. ಅಲ್ಲದೇ, ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬಸವವನಬಾಗೇವಾಡಿ ಪಟ್ಟಣಕ್ಕೆ ಆಗಮಿಸಿದ ಸಚಿವರು ಮೆಗಾ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ, ವ್ಯಾಪಾರಿಗಳ ಸಮಸ್ಯೆ ಆಲಿಸಿದರು.

ಬಾಡಿಗೆ ಪಡೆದಿರುವ ವ್ಯಾಪಾರಿಗಳ ಮಳಿಗೆಗೆ ಮಳೆ ನೀರು ನುಗ್ಗುವಿಕೆ, ಒಂದನೇ ಮಹಡಿಯ ಕಾಮಗಾರಿಯ ನೀರು ಸೋರಿಕೆ ಸಮಸ್ಯೆ ತಡೆಯುವ ಕುರಿತು ತ್ವರಿತ ಕ್ರಮ ಕೈಗೊಳ್ಳುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಲ್ಲದೇ ಬಾಕಿ ಉಳಿದಿರುವ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ, ಬೇಗನೆ ಕಾಮಗಾರಿ ಮುಗಿಸುವಂತೆ ತಿಳಿಸಿದರು. ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಉರ್ದು ಶಾಲೆ ಕಾಮಗಾರಿ ನಿಧಾನಗತಿಯಲ್ಲಿ ನಡೆದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಶಿವಾನಂದ ಪಾಟೀಲರು, ಕಾಲಮಿತಿ ಮೀರಿ ಹಲವು ತಿಂಗಳುಗಳೇ ಗತಿಸಿದರೂ ಕಾಮಗಾರಿ ಮುಗಿಸಿಲ್ಲ ಎಂದು ಗುತ್ತಿಗೆದಾರ ರಾಜ ಅಹ್ಮದ್ ಮುದ್ನಾಳರನ್ನು ತರಾಟೆಗೆ ತೆಗೆದುಕೊಂಡರು.

ಪುನರ್ವಸತಿ ಪುನರ್ ನಿರ್ಮಾಣ ಇಲಾಖೆಯ ಅನುದಾನದಲ್ಲಿ ನಡೆದಿರುವ ಕಾಮಗಾರಿ ಬೇಗ ಮುಕ್ತಾಯವಾದಲ್ಲಿ ಮೊದಲ ಮಹಡಿಯ ಕಾಮಗಾರಿ ಆರಂಭಕ್ಕೆ ಅನುಕೂಲ ಆಗಲಿದೆ. ಹೀಗಾಗಿ ಬೇಗನೆ ಕಾಮಗಾರಿ ಮುಗಿಸಬೇಕು. ಇಲ್ಲವಾದಲ್ಲಿ ಗುತ್ತೇದಾರನ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದರು. ಸದರಿ ಕಾಮಗಾರಿ ಪ್ರಗತಿಯ ಹಂತದ ಕುರಿತು ಸ್ಥಳ ಪರಿಶೀಲನೆ ಮಾಡಿ, ಮಾಹಿತಿ ನೀಡದ ಬಿಇಒ ವಸಂತ ರಾಠೋಡ ವಿರುದ್ಧ ಸಚಿವರು ಗರಂ ಆದರು. ನಂತರ ನಗರದ ಪಾಟೀಲ ಕ್ಲಿನಿಕ್ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ಶಿವಾನಂದ ಪಾಟೀಲ, ರಸ್ತೆಯ ಕ್ರಾಸ್ ಕಟಿಂಗ್ ಕಾಮಗಾರಿ ಕಂಡು ಗುತ್ತಿಗೆದಾರರ ವಿರುದ್ಧ ಸಿಡಿಮಿಡಿಗೊಂಡರು. ಅವೈಜ್ಞಾನಿಕವಾಗಿ ರಸ್ತೆ ಕಟಿಂಗ್ ಮಾಡಿರುವ ಕುರಿತು ಪುರಸಭೆ ಮುಖ್ಯಾಧಿಕಾರಿ ಚಿತ್ತರಗಿ ಅವರಿಗೆ ನೋಟಿಸ್ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ ಕೃಷಿ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ, ಕೋಲ್ಡ್ ಸ್ಟೋರೇಜ್ ಕಾಮಗಾರಿ ಆರಂಭಿಸುವ ಹಾಗೂ ನಿಧಾನಗತಿಯಲ್ಲಿ ನಡೆದಿರುವ ಗೋದಾಮು ಕಾಮಗಾರಿಯನ್ನು ಶೀಘ್ರ ಮುಗಿಸಬೇಕು. ಈ ಕುರಿತು ಎಪಿಎಂಸಿ ಅಧಿಕಾರಿಗಳು, ಪಿ.ಆರ್.ಇ.ಡಿ. ಎಂಜಿನಿಯರಗಳು ಸಭೆ ಸೇರಿ ತ್ವರಿತವಾಗಿ ಕಾರ್ಯೋನ್ಮುಖವಾಗುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಪಿಆರ್‌ಇಡಿ ಎಇಇ ವಿಲಾಸ ರಾಠೋಡ, ಲೋಕೋಪಯೋಗಿ ಇಲಾಖೆಯ ಎಇಇ ಎಸ್.ಜಿ.ದೊಡಮನಿ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.