ಸಾರಾಂಶ
ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಫೇಲಾಗಿರುವ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆ-2ಗೆ ಕಡ್ಡಾಯವಾಗಿ ನೋಂದಾಯಿಸಿ, ಅವರಿಗೆ ಪ್ರತಿಯೊಂದು ಪಿಯು ಕಾಲೇಜಿನಲ್ಲೂ ವಿಶೇಷ ತರಗತಿಗಳನ್ನು ನಡೆಸಲು ಕ್ರಮ ವಹಿಸುವಂತೆ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಎಲ್ಲ ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಫೇಲಾಗಿರುವ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆ-2ಗೆ ಕಡ್ಡಾಯವಾಗಿ ನೋಂದಾಯಿಸಿ, ಅವರಿಗೆ ಪ್ರತಿಯೊಂದು ಪಿಯು ಕಾಲೇಜಿನಲ್ಲೂ ವಿಶೇಷ ತರಗತಿಗಳನ್ನು ನಡೆಸಲು ಕ್ರಮ ವಹಿಸುವಂತೆ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಎಲ್ಲ ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಿದೆ.ಏ.24ರಿಂದ ಮೇ 8ರವರೆಗೆ ಪರೀಕ್ಷೆ 2ಗೆ ಈಗಾಗಲೇ ವೇಳಾಪಟ್ಟಿ ಪ್ರಕಟವಾಗಿದೆ. ಹಾಗಾಗಿ ಅನುತ್ತೀರ್ಣರಾಗಿರುವ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆ 2ಗೆ ಕಡ್ಡಾಯವಾಗಿ ನೋಂದಾಯಿಸಿ ವಿಶೇಷ ತರಗತಿ ಮೂಲಕ ಅವರ ಫಲಿತಾಂಶ ಉತ್ತಮಗೊಳಿಸಲು ಕ್ರಮ ವಹಿಸುವಂತೆ ಇಲಾಖೆ ನಿರ್ದೇಶಿಸಿದೆ.
ಇಲಾಖೆ ಸೂಚನೆ ಬೆನ್ನಲ್ಲೇ ಬೆಂಗಳೂರು ದಕ್ಷಿಣ ಸೇರಿ ವಿವಿಧ ಜಿಲ್ಲಾ ಡಿಡಿಪಿಯು ಅವರು ತಮ್ಮ ವ್ಯಾಪ್ತಿಯ ಪಿಯು ಕಾಲೇಜು ಪ್ರಾಂಶುಪಾಲರಿಗೆ ಈ ಸಂಬಂಧ ಪ್ರತ್ಯೇಕ ಸುತ್ತೋಲೆಗಳನ್ನು ಹೊರಡಿಸುತ್ತಿದ್ದು, ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳ ಪೋಷಕರಿಗೆ ಕರೆ ಮಾಡಿ ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಪರೀಕ್ಷೆ-2ಗೆ ನೋಂದಾಯಿಸುವ ಜವಾಬ್ದಾರಿ ಆಯಾ ಕಾಲೇಜು ಪ್ರಾಂಶುಪಾಲರದ್ದಾಗಿದೆ. ನೋಂದಣಿಯಾದ ವಿದ್ಯಾರ್ಥಿಗಳಿಗೆ ಏ.11ರಿಂದ 23ರವರೆಗೆ ವಿಶೇಷ ತರಗತಿ ನಡೆಸಲು ವೇಳಾಪಟ್ಟಿ ಸಿದ್ಧಪಡಿಸಿ ಒಂದೆರಡು ದಿನಗಳಲ್ಲಿ ನೀಡಬೇಕು. ವೇಳಾಪಟ್ಟಿ ಪ್ರಕಾರ ತರಗತಿಗಳನ್ನು ನಡೆಸಲು ವಿಷಯವಾರು ಉಪನ್ಯಾಸಕರನ್ನು ನಿಯೋಜಿಸುವ ಜೊತೆಗೆ ನಿತ್ಯ ತರಗತಿಗಳ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು. ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಸಬೇಕು ಎಂದು ಸೂಚಿಸಿದ್ದಾರೆ.