ಸಾರಾಂಶ
ಕಾರವಾರ: ಉತ್ತರ ಕನ್ನಡ ಪ್ರವಾಸಿ ತಾಣವಾದ್ದರಿಂದ ವಿದೇಶಿಗರ ಆಗಮನ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಎಷ್ಟು ಜನರಿದ್ದಾರೆ? ಅವರ ವೀಸಾ ಇದೆಯೇ? ಬಾಡಿಗೆ ಮನೆ, ಹೋಮ್ ಸ್ಟೇ, ರೆಸಾರ್ಟ್ ಎಲ್ಲಿ? ಎಷ್ಟು ವರ್ಷದಿಂದ ವಾಸವಾಗಿದ್ದಾರೆ? ಇತ್ಯಾದಿ ಮಾಹಿತಿಯನ್ನು ಆಯಾ ಪೊಲೀಸ್ ಠಾಣೆಯಿಂದ ಪಡೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವರನ್ನು ಮಾನಿಟರ್ ಮಾಡಿದರೆ ಹಂಪಿಯಂತಹ ಘಟನೆ ನಡೆಯುವುದನ್ನು ತಪ್ಪಿಸಬಹುದಾಗಿದೆ. ಹೀಗಾಗಿ ಇಲಾಖೆಗೆ ಸರ್ವೆ ಮಾಡಲು ಹಾಗೂ ಹೋಮ್ ಸ್ಟೇ, ರೆಸಾರ್ಟ್‌ಗಳ ಪರವಾನಗಿ ಪರಿಶೀಲನೆಗೆ ಕಂದಾಯ, ಪೊಲೀಸ್, ಪ್ರವಾಸೋದ್ಯಮ, ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸಲು ಸೂಚನೆ ನೀಡಲಾಗಿದೆ ಎಂದರು.ಜಿಲ್ಲೆಯಲ್ಲಿ ನಡೆದ ಅಪರಾಧ ಪ್ರಕರಣಗಳನ್ನು ಗಮನಿಸಿದರೆ ವಾಹನ ಅಪಘಾತಗಳೇ ಹೆಚ್ಚಾಗಿದೆ. ೪೫೦ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇದೆ. ಇವುಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಅಪಘಾತ ಆಗುತ್ತಿದೆ. ಎರಡೂವರೆ ವರ್ಷದಲ್ಲಿ ೫೮೯ ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ೧೦-೧೩ ಸಾವಿರ ಜನ ಗಾಯಾಳುಗಳಾಗಿದ್ದಾರೆ. ಮದ್ಯಪಾನ, ಬ್ಲಾಕ್ ಸ್ಪಾಟ್ ಒಳಗೊಂಡು ಬೇರೆ ಕಾರಣದಿಂದ ಆಗುತ್ತಿದೆ. ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದ್ದು, ಅಗತ್ಯ ಸಲಹೆ ಸೂಚನೆ ನೀಡಲಾಗಿದೆ ಎಂದರು.
ಪೋಕ್ಸೊ ಪ್ರಕರಣ ಬೇರೆ ಕಡೆ ಹೋಲಿಸಿದರೆ ಈ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಲು ಸೂಚನೆ ನೀಡಲಾಗಿದ್ದು, ತಡೆಯಲು ಕಠಿಣ ಕ್ರಮವಹಿಸಲು ಹೇಳಿದ್ದೇವೆ. ಇನ್ನು ಪ್ರಕರಣ ಸರಿಯಾಗಿ ನ್ಯಾಯಾಲಯದಲ್ಲಿ ನಡೆಸಲು ಸಂಬಂಧಿಸಿದವರಿಗೆ ಮಾರ್ಗದರ್ಶನ ಮಾಡಲಾಗಿದೆ. ೪೨೯ ಸ್ಥಳಗಳನ್ನು ಗುಡ್ಡ ಕುಸಿತವಾಗಬಹುದು ಎಂದು ಗುರುತಿಸಲಾಗಿದ್ದು, ಪ್ರತಿ ಸ್ಥಳದ ಬಗ್ಗೆ ಸಮಗ್ರ ವಿವರ ಕಳಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಭಟ್ಕಳದಲ್ಲೂ ಸಂಚಾರ ಪೊಲೀಸ್ ಠಾಣೆ ನೀಡಬೇಕು ಎನ್ನುವ ಬೇಡಿಕೆ ಗಮನಕ್ಕಿದೆ. ಮಂಜೂರಾತಿ ಮಾಡುತ್ತೇವೆ ಎಂದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಎನ್‌ಐಎ ದಾಳಿ ಮಾಡುತ್ತಿದ್ದು, ರಾಜ್ಯ ಗುಪ್ತಚರ ಇಲಾಖಾ ವೈಫಲ್ಯವೇ ಎಂದು ಕೇಳಿದ್ದಕ್ಕೆ, ದೇಶದ ತನಿಖಾ ಸಂಸ್ಥೆಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಿಗುವ ಮಾಹಿತಿ ಆಧಾರದ ಮೇಲೆ ದಾಳಿ ಮಾಡುತ್ತವೆ. ಕೆಲವೊಂದು ಪ್ರಕರಣದಲ್ಲಿ ರಾಜ್ಯಕ್ಕೆ ಹೇಳುವುದಿಲ್ಲ. ಅವರಿಗೆ ಕಾನೂನಾತ್ಮಕವಾಗಿ ಅವಕಾಶವಿದೆ ಎಂದು ಅಭಿಪ್ರಾಯಿಸಿದರು.ಬಹುತೇಕ ಕಡೆ ಅಗ್ನಿಶಾಮಕ ದಳದ ವಾಹನಗಳು ೧೫ವರ್ಷ ಮೇಲ್ಪಟ್ಟಿದ್ದು, ಬದಲೀ ವಾಹನ ನೀಡದೇ ತೊಂದರೆಯಾಗುತ್ತಿರುವ ಬಗ್ಗೆ ಕೇಳಿದಾಗ, ಈ ವರ್ಷದ ಬಜೆಟ್‌ನಲ್ಲಿ ₹ ೩೦೦ ಕೋಟಿ ನೀಡಲಾಗಿದೆ. ಬದಲಾವಣೆಗೆ ಆದ್ಯತೆ ನೀಡುತ್ತೇವೆ. ಅಗ್ನಿ ಶಾಮಕ ವಾಹನ ಹೆಚ್ಚು ಬಳಕೆಯಾಗದ ಕಾರಣ ೧೫ ವರ್ಷ ಮೇಲ್ಪಟ್ಟ ಫಿಟ್ನೆಸ್ ಇರುವ ವಾಹನ ಬಳಕೆಗೆ ಅವಕಾಶ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಅಲ್ಲಿಂದ ತಿರಸ್ಕಾರ ಮಾಡಲಾಗಿದೆ. ಹಂತಹಂತವಾಗಿ ನೀಡುತ್ತೇವೆ ಎಂದರು.
ಬಸವನಗೌಡ ಪಾಟೀಲ್ ಯತ್ನಾಳ ಬಿಜೆಪಿಯಿಂದ ಉಚ್ಛಾಟನೆ ಮಾಡಿದ ಬಗ್ಗೆ ಪ್ರಶ್ನಿಸಿದಾಗ, ಆ ಬಗ್ಗೆ ನನಗೆ ಗೊತ್ತಿಲ್ಲ. ಅವರ ಪಕ್ಷಕ್ಕೆ ಸಂಬಂಧಿದ ವಿಚಾರವಾಗಿದೆ ಎಂದಷ್ಟೆ ಹೇಳಿದರು.ಕಾರವಾರದ ಜಿಲ್ಲಾ ಕಾರಾಗೃಹ ಸ್ಥಳಾಂತರಕ್ಕೆ ಸಂಬಂಧಿಸಿದ ಇಲಾಖೆಯಿಂದ ಪ್ರಸ್ತಾವನೆ ಬಂದರೆ ಕ್ರಮಹಿಸುತ್ತೇವೆ ಎಂದರು.
ಹೊನ್ನಾವರ ಟೊಂಕಾ ಬಂದರು ಹೋರಾಟದಲ್ಲಿ ದಾಖಲಾದ ಪ್ರಕರಣ ವಾಪಸ್ ಪಡೆಯುವ ಬಗ್ಗೆ ಕೇಳಿದಾಗ, ಯಾರಾದರೂ ವಾಪಸ್ ಪಡೆಯುವಂತೆ ಲಿಖಿತವಾಗಿ ನೀಡಿದರೆ ಎಲ್ಲವನ್ನೂ ಪರಿಶೀಲನೆ ಮಾಡಿ ಕ್ಯಾಬಿನೆಟ್ ಸಬ್ ಕಮಿಟಿಯಲ್ಲಿ ಇಡಲಾಗುತ್ತದೆ. ವಾಪಸ್ ಪಡೆಯಬೇಕೇ, ಬೇಡವೇ ಎನ್ನುವ ಬಗ್ಗೆ ಆ ಸಮಿತಿ ನಿರ್ಧಾರ ಮಾಡುತ್ತದೆ. ಅದನ್ನು ಕ್ಯಾಬಿನೆಟ್‌ನಲ್ಲಿ ಇಡಲಾಗುತ್ತದೆ. ಅಲ್ಲಿ ತೀರ್ಮಾನವಾದ ಬಳಿಕ ಸರ್ಕಾರದಿಂದ ನ್ಯಾಯಾಲಯದ ಮುಂದೆ ಇಡಲಾಗುತ್ತದೆ. ಅಲ್ಲಿ ಅಂತಿಮ ನಿರ್ಧಾರವಾಗುತ್ತದೆ ಎಂದಷ್ಟೆ ಹೇಳಿದರು.