ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನ ಖಂಡನೀಯ: ಬಿಜೆಪಿ ಆರೋಪ

| Published : Aug 21 2025, 02:00 AM IST

ಸಾರಾಂಶ

ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರು ನಾರಾಯಣ ಗುರು ಅವರನ್ನು ಅವಮಾನಿಸಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ್ ಹೇಳಿದ್ದಾರೆ.

ಪುತ್ತೂರು: ಧರ್ಮಸ್ಥಳದ ವಿಚಾರದಲ್ಲಿ ಹೇಳಿಕೆ ನೀಡಿರುವ ಹಿರಿಯರಾದ ಜನಾರ್ದನ ಪೂಜಾರಿ ಅವರ ವಿರುದ್ಧ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ವಿಶ್ವಗುರು ನಾರಾಯಣ ಗುರು ಹೆಸರನ್ನು ಎಳೆದು ತಂದು ಅವರನ್ನು ಅವಮಾನಿಸಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ್ ಹೇಳಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುದ್ಧನ ಅಹಿಂಸೆ, ಏಸುವಿನ ಪ್ರೇಮ, ಪೈಗಂಬರರ ಭ್ರಾತೃತ್ವ, ಶಂಕರಾಚಾರ್ಯರ ಜ್ಞಾವನ್ನು ತನ್ನ ತತ್ವ ಸಿದ್ಧಾಂತವನ್ನಾಗಿ ಅಳವಡಿಸಿಕೊಂಡಿರುವ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಲೇವಡಿ, ಅಪಸ್ವರ ಮತ್ತು ಲಘುವಾಗಿ ಪರಿಗಣಿಸಿ ವ್ಯಂಗ್ಯ ಮಾಡಿರುವ ಮಹಮ್ಮದ್ ಆಲಿ ಅವರಿಗೆ ಆಲದ ಮರದ ಅಗಲ ಮತ್ತು ಕಸ್ತೂರಿಯ ಪರಿಮಳ ಗೊತ್ತಿಲ್ಲ. ಹಲವಾರು ಮಂದಿ ಅನ್ಯ ಧರ್ಮೀಯರು ನಮ್ಮ ಕ್ಷೇತ್ರಕ್ಕೆ ಆಗಮಿಸಿ ಹರಕೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.ಸರ್ವ ಧರ್ಮಗಳನ್ನೂ ಗೌರವಿಸುತ್ತಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ವಿವಾದದ ಮಧ್ಯೆ ಎಳೆದು ತಂದಿರುವುದು ಖಂಡನೀಯ. ನಾರಾಯಣ ಗುರುಗಳು ದೇಶ ಕಂಡ ಮಹಾನ್ ಸಂತ. ವಿಶ್ವಗುರುವಾಗಿದ್ದವರು. ಮಹಮ್ಮದ್ ಆಲಿ ಅವರು ಗುರುಗಳ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಜೆಪಿ ಸಹಿಸುವುದಿಲ್ಲ ಎಂದರು.ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಪಕ್ಷದ ಪ್ರಮುಖರಾದ ಪುರುಷೋತ್ತಮ ಮುಂಗ್ಲಿಮನೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಒಬಿಸಿ ಮೋರ್ಚಾದ ನಿರಂಜನ್ ಉಪಸ್ಥಿತರಿದ್ದರು.