ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಸಂವಿಧಾನ ಬದಲಿಸುವ ಬಗ್ಗೆ ಮಾತನಾಡಿದ್ದಾರೆಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರ ವಿರುದ್ಧ ಸುಳ್ಳು, ಅವಹೇಳನಕಾರಿಯಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಕಾನೂನು ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಹೇಳಿದ್ದಾರೆ.ಅವರು ಉಡುಪಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.23ರಂದು ಬೆಂಗಳೂರಿನ ವಿವಿ ಪುರಂನ ವಾಸವಿ ವಿದ್ಯಾನಿಕೇತನ ಸಭಾಂಗಣದಲ್ಲಿ ನಡೆದ ಸಂತ ಸಮಾವೇಶದಲ್ಲಿ ಪೇಜಾವರ ಶ್ರೀ ಸೇರಿದಂತೆ 50ಕ್ಕೂ ಹೆಚ್ಚು ಸಂತರು ಆಗಮಿಸಿದ್ದರು. ಈ ಸಭೆಯಲ್ಲಿ ಪೇಜಾವರ ಶ್ರೀಗಳು ವಕ್ಫ್ ವಿವಾದದ ಬಗ್ಗೆ ಮಾತನಾಡಿದ್ದಾರೆ. ಸಂವಿಧಾನದ ಬಗ್ಗೆ ಮಾತನಾಡಿಲ್ಲ. ಆದರೂ ಕೆಲವು ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳು ಅವರ ಮಾತನ್ನು ತಿರುಚಿ ಪ್ರಕಟ ಮಾಡಿವೆ. ಕೆಲವು ಸಂಘಟನೆಗಳು ಶ್ರೀಗಳ ವಿರುದ್ಧ ಪ್ರತಿಭಟನೆಯನ್ನೂ ನಡೆಸಿ, ಶ್ರೀಗಳನ್ನು ಅಶ್ಲೀಲವಾಗಿ ನಿಂದಿಸಲಾಗಿದೆ. ಅವರೆಲ್ಲರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಬೆಂಗಳೂರಿನ ಡಿಜಿಪಿ ಮತ್ತು ಉಡುಪಿ ಜಿಲ್ಲಾ ಎಸ್ಪಿಯವರಿಗೆ ಮನವಿಯನ್ನು ನೀಡಲಾಗಿದೆ ಎಂದವರು ಹೇಳಿದರು.ಇಂತಹದ್ದೇ ಅಪಪ್ರಚಾರ ಬೇರೆ ಸಮುದಾಯಗಳಲ್ಲಿ ಆಗಿದ್ದರೆ ಪರಿಸ್ಥಿತಿಯೇ ಬೇರೆ ಇರುತ್ತಿತ್ತು. ಆದರೆ ಪೇಜಾವರ ಶ್ರೀಗಳು ಸಂಯಮದಿಂದ ಪರಿಸ್ಥಿತಿ ವಿಪರೀತಕ್ಕೆ ಹೋಗದಂತೆ ತಡೆದಿದ್ದಾರೆ. ಆದರೆ ಅವರ ಕೋಟ್ಯಂತರ ಅಭಿಮಾನಿಗಳಿಗೆ ನೋವಾಗಿದೆ. ಸಂತರ ಹಿಂದೆ ಯಾರೂ ಇಲ್ಲ ಎನ್ನುವ ಭಾವನೆ ಯಾರಲ್ಲೂ ಬೇಡ. ಶ್ರೀಗಳ ಬೆಂಬಲಕ್ಕೆ ಎಲ್ಲ ಹಿಂದೂ ಸಂಘಟನೆಗಳಿವೆ ಎಂದವರು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ವಿಹಿಂಪ ಪ್ರಾಂತ ಕಾರ್ಯದರ್ಶಿ ಜಗನ್ನಾಥ್ ಶಾಸ್ತ್ರಿ, ಸಹಕಾರ್ಯದರ್ಶಿ ಶರಣ್ ಪಂಪ್ವೆಲ್, ಪ್ರಮುಖರಾದ ಪ್ರೇಮಾನಂದ್ ಶೆಟ್ಟಿ, ಬಸವರಾಜ್ ಮುಂತಾದವರಿದ್ದರು.