ಧಾರವಾಡ:

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​ (ನಬಾರ್ಡ್​) ಹಾಗೂ ಅಮರಗೋಳದ ಸಿದ್ಧೇಶ್ವರ ಗ್ರಾಮೀಣ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಕುಂಬಾಪುರದ ತೋಟಗಾರಿಕಾ ಇಲಾಖೆಯ ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರದಲ್ಲಿ ಜಿಲ್ಲೆಯ ರೈತರಿಗೆ ತರಕಾರಿ ಬೆಳೆಗಳಲ್ಲಿ ಸಮಗ್ರ ಬೇಸಾಯ ಪದ್ಧತಿಗಳ ಕುರಿತು ವಿಶೇಷ ತರಬೇತಿ ಕಾರ್ಯಕ್ರಮ ನಡೆಯಿತು.

ಸುಧಾರಿತ ತಳಿಗಳ ಆಯ್ಕೆ, ಸಸಿ ಉತ್ಪಾದನೆ, ಮಣ್ಣಿನ ಆರೋಗ್ಯ ನಿರ್ವಹಣೆ, ಪೋಷಕಾಂಶಗಳ ಸಮತೋಲನ ಬಳಕೆ, ನೀರಿನ ಸಮರ್ಥ ನಿರ್ವಹಣೆ, ಸೂಕ್ಷ್ಮ ನೀರಾವರಿ ಪದ್ಧತಿ, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ, ಸಮಗ್ರ ಪೋಷಕಾಂಶ ನಿರ್ವಹಣೆ , ಸಾವಯವ ಹಾಗೂ ಜೈವಿಕ ಒಳಸೇರಿಕೆಗಳ ಬಳಕೆ, ಕೊಯ್ಲು ನಂತರದ ನಿರ್ವಹಣೆ ಮತ್ತು ಮಾರುಕಟ್ಟೆ ಸಂಪರ್ಕದ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು.

ರೈತರಿಗೆ ಪ್ರಾಯೋಗಿಕ ಪ್ರದರ್ಶನ ಹಾಗೂ ಕ್ಷೇತ್ರಮಟ್ಟದ ಅನುಭವಗಳ ಮೂಲಕ ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯ ಮಹತ್ವ ವಿವರಿಸಲಾಯಿತು. ಹವಾಮಾನ ಬದಲಾವಣೆಗಳ ಸವಾಲು ಎದುರಿಸುವುದು, ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು ಹಾಗೂ ಹೆಚ್ಚಿನ ಆದಾಯ ಗಳಿಸಲು ಸಮಗ್ರ ಕೃಷಿ ವಿಧಾನಗಳ ಅಗತ್ಯತೆಯನ್ನು ತಜ್ಞರು ತಿಳಿಸಿದರು.

2026ರ ಮೇ 21ರಿಂದ ಜೂ. ​2ರ ವರೆಗೆ ನಡೆದ ಈ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 60 ರೈತರು, ಕೃಷಿ ಆಸಕ್ತರು ಹಾಗೂ ಯುವ ಕೃಷಿಕರು ಪಾಲ್ಗೊಂಡಿದ್ದರು. ತರಬೇತಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಸಮಾರೋಪದಲ್ಲಿ ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ. ಅಶೋಕ ಸಜ್ಜನ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕಾಶಿನಾಥ ಭದ್ರಣ್ಣನವರ, ಸಿದ್ಧೇಶ್ವರ ಗ್ರಾಮೀಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ, ಕಾರ್ಯದರ್ಶಿ ಮಂಜುಳಾ ಹೊರಕೇರಿ ಇದ್ದರು. ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರದ ಯೋಜನಾಧಿಕಾರಿ ಸಂತೋಷ ಸಪ್ಪಂಡಿ ಅಧ್ಯಕ್ಷತೆ ವಹಿಸಿದ್ದರು.