ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಪಾವಿತ್ರ್ಯ ರಕ್ಷಣೆಗೆ ಸೂಚನೆ

| Published : Mar 17 2025, 12:32 AM IST

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಪಾವಿತ್ರ್ಯ ರಕ್ಷಣೆಗೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಸಾಲಿನ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಮಾ.21ರಿಂದ ಏ.4ರವರೆಗೆ ನಡೆಯಲಿವೆ. ಈ ಬಾರಿ 3482 ಗಂಡು, 3323 ಹೆಣ್ಣು ಸೇರಿ ಒಟ್ಟು 6805 ವಿದ್ಯಾರ್ಥಿಗಳು 21 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ 21 ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿಯೊಬ್ಬರು ಪರೀಕ್ಷೆ ಪಾರದರ್ಶಕವಾಗಿ, ಪಾವಿತ್ರ್ಯ ರಕ್ಷಿಸುವ ಕಾರ್ಯ ಮಾಡಬೇಕು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಬೇಕು ಎಂದು ತಹಸೀಲ್ದಾರ್‌ ಸಿದ್ದರಾಯ ಭೋಸಗೆ ಸೂಚನೆ ನೀಡಿದರು.

ಇಲ್ಲಿನ ಕೆಎಲ್ಇ ಸಂಸ್ಥೆಯ ಎಸ್ಎಸ್ಎಂಎಸ್ ಮಹಾವಿದ್ಯಾಲಯದ ಖೋತ ಸಭಾಂಗಣದಲ್ಲಿ ನಡೆದ ಪ್ರಸಕ್ತ ಸಾಲಿನ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆ ಪಾರದರ್ಶಕ ಹಾಗೂ ಶಾಂತಿಯುತವಾಗಿ ನಡೆಸಲು ಪೊಲೀಸ್, ಶಿಕ್ಷಣ ಇಲಾಖೆ ಸೇರಿ ಜಾಗೃತದಳದ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಲೋಪ ಆಗದಂತೆ ಯಾವುದೇ ವ್ಯಕ್ತಿಗೆ ಸಹಾಯ ಮಾಡುವುದು ಹಾಗೂ ನಕಲಿಗೆ ಸಹಕರಿಸುವುದು ಕಂಡು ಬಂದರೆ, ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಅಥಣಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಮೋರಟಗಿ ಮಾತನಾಡಿ, ಪ್ರಸಕ್ತ ಸಾಲಿನ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಮಾ.21ರಿಂದ ಏ.4ರವರೆಗೆ ನಡೆಯಲಿವೆ. ಈ ಬಾರಿ 3482 ಗಂಡು, 3323 ಹೆಣ್ಣು ಸೇರಿ ಒಟ್ಟು 6805 ವಿದ್ಯಾರ್ಥಿಗಳು 21 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಎಲ್ಲಾ ಕೇಂದ್ರದಲ್ಲಿ ಸುವ್ಯವಸ್ಥಿತ, ಸುಸೂತ್ರ ಮತ್ತು ಶಾಂತಿಯುತವಾಗಿ ಪರೀಕ್ಷೆಗಳು ನಡೆಯಲು ಎಲ್ಲ ರೀತಿ ಕ್ರಮ ಕೈಕೊಳ್ಳಲಾಗಿದೆ. ಸಿಸಿ ಕ್ಯಾಮೆರಾ ಕಣ್ಗಾವಲಿನ ಜೊತೆಗೆ ವೆಬ್ ಕ್ಯಾಮೆರಾ ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಎಲ್ಲಾ ಮಕ್ಕಳಿಗೂ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಆಸನಗಳ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಶೌಚಾಲಯ ಹಾಗೂ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಅಥಣಿ ಪಟ್ಟಣದಲ್ಲಿ 3 ಪರೀಕ್ಷಾ ಕೇಂದ್ರಗಳು ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ 18 ಪರೀಕ್ಷಾ ಕೇಂದ್ರಗಳಿದ್ದು. ಸು. 293 ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಆಸನ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಿಪಿಐ ಸಂತೋಷ ಹಳ್ಳೂರ ಮಾತನಾಡಿ, ಸುಸೂತ್ರವಾಗಿ ಎಸ್ಎಸ್ಎಲ್‌ಸಿ ಪರೀಕ್ಷೆಗಳು ಶಾಂತರೀತಿಯಲ್ಲಿ ಜರುಗುವಂತೆ ಕಾನೂನು ರೀತಿ ಕ್ರಮ ವಹಿಸಿ, ಇಲಾಖೆಯ ಮಾರ್ಗಸೂಚಿ ಪ್ರಕಾರ ಸೂಕ್ತ ಬಂದೋಬಸ್ತ್ ನೀಡಲಾಗುವುದೆಂದರು. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನಲ್ಲಿ 200 ಮೀ. ಪ್ರದೇಶದಲ್ಲಿ ಸಾರ್ವಜನಿಕರು ಯಾರೂ ಅನಧಿಕೃತವಾಗಿ ಪ್ರವೇಶ ಮಾಡದಂತೆ ನಿಷೇದಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿಗೊಳಿಸಿದ್ದಾರೆ ಎಂದರು.

ಈ ವೇಳೆ ಗ್ರೇಡ್ 2 ತಹಸೀಲ್ದಾರ್ ಮಹಾದೇವ ಬಿರಾದಾರ, ಪಿಎಸ್ಐ ಜಿ.ಎಸ್.ಉಪ್ಪಾರ, ಎಂ.ಜಿ.ಮಾನೆ, ಎಚ್.ಆರ್ ಪಾಟೀಲ, ಎಸ್.ಎಂ.ಶ್ರೀಖಂಡೆ, ಆರೋಗ್ಯ ಇಲಾಖೆ ಎ.ಬಿ.ಗೂಳಿಧರ, ಪರೀಕ್ಷಾ ನೋಡಲ್ ಅಧಿಕಾರಿ ಸಾವನ ಗಸ್ತಿ, ಕ್ಷೇತ್ರ ಸಮನ್ವಯ ಅಧಿಕಾರಿ ಗೌಡಪ್ಪ ಖೋತ, ಸಮೂಹ ಸಂಪನ್ಮೂಲ ಅಧಿಕಾರಿ ಐ.ಎಸ್.ಹಂಪಣ್ಣವರ, ಸಂಪನ್ಮೂಲ ಅಧಿಕಾರಿ ಎನ್.ಎಂ.ಹಿರೇಮಠ ಸೇರಿ ಇನ್ನಿತರರು ಇದ್ದರು.