ರಾಷ್ಟ್ರಗೀತೆಗೆ ಅಪಮಾನ: ಸಂಸದ ಕಾಗೇರಿ ವಜಾಕ್ಕೆ ಆಗ್ರಹ

| Published : Nov 08 2025, 01:15 AM IST

ಸಾರಾಂಶ

ರಾಷ್ಟ್ರಗೀತೆ ಬ್ರಿಟೀಷರ ಸ್ವಾಗತಕ್ಕೆ ರಚಿಸಿದ್ದ ಗೀತೆ ಎಂದು ಹೇಳಿ ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕೂಡಲೇ ಸಂಸದ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ನಗರದ ಶಿವಪ್ಪನಾಯಕ ವೃತ್ತದಲ್ಲಿ ಶುಕ್ರವಾರ ಎನ್‌ಎಸ್‌ಯುಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಷ್ಟ್ರಗೀತೆ ಬ್ರಿಟೀಷರ ಸ್ವಾಗತಕ್ಕೆ ರಚಿಸಿದ್ದ ಗೀತೆ ಎಂದು ಹೇಳಿ ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕೂಡಲೇ ಸಂಸದ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ನಗರದ ಶಿವಪ್ಪನಾಯಕ ವೃತ್ತದಲ್ಲಿ ಶುಕ್ರವಾರ ಎನ್‌ಎಸ್‌ಯುಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ರಾಷ್ಟ್ರಗೀತೆ ಒಪ್ಪದ, ರಾಷ್ಟ್ರ ಧ್ವಜ ಒಪ್ಪದ ನಕಲಿ ದೇಶ ಪ್ರೇಮಿಗಳಿಗೆ ದಿಕ್ಕಾರ , ನಕಲಿ ದೇಶ ಭಕ್ತ ಕಾಗೇರಿಗೆ ದಿಕ್ಕಾರ ಸೇರಿದಂತೆ ಹಲವು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನವೆಂಬರ್ 5ರಂದು ಹೊನ್ನಾವರದಲ್ಲಿ ಆಯೋಜಿಸಿದ್ದ ಏಕತೆಗಾಗಿ ನಡಿಗೆ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯು ರಾಷ್ಟ್ರಗೀತೆಯಾಗಬೇಕೆಂದು ಪ್ರತಿಪಾದಿಸುತ್ತಾ ಭಾರತೀಯರೆಲ್ಲರೂ ಒಪ್ಪಿಕೊಂಡಿರುವ ‘ಜನಗಣಮನ’ ರಾಷ್ಟ್ರಗೀತೆಯಾಗಿರುವುದು ಸರಿಯಲ್ಲ, ಅದನ್ನು ಬ್ರಿಟೀಷರ ಸ್ವಾಗತಕ್ಕೆ ರಚಿಸಿದ್ದು ಎಂದು ಹೇಳುವ ಮೂಲಕ ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ. ಇದನ್ನು ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಶಿಕ್ಷಣ ಸಚಿವರಾಗಿ, ವಿಧಾನಸಭೆಯ ಸ್ಪೀಕರ್ ಹುದ್ದೆಯಂತಹ ಸಾಂವಿಧಾನಿಕ ಹುದ್ದೆಗಳನ್ನು ನಿಭಾಯಿಸಿರುವ ವ್ಯಕ್ತಿ ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡಿ ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ. ಮನುವಾದಿ ಮನೋಭಾವದವರು ದೇಶದ ಸಂವಿಧಾನ, ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆಗಳನ್ನು ಒಪ್ಪುತ್ತಿಲ್ಲ, ಇವರೇ ಆಂತರಿಕವಾದ ನಿಜವಾದ ದೇಶದ್ರೋಹಿಗಳು ಎಂದು ಆರೋಪಿಸಿದರು.

ರಾಷ್ಟ್ರಪತಿಗಳು ಕೂಡಲೇ ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಸಂಸದ ಕಾಗೇರಿಯವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಅವರು ದೇಶದ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಲಯದ ಅಧ್ಯಕ್ಷರಾದ ಚೇತನ್ ಕೆ, ಯುವ ಮುಖಂಡರಾದ ಮಧುಸೂದನ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಡ್ಡು, ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷರಾದ ವಿಜಯ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.