ಪ್ರಮುಖ ಅಧಿಕಾರಿಗಳ ಗೈರು ಹಾಜರಿನಲ್ಲಿ ಸಭೆ ನಡೆಸಿದ ಆಡಳಿತಾಧಿಕಾರಿಗಳು, ವಸತಿನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಐರನ್ ಟ್ಯಾಬ್ಲೆಟ್ ಹಾಗೂ ಆರೋಗ್ಯ ಪರಿಶೀಲನೆ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.

ರೋಣ: ತಾಪಂ ಸಭಾಭವನದಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಗೆ ಪ್ರಮುಖ ಇಲಾಖೆಯ ಬೆರಳೆಣಿಕೆ ಅಧಿಕಾರಿಗಳು ಹಾಜರಿದ್ದು, ಬಹುತೇಕ ಗೈರಾದ ಅಧಿಕಾರಿಗಳ ವಿರುದ್ಧ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ತಾಪಂ ಪಂಚಾಯಿತಿ ಆಡಳಿತಾಧಿಕಾರಿ ನಂದಾ ಹಣಬರಟ್ಟಿ ಗರಂ ಆದ ಘಟನೆ ಜರುಗಿದ್ದು, ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಿದರು. ಸಭೆ ಆರಂಭವಾಗುತ್ತಿದ್ದಂತೆಯೇ ಸಿಡಿಪಿಒ ಅಧಿಕಾರಿ ಎಲ್ಲಿ ಎಂದು ಪ್ರಶ್ನಿಸಿದ ಆಡಳಿತ ಅಧಿಕಾರಿಗಳ ಮುಂದೆ ಸಿಡಿಪಿಒ ಕಚೇರಿಯ ಗುಮಾಸ್ತರು ಹಾಜರಾಗುತ್ತಿದ್ದಂತೆ ತರಾಟೆಗೆ ತೆಗೆದುಕೊಂಡ ಆಡಳಿತ ಅಧಿಕಾರಿಗಳು, ನಿಮ್ಮ ಅಧಿಕಾರಿ ಎಲ್ಲಿ ಎಂದು ಪ್ರಶ್ನಿಸಿದರು. ಈ ವೇಳೆ ಜಿಲ್ಲಾಧಿಕಾರಿ ಸಭೆಗೆ ಹಾಜರಾಗಿದ್ದಾರೆ ಎಂದು ಗುಮಾಸ್ತರಿಂದ ಬಂದ ಉತ್ತರವನ್ನು ಪರಿಶೀಲಿಸಿದಾಗ ಜಿಲ್ಲಾಧಿಕಾರಿ ಸಭೆಗೂ ಹಾಜರಾಗದೆ ಎರಡು ಸಭೆಯ ಹೆಸರಿನಲ್ಲಿ ಗೈರುಹಾಜರಾಗಿರುವುದು ಕಂಡುಬಂದಿದ್ದು, ಆಡಳಿತಾಧಿಕಾರಿಗಳು ಕೆರಳುವಂತೆ ಮಾಡಿತು.ಪ್ರಮುಖ ಅಧಿಕಾರಿಗಳ ಗೈರು ಹಾಜರಿನಲ್ಲಿ ಸಭೆ ನಡೆಸಿದ ಆಡಳಿತಾಧಿಕಾರಿಗಳು, ವಸತಿನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಐರನ್ ಟ್ಯಾಬ್ಲೆಟ್ ಹಾಗೂ ಆರೋಗ್ಯ ಪರಿಶೀಲನೆ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ಆಯ್ದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡದೆ ಕಡ್ಡಾಯವಾಗಿ ಎಲ್ಲ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲು ಆರೋಗ್ಯ ಇಲಾಖೆ ಹಾಗೂ ಸಂಬಂಧಿಸಿದ ಇತರೆ ಇಲಾಖೆಗಳಿಗೆ ಸೂಚಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ, ಅತಿಥಿ ಶಿಕ್ಷಕರ ವೇತನ ಮಂಜೂರು ಮಾಡಲು ₹1 ಲಕ್ಷ ಕೊರತೆ ಇರುವ ಬಗ್ಗೆ ಗಮನ ಸೆಳೆದರು. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಕೊರತೆಯಾದ ಹಣ ಮಂಜೂರಾತಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫಲಿತಾಂಶ ಕಡಿಮೆ ಫಲಿತಾಂಶ ದಾಖಲಿಸುತ್ತಿರುವ ಶಾಲೆಗಳ ಮೇಲೆ ನಿಗಾ ಇಡುವಂತೆ ಸೂಚಿಸಿದ ಅವರು, ಅಧಿಕಾರಿಗಳ ತಂಡ ರಚನೆ ಮಾಡಿ ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ನೀಡಲು ಸೂಚಿಸಿದರು.

ಈ ವೇಳೆ ಮಾತನಾಡಿದ ತಾಪಂ ಇಒ ಚಂದ್ರಶೇಖರ ಕಂದಕೂರ ಎಸ್ಎಸ್ಎಲ್‌ಸಿ ಫಲಿತಾಂಶ ಸುಧಾರಿಸಲು 8 ಮತ್ತು 9ನೇ ತರಗತಿಗಳಲ್ಲಿ ಇರುವಾಗಲೇ ಫಲಿತಾಂಶ ಸುಧಾರಣೆಗೆ ಮುಂದಾಗಲು ಸೂಚಿಸಿದರು.

ತಾಲೂಕಿನ ನೈನಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಯೋಜನೆಯ ಆಹಾರವನ್ನು ವಿದ್ಯಾರ್ಥಿಗಳಿಗೆ ಇಲಾಖೆಯ ನಿಯಮದ ಪ್ರಕಾರ ಏಕೆ ನೀಡಲಾಗುತ್ತಿಲ್ಲ ಎಂಬ ತಾಪಂ ಇಒ ಚಂದ್ರಶೇಖರ ಕಂದಕೂರ ಅವರ ಪ್ರಶ್ನೆಗೆ ಸ್ಥಳೀಯ ಕೆಲವು ರಾಜಕೀಯ ಮುಖಂಡರ ಹಸ್ತಕ್ಷೇಪದಿಂದ ತೊಂದರೆಯಾಗಿದೆ ಎಂಬ ಅಕ್ಷರ ದಾಸೋಹ ಅಧಿಕಾರಿಯ ಉತ್ತರಕ್ಕೆ ಬೇಸರ ವ್ಯಕ್ತಪಡಿಸಿದ ಅವರು ಇಲಾಖೆಯ ನಿಯಮದ ಪ್ರಕಾರ ಬಿಸಿಯೂಟ ನೀಡಬೇಕು ಏನಾದರೂ ತೊಂದರೆಯಾದರೆ ಗಮನಕ್ಕೆ ತರುವಂತೆ ಸೂಚಿಸಿದರು.

ಸಭೆಗೆ ಹಾಜರಾಗಬೇಕಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಎಂಜಿನಿಯರ್ ಗೈರು ಹಾಜರಾದ ಹಿನ್ನೆಲೆ ಅವರ ಪರವಾಗಿ ಹಾಜರಾದ ಗುತ್ತಿಗೆ ನೌಕರ ಮಹೇಶ ಕೇಸರಿ ಅವರನ್ನು ವರದಿ ಮಂಡನೆಗೆ ಅವಕಾಶ ನೀಡದೆ ಕುಳಿತುಕೊಳ್ಳುವಂತೆ ಆದೇಶ ನೀಡಿದ ಆಡಳಿತಾಧಿಕಾರಿಗಳು ಸಹಾಯಕ ಎಂಜಿನಿಯರ್‌ಗೆ ನೋಟಿಸ್ ನೀಡಲು ಆದೇಶಿಸಿದರು.

ಪ್ರತಿ ತಿಂಗಳು 3ನೇ ತಾರೀಖಿನ ಒಳಗಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು ತಪ್ಪದೆ ತಮ್ಮ ಇಲಾಖೆಗಳ ಪ್ರಗತಿಯ ವರದಿಯನ್ನು ಸಲ್ಲಿಸಬೇಕು.

ಸಭೆಗೆ ಗೈರಾದ ಸಿಡಿಪಿಒ, ನೀರಾವರಿ ಇಲಾಖೆ, ಪಿಎಂಜಿಎಸ್‌ವೈ, ಕೈಗಾರಿಕೆ ನಿಗಮ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಆಯಾ ಇಲಾಖೆಗಳ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಾಪಂ ಆಡಳಿತಾಧಿಕಾರಿ ನಂದಾ ಹಣಬರಟ್ಟಿ ಎಚ್ಚರಿಸಿದರು. ಮುಂದಿನ ಸಭೆಗೆ ಆಯಾ ಇಲಾಖೆ ಪ್ರಮುಖ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರುವಂತೆ ತಾಕೀತು ಮಾಡಿದರು.