ರೈತರು ಕೇವಲ ಏಕಬೆಳೆಗೆ ಮೊರೆಹೋಗದೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳುವುದರ ಜೊತೆಗೆ ಸಾವಯವ ಹಾಗೂ ನೈಸರ್ಗಿಕ ಕೃಷಿ ಮಾಡಲು ಸಾಧ್ಯವಾಗುತ್ತದೆ ಎಂದು ದಾವಣಗೆರೆ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞರಾದ ಮಲ್ಲಿಕಾರ್ಜುನ ಬಿ.ಒ. ಅಭಿಪ್ರಾಯಪಟ್ಟಿದ್ದಾರೆ.
- ಬೇಸಾಯ ತಜ್ಞ ಬಿ.ಒ.ಮಲ್ಲಿಕಾರ್ಜುನ ಸಲಹೆ । ‘ಖೇತ್ ಬಚಾವ್ ಅಭಿಯಾನ’ ಕಾರ್ಯಕ್ರಮ - - -
ಕನ್ನಡಪ್ರಭ ವಾರ್ತೆ ಜಗಳೂರುರೈತರು ಕೇವಲ ಏಕಬೆಳೆಗೆ ಮೊರೆಹೋಗದೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳುವುದರ ಜೊತೆಗೆ ಸಾವಯವ ಹಾಗೂ ನೈಸರ್ಗಿಕ ಕೃಷಿ ಮಾಡಲು ಸಾಧ್ಯವಾಗುತ್ತದೆ ಎಂದು ದಾವಣಗೆರೆ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞರಾದ ಮಲ್ಲಿಕಾರ್ಜುನ ಬಿ.ಒ. ಅಭಿಪ್ರಾಯಪಟ್ಟರು.
ತಾಲೂಕಿನ ದೊಣ್ಣೆಹಳ್ಳಿ, ಕಲೆದೇವರಪುರ, ಅರಸಿನಗುಂಡಿ ಹಾಗೂ ರಸ್ತೆಮಾಕುಂಟೆ ಗ್ರಾಮಗಳಲ್ಲಿ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ಆತ್ಮ ಯೋಜನೆ ಜಗಳೂರು ಜಂಟಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಖೇತ್ ಬಚಾವ್ ಅಭಿಯಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪರಿಸರ ಸಂರಕ್ಷಣೆ-ಮಣ್ಣಿನ ಸಮೃದ್ಧಿ:
ದ್ವಿದಳ ಧಾನ್ಯ ಬೆಳೆಗಳಿಗೆ ರೈತರು ಹೆಚ್ಚು ಒತ್ತು ನೀಡಬೇಕು. ವಿಶೇಷವಾಗಿ ತಾಲೂಕಿನ ಪ್ರಮುಖ ಬೆಳೆಯಾದ ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿ, ಅವರೇ ಹಾಗೂ ಅಲಸಂದಿ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ, ಪರಿಸರವನ್ನೂ ಸಂರಕ್ಷಿಸಬಹುದು. ಜೈವಿಕ ಹಾಗೂ ಹಸಿರೆಲೆ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಗುಣಧರ್ಮವನ್ನು ಮತ್ತಷ್ಟು ಸಮೃದ್ಧಿಗೊಳಿಸಬಹುದು ಎಂದು ಸಲಹೆ ನೀಡಿದರು.ಇಳುವರಿ ಹೆಚ್ಚಳಕ್ಕೆ ಬೀಜೋಪಚಾರ ಅತ್ಯಗತ್ಯ:
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಸ್ಯ ಸಂರಕ್ಷಣಾ ತಜ್ಞರಾದ ಡಾ. ಅವಿನಾಶ್ ಟಿ.ಜಿ. ಮಾತನಾಡಿ, ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯಲು ಬಿತ್ತನೆಗೆ ಮುನ್ನ ಬೀಜೋಪಚಾರ ಮಾಡುವುದು ಸೂಕ್ತ ಪದ್ಧತಿಯಾಗಿದೆ ಎಂದರು.ಇದೇ ವೇಳೆ ಪ್ರಾತ್ಯಕ್ಷಿಕೆ ಮೂಲಕ ತೊಗರಿ ಬೀಜಕ್ಕೆ ಪ್ರತಿ ಎಕರೆಗೆ 500 ಗ್ರಾಂ ಜೈವಿಕ ಗೊಬ್ಬರಗಳಾದ ರೈಸೋಬಿಯಂ, ರಂಜಕ ಕರಗಿಸುವ ಬ್ಯಾಕ್ಟೀರಿಯಾ ಹಾಗೂ ಪ್ರತಿ ಕೆಜಿ ಬೀಜಕ್ಕೆ 4 ಗ್ರಾಂ ಜೈವಿಕ ಪೀಡೆನಾಶಕ ಟ್ರೈಕೋಡರ್ಮ ಬಳಸಿ ಬೀಜೋಪಚಾರ ಮಾಡುವ ವಿಧಾನ ರೈತರಿಗೆ ಮನವರಿಕೆ ಮಾಡಿಕೊಡಲಾಯಿತು.
ಸೌಲಭ್ಯಗಳ ಸದ್ಬಳಕೆಗೆ ಮನವಿ:ಕೃಷಿ ಅಧಿಕಾರಿ ಜೀವಿತ ಮಾತನಾಡಿ, ಕೃಷಿ ಇಲಾಖೆಯಿಂದ ಸಿಗುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಇಲಾಖೆಯಿಂದ ಉಚಿತವಾಗಿ ವಿತರಿಸಲಾಗಿರುವ ತೊಗರಿ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ಬಳಸಿ ಉತ್ತಮ ಬೆಳೆ ತೆಗೆಯುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಆತ್ಮ ಯೋಜನೆಯ ಅಧಿಕಾರಿಗಳು, ಕೃಷಿ ಇಲಾಖೆಯ ಸಿಬ್ಬಂದಿ, ಕೃಷಿ ಸಖಿಯರು ಹಾಗೂ ಗ್ರಾಮಗಳ ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು.- - -
(ಕೋಟ್) ಕೃಷಿ ವಿಜ್ಞಾನಿಗಳು ಶಿಫಾರಸು ಮಾಡುವ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡರೆ ಮಣ್ಣಿನ ಆರೋಗ್ಯದ ಜೊತೆಗೆ ಇಳುವರಿಯನ್ನೂ ಗಣನೀಯವಾಗಿ ಹೆಚ್ಚಿಸಿಕೊಳ್ಳಬಹುದು.- ರೇಣುಕುಮಾರ್, ತಾಲೂಕು ಅಧಿಕಾರಿ, ಆತ್ಮ ಯೋಜನೆ.
- - --12ಜೆಜಿಎಲ್1:
ಜಗಳೂರು ತಾಲೂಕಿನ ದೊಣ್ಣೆಹಳ್ಳಿ, ಕಲೆದೇವರಪುರ, ಅರಸಿನಗುಂಡಿ ಹಾಗೂ ರಸ್ತೆಮಾಕುಂಟೆ ಗ್ರಾಮಗಳಲ್ಲಿ ‘ಖೇತ್ ಬಚಾವ್ ಅಭಿಯಾನ’ ಕಾರ್ಯಕ್ರಮ ನಡೆಯಿತು.