ಅಲಸಂದೆ ಬೆಳೆಯ ಸಮಗ್ರ ನಿರ್ವಹಣೆ: ಕ್ಷೇತ್ರೋತ್ಸವ

| Published : Aug 04 2024, 01:21 AM IST / Updated: Aug 04 2024, 01:22 AM IST

ಸಾರಾಂಶ

ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಪರಿಶಿಷ್ಟ ಜಾತಿ ಉಪಯೋಜನೆಯಡಿ ಪೂರ್ವ ಮುಂಗಾರು ಹಂಗಾಮಿನಲ್ಲಿ ಸುಧಾರಿತ ಅಲಸಂದೆ ತಳಿ ಕೆಬಿಸಿ-9 ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭವಾರ್ತೆ ಚಾಮರಾಜನಗರ

ರೈತರು ಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸಿ ಬೆಳೆಯುವುದರಿಂದ ಉತ್ತಮ ಗುಣಮಟ್ಟದ ಉತ್ಪನ್ನ ದೊರೆಯುತ್ತದೆ ಎಂದು ಕೆವಿಕೆ ಮುಖ್ಯಸ್ಧ ಡಾ.ಯೋಗೇಶ್‌.ಜಿ.ಎಸ್‌ ತಿಳಿಸಿದರು.

ಅಲಸಂದೆ ಬೆಳೆಯ ಸಮಗ್ರ ನಿರ್ವಹಣೆ ಕುರಿತು ಕೊಡಸೋಗೆ ಗ್ರಾಮದಲ್ಲಿ ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಡೆದ ಪರಿಶಿಷ್ಟ ಜಾತಿ ಉಪಯೋಜನೆಯಡಿ ಪೂರ್ವ ಮುಂಗಾರು ಹಂಗಾಮಿನಲ್ಲಿ ಸುಧಾರಿತ ಅಲಸಂದೆ ತಳಿ ಕೆಬಿಸಿ-೯ ಪರಿಚಯ, ಬೀಜೋಪಚಾರ, ಸೂಕ್ತ ಅಂತರ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಕೀಟ ಹಾಗೂ ರೋಗ ನಿರ್ವಹಣೆ ಸುಧಾರಿತ ತಂತ್ರಜ್ಞಾನಗಳ ಪ್ರಸಾರಣೆಗಾಗಿ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆ.ಬಿ.ಸಿ-೯ ಅಲ್ಪಾವಧಿ ಅಲಸಂದೆ ತಳಿಯಾಗಿದ್ದು, ೮೦ ರಿಂದ ೮೫ ದಿನಗಳಲ್ಲಿ ಕಟಾವಿಗೆ ಬರುವುದು, ಮಧ್ಯಮ ದಪ್ಪ ಹಾಗೂ ತಿಳಿ ಕಂದು ಬಣ್ಣದ ಕಾಳುಗಳನ್ನು ಹೊಂದಿರುತ್ತದೆ ಎಂದು ತಿಳಿಸಿದರು.

ರೈತರು ಬೀಜಕ್ಕಾಗಿ ಕೃಷಿ ವಿಜ್ಞಾನ ಕೇಂದ್ರ ವಿ.ಸಿ.ಫಾರಂ ಮಂಡ್ಯದಲ್ಲಿರುವ ಬೀಜ ಕೇಂದ್ರದ ಮುಖಾಂತರ ಕೊಂಡುಕೊಳ್ಳಬೇಕಾಗುತ್ತದೆ. ಇದಕ್ಕೆ ಉತ್ತಮ ಧಾರಣೆ ಒದಗಿಸಲಾಗುತ್ತಿದೆ, ಆದ್ದರಿಂದ ರೈತ ಬಾಂಧವರು ಈ ಸುಧಾರಿತ ತಳಿಯನ್ನು ಅಳವಡಿಸಿಕೊಂಡು ಗುಣಮಟ್ಟದ ಹಾಗೂ ಅಧಿಕ ಇಳುವರಿ ಪಡೆದು ಬೀಜೋತ್ಪಾದನೆಗೆ ಸಹಕರಿಸಬೇಕೆಂದು ಕರೆ ನೀಡಿದರು.

ವಿ.ಸಿ. ಫಾರಂ ಮಂಡ್ಯ ಕೃಷಿ ವಿಜ್ಞಾನ ಕೇಂದ್ರದ ಬೀಜ ಕೇಂದ್ರದ ಮನೋಹರ್ ಅವರು ಕೇಂದ್ರದಿಂದ ರೈತರಿಗೆ ಕೈಗೊಳ್ಳುತ್ತಿರುವ ಬೀಜೋತ್ಪಾದನಾ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳ ವಿವರಣೆ ನೀಡಿದರಲ್ಲದೇ, ಹೆಚ್ಚಿನ ರೈತರು ಬೀಜೋತ್ಪಾದನೆ ಕೈಗೊಳ್ಳಲು ಉತ್ತೇಜಿಸಿದರು.

ಪ್ರಗತಿಪರ ರೈತ ಶಿವಪ್ಪ ಮಾತನಾಡಿ, ಕೆಬಿಸಿ-೯ ಅಲಸಂದೆ ತಳಿಯು ತಾವು ಹಿಂದೆ ಬೆಳೆಯುತ್ತಿದ್ದ ಸ್ಥಳೀಯ ತಳಿಗಿಂತ ಕಡಿಮೆ ಅವಧಿಯದಾಗಿದ್ದು, ಇದಕ್ಕೆ ಯಾವುದೇ ರೀತಿಯ ರೋಗ ಕಂಡುಬಂದಿಲ್ಲ. ಅದರಲ್ಲೂ, ಹಳದಿ ನಂಜು ರೋಗ ಸಂಪೂರ್ಣವಾಗಿ ನಿಯಂತ್ರಿತಗೊಂಡಿದ್ದು ಹಿಂದೆ ಬೆಳೆಯುತ್ತಿದ್ದ ಸ್ಥಳೀಯ ತಳಿಯು ಈ ರೋಗಕ್ಕೆ ತುತ್ತಾಗಿ ಬೆಳೆ ನಷ್ಟವಾಗುತ್ತಿತ್ತು ಎಂದು ತಿಳಿಸಿದರು.

ಈ ತಳಿ ಅಳವಡಿಕೆಯಿಂದ ಶೇ.೨೫ ರಿಂದ ೩೦ ರಷ್ಟು ಹೆಚ್ಚಿನ ಇಳುವರಿ ಅಪೇಕ್ಷಿಸಿದ್ದು, ಈಗ ಕಟಾವಿನ ಕಾರ್ಯ ಪ್ರಗತಿಯಲ್ಲಿದೆ. ವಿ.ಸಿ.ಫಾರಂನ ಕೃಷಿ ವಿಜ್ಞಾನ ಕೇಂದ್ರದ ಬೀಜ ಕೇಂದ್ರಕ್ಕೆ ಈ ಉತ್ಪನ್ನವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ರಾಮಯ್ಯ, ಸಿದ್ದರಾಜು, ಮಹದೇವಸ್ವಾಮಿ ಮತ್ತು ಇತರ ರೈತರು ಪಾಲ್ಗೊಂಡಿದ್ದರು.