ಸಾರಾಂಶ
ಕಾರವಾರ: ತಾಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಯಾವುದೇ ರೀತಿಯ ವಿಪತ್ತು ಸಂಭವಿಸಿದ್ದಲ್ಲಿ ಅದನ್ನು ಸಮರ್ಪಕವಾಗಿ ಎದುರಿಸಲು ಎಲ್ಲ ಅಧಿಕಾರಿಗಳಿಗೆ ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಅಗತ್ಯ ಸಿದ್ಧತೆಗಳನ್ನುಮಾಡಿಕೊಂಡಿರಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೈಗಾದಲ್ಲಿ ನಡೆಯುವ ಅಣಕು ಕಾರ್ಯಾಚರಣೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಾದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ವಿಪತ್ತು ಸಂಭವಿಸಿದಲ್ಲಿ ಅದನ್ನು ಎದುರಿಸುವ ಕುರಿತಂತೆ ಅಣಕು ಕಾರ್ಯಾಚರಣೆನಡೆಯಲಿದ್ದು, ಈ ಸಂದರ್ಭದಲ್ಲಿ ಸಂಬಂಧಪಟ್ಟ ಎಲ್ಲ ಇಲಾಖೆಯ ಅಧಿಕಾರಿಗಳು ತಾವು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ತಿಳಿದುಕೊಂಡು, ಅಣಕು ಕಾರ್ಯಾಚರಣೆ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಅಣಕು ಕಾರ್ಯಾಚರಣೆ ನಡೆಯುವ ದಿನಾಂಕವನ್ನು ಸಾಕಷ್ಟು ಮುಂಚಿತವಾಗಿ ಜಿಲ್ಲಾಡಳಿತಕ್ಕೆ ತಿಳಿಸಬೇಕು. ಕಾರ್ಯಾಚರಣೆಗೆ ಮುನ್ನ ಸಂಬಂಧಪಟ್ಟ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಕಾರ್ಯಾಚರಣೆಯ ವಿಧಾನಗಳ ಬಗ್ಗೆ ವಿವರವಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಕೈಗಾದ ಸೈಂಟಿಫಿಕ್ ಅಧಿಕಾರಿ ಚಿತ್ತರಂಜನ್ ಮಾತನಾಡಿ, ಕೈಗಾದಲ್ಲಿ ಪ್ರಸ್ತುತ 4 ಅಣು ವಿದ್ಯುತ್ ಯೂನಿಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, 5 ಮತ್ತು 6ನೇ ಯೂನಿಟ್ ಇನ್ನೂ ಕಾರ್ಯಾರಂಭ ಮಾಡಬೇಕಿದೆ. ಈ ಪ್ರದೇಶದಲ್ಲಿ ಯಾವುದೇ ರೀತಿಯ ವಿಪತ್ತು ಸಂಭವಿಸದಂತೆ ಎಲ್ಲ ಗರಿಷ್ಠ ಮುನ್ನೆಚ್ಚರಿಕೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಈ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿಗೊಳಿಸಲು ಮತ್ತು ಪ್ರಸ್ತುತ ಇರುವ ಕ್ರಮಗಳನ್ನು ತುರ್ತು ಸಂದರ್ಭದಲ್ಲಿ ಅನುಷ್ಠಾನಗೊಳ್ಳುವುದನ್ನು ಪರಿಶೀಲಿಸಲು ಅಣಕು ಕಾರ್ಯಾಚರಣೆ ನಡೆಸಲಾಗುವುದು ಎಂದು ವಿವರಿಸಿದರು.ದೇಶದಲ್ಲಿ ಅಣು ವಿದ್ಯುತ್ ಸ್ಥಾವರಗಳಲ್ಲಿ ಈ ಮೊದಲು ನಡೆಸಿರುವ ಅಣಕು ಕಾರ್ಯಚರಣೆಯಲ್ಲಿ ಕಂಡುಬಂದಿರುವ ಲೋಪಗಳನ್ನು ಪಟ್ಟಿ ಮಾಡಿದ್ದು, ಪ್ರಸ್ತುತ ನಡೆಸುವ ಅಣಕು ಕಾರ್ಯಚರಣೆಯಲ್ಲಿ ಆ ರೀತಿಯ ಯಾವುದೇ ಲೋಪಗಳು ಕಂಡು ಬರದಂತೆ ಕಾರ್ಯನಿರ್ವಹಿಸಲು ಜಿಲ್ಲೆಯ ಎಲ್ಲ ಅಧಿಕಾರಿಗಳು ಅಗತ್ಯ ಸಹಕಾರ ನೀಡುವಂತೆ ತಿಳಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪವಿಭಾಗಾಧಿಕಾರಿ ಕನಿಷ್ಕ, ಕೈಗಾದ ತಾಂತ್ರಿಕ ಅಧಿಕಾರಿ ಸುನಿಲ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.