ಸಾರಾಂಶ
ಕಾಂಗ್ರೆಸ್ ಸರ್ಕಾರ ಬಹುವಿಧದ ಅಂಗವಿಕಲರ ಪೋಷಣೆ ಮಾಡುವ ಪೋಷಕರಿಗೂ 1000 ರು. ಮಾಶಾಸನ ನೀಡುವ ಯೋಜನೆ ತಂದಿದೆ.
ಕನ್ನಡಪ್ರಭ ವಾರ್ತೆ ಶಿರಾ
ಕಾಂಗ್ರೆಸ್ ಸರ್ಕಾರ ಬಹುವಿಧದ ಅಂಗವಿಕಲರ ಪೋಷಣೆ ಮಾಡುವ ಪೋಷಕರಿಗೂ 1000 ರು. ಮಾಶಾಸನ ನೀಡುವ ಯೋಜನೆ ತಂದಿದೆ. ಎಲ್ಲಾ ಸೌಲಭ್ಯಗಳೂ ಸಹ ಪ್ರತಿ ಗ್ರಾಮಗಳಿಗೂ ತಲುಪಬೇಕು. ವಿಶೇಷಚೇತನರು ಕೀಳರಿಮೆ ತೊರೆದು ಸ್ವಾವಲಂಬನೆ ಬದುಕು ನಡೆಸಬೇಕು ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಮೊಬಿಲಿಟಿ ಇಂಡಿಯಾ ಸಂಸ್ಥೆಯ 30ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷಚೇತನ ಮಕ್ಕಳಿಗೆ ಸಲಕರಣೆ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮೊಬಿಲಿಟಿ ಇಂಡಿಯಾ ಸಂಸ್ಥೆಯೂ ತಮ್ಮ 30ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಚೇತನರಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಮೊಬಿಲಿಟಿ ಇಂಡಿಯಾ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಅಲ್ಬಿನಾ ಶಂಕರ್ ಮಾತನಾಡಿ, ವಿಶೇಷಚೇತನರು ಪಡೆದ ಸಾಧನ ಸಲಕರಣೆಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಜತೆಗೆ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಹೇಳಿದರು.ಮೊಬಿಲಿಟಿ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಸ್ವಿಜರ್ಲ್ಯಾಂಟ್‌ನ ಮಾರ್ಕೈ ಮಿಲ್ಲರ್ ಮಾತನಾಡಿ, ವಿಶೇಷಚೇತನ ಮಕ್ಕಳು ಆರೋಗ್ಯ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.
ಸಂಸ್ಥಾಪನಾ ನಿರ್ದೇಶಕ ಚಾಪಲ್ ಕನ್ನಬಿಸ್ ಮಾತನಾಡಿ, ವಿಕಲಚೇತನ ಮಕ್ಕಳ ಅಭಿವೃದ್ಧಿ ಹಾಗೂ ಸಮಾಜದಲ್ಲಿ ಉತ್ತಮ ಬಾಂಧವ್ಯ ರೂಪಿಸಿಕೊಂಡು ಹೋಗಬೇಕು ಎಂದರು.ತಾಲೂಕಿನ 43 ವಿಕಲಚೇತನ ಮಕ್ಕಳಿಗೆ 8 ಲಕ್ಷ ರು. 88 ವಿವಿಧ ಸಲಕರಣೆ ವಿತರಿಸಲಾಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅನಂತರಾಜು, ಎಂ.ಆರ್.ಡಬ್ಲ್ಯೂ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಚಿತ್ತಯ್ಯ, ಮೊಬಿಲಿಟಿ ಇಂಡಿಯಾ ವ್ಯವಸ್ಥಾಪಕ ಆನಂದ್.ಎಸ್.ಎನ್., ಮಾಗೋಡು ಕಂಬಣ್ಣ, ಸುಮಂತ್ ಸೇರಿದಂತೆ ಹಲವರು ಹಾಜರಿದ್ದರು.