ಸಾರಾಂಶ
ನರೇಗಾ ಯೋಜನೆಯಡಿ ದತ್ತು ಗ್ರಾಮ ಅಭಿವೃದ್ಧಿ । ಗ್ರಾಮಸ್ಥರೊಂದಿಗೆ ನಡೆದ ಪೂರ್ವಭಾವಿ ಸಭೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ಗ್ರಾಮದ ಸಮಗ್ರ ಅಭಿವೃದ್ಧಿಯೇ ದತ್ತು ಗ್ರಾಮದ ಉದ್ದೇಶ ಎಂದು ತಾಪಂ ಇಒ ದುಂಡಪ್ಪ ತುರಾದಿ ಹೇಳಿದರು.ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯಿತಿಯ ಮೋರನಹಳ್ಳಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ದತ್ತು ಗ್ರಾಮವಾಗಿ ಅಭಿವೃದ್ಧಿ ಪಡಿಸುವ ಕುರಿತು ಗ್ರಾಮಸ್ಥರೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಗಳು ಪ್ರತಿ ರಂಗದಲ್ಲೂ ಅಭಿವೃದ್ಧಿ ಹೊಂದಬೇಕು ಎಂಬುದು ದತ್ತು ಗ್ರಾಮದ ಉದ್ದೇಶ. ಗ್ರಾಮದ ಪ್ರತಿ ಕುಟುಂಬವು ಎಲ್ಲ ಮೂಲಭೂತ ಸೌಕರ್ಯ ಹೊಂದಬೇಕು. ಮಾದರಿ ಗ್ರಾಮ ಮಾಡುವುದೇ ದತ್ತು ಗ್ರಾಮದ ಮುಖ್ಯ ಉದ್ದೇಶ ಎಂದರು.
ಗ್ರಾಮದ ಪ್ರತಿ ವಾರ್ಡಿಗೆ ಅಧಿಕಾರಿಗಳು ಭೇಟಿ ನೀಡಲಿದ್ದು, ಗ್ರಾಮಸ್ಥರು ತಮ್ಮ ವಾರ್ಡಿಗೆ ಅವಶ್ಯ ಇರುವ ಹಾಗೂ ಗ್ರಾಮಕ್ಕೆ ಬೇಕಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಬೇಕು. ನರೇಗಾ ಯೋಜನೆ ಜೊತೆಗೆ ಗ್ರಾಪಂ, ಕೃಷಿ ಇಲಾಖೆ, ತೋಟಗಾರಿಕೆ, ಅರಣ್ಯ, ರೇಷ್ಮೇ ಇತರ ಇಲಾಖೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಕಾರಣ ಗ್ರಾಮಸ್ಥರು ಅವಶ್ಯ ಇರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.ತಾಪಂ ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ ಮಾತನಾಡಿ, ನರೇಗಾ ಯೋಜನೆಯಡಿ ವೈಯಕ್ತಿಕ, ಸಮುದಾಯ ಕಾಮಗಾರಿ ಕೈಗೊಳ್ಳಲಾಗುವುದು. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪ, ಚರಂಡಿ ವ್ಯವಸ್ಥೆ, ಸಿಸಿ ರಸ್ತೆ, ಶೌಚಾಲಯ, ಶಾಲಾ ಮೈದಾನ ಅಭಿವೃದ್ದಿ, ಶಾಲಾ ಆವರಣ ಗೋಡೆ, ಸಮುದಾಯ ಭವನ, ಬೋರವೆಲ್ ರೀಚಾರ್ಜ್ ಫಿಟ್, ಬಾವಿಗಳ ನಿರ್ಮಾಣ. ಮುಂತಾದ ಕಾಮಗಾರಿಗಳನ್ನು ವಿವಿಧ ಇಲಾಖೆಯ ಸಹಯೋಗದಲ್ಲಿ ಕೈಗೊಳ್ಳಲಾಗುವುದು. ಕಾರಣ ಗ್ರಾಮಸ್ಥರು ಸಮಗ್ರ ಕ್ರಿಯಾ ಯೋಜನೆ ತಯಾರಿಸಲು ಕಾಮಗಾರಿಗಳ ಮಾಹಿತಿ ನೀಡಿ ಎಂದರು.ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನದ ಜಾಥಾಕ್ಕೆ ಚಾಲನೆ:
ಇದೇ ವೇಳೆ ಉದ್ಯೊಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ, ಗ್ರಾಪಂ ಅಧ್ಯಕ್ಷ ದುರಗಪ್ಪ ಚಾಲನೆ ನೀಡಿದರು. ಶೌಚಾಲಯ ಹೊಂದಿರದ ಕುಟುಂಬಗಳ ಮನೆಗೆ ಭೇಟಿ ನೀಡಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮನವೊಲಿಸಿದರು.ಗ್ರಾಪಂ ಅಧ್ಯಕ್ಷ ದುರಗಪ್ಪ ಭಜಂತ್ರಿ, ಗ್ರಾಪಂ ಸದಸ್ಯರಾದ ಅಂದಪ್ಪ ಚಿಲಗೋಡ್ರ, ಭರಮಪ್ಪ ಹುಳ್ಳಿ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಸಂಗಟಿ, ಪ್ರಮುಖರಾದ ಶರಣಪ್ಪ ಮಡಿವಾಳರ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ಎಸ್.ಬಿ.ಎಮ್ ಸಮಾಲೋಚರಾದ ಬಸಮ್ಮ ಹುಡೇದ, ಮಾರುತಿ ನಾಯಕರ, ರಾಮಣ್ಣ ಬಂಡಿಹಾಳ, ಸುನೀಲ್, ಶಿವಕುಮಾರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ವೆಂಕಪ್ಪ ಶಿಗನಹಳ್ಳಿ, ಪಿಡಿಒ ದಾನಪ್ಪ ಸಂಗಟಿ, ತಾಂತ್ರಿಕ ಸಹಾಯಕ ಪ್ರವೀಣ ಗದಗ, ಬೇರ್ ಫೂಟ್ ಟೆಕ್ನಿಷಿಯನ್ ಮಾಳಪ್ಪ ದೇವರಮನಿ ಗ್ರಾಮಸ್ಥರು ಇದ್ದರು.