ಹವಾಮಾನ ಸ್ಥಿತಿಸ್ಥಾಪಕ ಕೃಷಿಗೆ ಹವಾಮಾನ-ಸ್ಮಾರ್ಟ್ ತಂತ್ರಜ್ಞಾನಗಳು, ಮಣ್ಣು ಮತ್ತು ನೀರಿನ ನಿರ್ವಹಣೆ, ಬೆಳೆಗಳ ಆಯ್ಕೆಗಳು ಮತ್ತು ಸಕಾಲಿಕ ಸಲಹೆಗಳನ್ನು ಒಳಗೊಂಡ ಸಂಯೋಜಿತ ಯೋಜನೆಗಳ ಅಥವಾ ಪ್ಯಾಕೇಜ್‌ಗಳ ಅಗತ್ಯವಿದೆ ಎಂದು ಬಾಂಗ್ಲಾದೇಶದ ಸಿಐಆರ್‌ಡಿಎಪಿ ಮಹಾನಿರ್ದೇಶಕ ಡಾ.ಪಿ.ಚಂದ್ರಶೇಖರ ತಿಳಿಸಿದರು.
ಶಿವಮೊಗ್ಗ: ಹವಾಮಾನ ಸ್ಥಿತಿಸ್ಥಾಪಕ ಕೃಷಿಗೆ ಹವಾಮಾನ-ಸ್ಮಾರ್ಟ್ ತಂತ್ರಜ್ಞಾನಗಳು, ಮಣ್ಣು ಮತ್ತು ನೀರಿನ ನಿರ್ವಹಣೆ, ಬೆಳೆಗಳ ಆಯ್ಕೆಗಳು ಮತ್ತು ಸಕಾಲಿಕ ಸಲಹೆಗಳನ್ನು ಒಳಗೊಂಡ ಸಂಯೋಜಿತ ಯೋಜನೆಗಳ ಅಥವಾ ಪ್ಯಾಕೇಜ್‌ಗಳ ಅಗತ್ಯವಿದೆ ಎಂದು ಬಾಂಗ್ಲಾದೇಶದ ಸಿಐಆರ್‌ಡಿಎಪಿ ಮಹಾನಿರ್ದೇಶಕ ಡಾ.ಪಿ.ಚಂದ್ರಶೇಖರ ತಿಳಿಸಿದರು.ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ನ್ಯಾಚುರಲ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ ವಿಶ್ವವಿದ್ಯಾಲಯ, ಗ್ರೀನ್‌ವಿಚ್, ಯುಕೆ ಸಹಯೋಗ ಮತ್ತು ಐಎಸ್‌ಪಿಎಫ್-ಬ್ರಿಟಿಷ್ ಕೌನ್ಸಿಲ್, ನವದೆಹಲಿಯ ಐಸಿಎಸ್‌ಎಸ್‌ಆರ್ ಬೆಂಬಲದೊಂದಿಗೆ ‘ಹವಾಮಾನ ಸ್ಥಿತಿಸ್ಥಾಪಕತ್ವದ ಕೃಷಿ ಸಂಶೋಧನೆ ಮತ್ತು ಸಹಯೋಗವನ್ನು ಮುಂದುವರಿಸುವಲ್ಲಿ ಆರಂಭಿಕ ವೃತ್ತಿಜೀವನದ ಸಂಶೋಧಕರನ್ನು ಸಬಲೀಕರಣಗೊಳಿಸುವುದು’ ಎಂಬ ವಿಷಯದ ಕುರಿತು ಮಲೆನಾಡು ಶೈರ್ ಎಕೊ ರೆಸಾರ್ಟ್‌ನಲ್ಲಿ ಏರ್ಪಡಿಸಿರುವ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಳೆ ವಿಫಲವಾದಾಗ, ಪ್ರವಾಹಗಳು ಬಂದಾಗ ಅಥವಾ ಕೀಟಗಳು ಉಲ್ಬಣಗೊಂಡಾಗ ಏನು ಮಾಡಬೇಕು ಎಂಬಂತಹ ಸ್ಪಷ್ಟ ಯೋಜನೆಗಳನ್ನು ಈ ಪ್ಯಾಕೇಜ್‌ಗಳು ಒಳಗೊಂಡಿರಬೇಕು ಎಂದರು.ಹವಾಮಾನ ಬದಲಾವಣೆಯು ಎಲ್ಲಾ ಸಮುದಾಯಗಳ ಮೇಲೆ ಒಂದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಇದು ಸ್ಥಳೀಯ ಮಣ್ಣು, ಸೂಕ್ಷ್ಮ ಹವಾಮಾನ, ಸಂಸ್ಕೃತಿಗಳು ಮತ್ತು ಇತಿಹಾಸಗಳಿಂದ ಸಂದರ್ಭೋಚಿತವಾಗಿ ರೂಪುಗೊಂಡಿದೆ. ಅದಕ್ಕಾಗಿಯೇ ಸಂಶೋಧಕರು ತಮ್ಮ ವೃತ್ತಿಜೀವನದ ಆರಂಭದಲ್ಲಿ, ತಲೆಮಾರುಗಳಿಂದ ಸಂಸ್ಕರಿಸಿದ ಸ್ಥಳೀಯ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳನ್ನು ಗುರುತಿಸಿ ಮುಂದುವರಿಯಬೇಕು ಎಂದು ಹೇಳಿದರು. ಹವಾಮಾನ ಸಂಶೋಧನೆಯು ಉತ್ಪಾದನೆಯನ್ನು ಮೀರಿ ನೋಡಬೇಕು ಮತ್ತು ಕೊಯ್ಲಿನ ನಂತರದ ನಷ್ಟಗಳನ್ನು ಕಡಿಮೆ ಮಾಡುವ, ಸಂಗ್ರಹಣೆ ಮತ್ತು ಸಂಸ್ಕರಣೆಯನ್ನು ಸುಧಾರಿಸುವ, ಮೌಲ್ಯ ಸರಪಳಿಗಳನ್ನು ಬಲಪಡಿಸುವ ಮತ್ತು ಮಾರುಕಟ್ಟೆ ಮಟ್ಟದ ತ್ಯಾಜ್ಯವನ್ನು ತಡೆಯುವ ತಂತ್ರಗಳನ್ನು ಸಂಯೋಜಿಸಬೇಕು ಎಂದು ತಿಳಿಸಿದರು. ಇಂಡೋನೇಷ್ಯಾದ 2000 ರೈತರು ಅರಣ್ಯ ಸಂರಕ್ಷಣೆಯೊಂದಿಗೆ ಕಾಫಿ ಬೆಳೆದು ಆದಾಯ ಗಳಿಸುತ್ತಾರೆ. ವಿಯೆಟ್ನಾಂ ಸಹಕಾರಿ ಸಂಸ್ಥೆಗಳಿಂದ ಪರಿಸರ ಸಂರಕ್ಷಣೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದರು.ಫಿಲಿಪೈನ್ಸ್- ಸಹಕಾರಿಯು ವಿಪತ್ತು ನಿರ್ವಹಣೆಗೆ ಸಿದ್ಧತೆ ಮಾಡಿಕೊಂಡಿದ್ದು, ಬಾಂಗ್ಲಾದೇಶ-ಸಿಇಡಬ್ಲ್ಯೂಡಿಸಿ-ಮಹಿಳಾ ಸಹಕಾರಿಗಳು 73000 ಸೌರ ಘಟಕಗಳನ್ನು ಸ್ಥಾಪಿಸಿ ಆದಾಯ ಗಳಿಸುತ್ತಿದ್ದು, ಫಿಜಿ-ಬೌಮಾ ಜಲಪಾತ ಬಳಿಯ ಕೃಷಿಕ ಕುಟುಂಬಗಳು ಪ್ರವಾಸಿ ಗೈಡ್ ಮಾಡುವ ಮೂಲಕ ಆದಾಯ ಗಳಿಸುತ್ತಿವೆ. ಈ ರೀತಿಯ ಆದಾಯ ಗಳಿಕೆಯ ಅಭ್ಯಾಸಗಳನ್ನು ಉತ್ತೇಜಿಸಬೇಕಿದೆ. ರೈತರಿಗೆ ಕೈಗೆಟುಕುವ ಡಿಜಿಟಲ್ ಪರಿಹಾರಗಳನ್ನು ನೀಡಬೇಕಿದೆ. ಸಂಶೋಧನಾ ವಿಸ್ತರಣಾ ಸೇವೆಗಳನ್ನು ಬಲಪಡಿಸಬೇಕು ಎಂದರು.
ಯುಎಎಸ್, ಬೆಂಗಳೂರು ಕುಲಪತಿ ಡಾ.ಎಸ್.ವಿ.ಸುರೇಶ್ ಮಾತನಾಡಿ, ಹವಾಮಾನ ಬದಲಾವಣೆ ಕೃಷಿ ಮೇಲೆ ಬಹಳಷ್ಟು ಪರಿಣಾಮ ಬೀರುತ್ತಿದ್ದು, ಹವಾಮಾನ ಬದಲಾವಣೆಯಿಂದ ಕೃಷಿಕರು ಒಂದು ಕಡೆ ಬಲಿಪಶುಗಳಾಗುತ್ತಿದ್ದರೆ ಇನ್ನೊಂದೆಡೆ ಕೃಷಿಯಿಂದಲೂ ಹವಾಮಾನ ಬದಲಾವಣೆಯಾಗುತ್ತಿದೆ. ಆದ ಕಾರಣ ಕೃಷಿಸ್ನೇಹಿಯಾದ ಸಂಶೋಧನೆಗಳನ್ನು, ಸಂಶೋಧಕರನ್ನು ನಾವು ಉತ್ತೇಜಿಸಬೇಕು. ಮಳೆ, ಉಷ್ಣತೆ ವೈಪರೀತ್ಯ ತಡೆಯುವ ತಳಿಗಳ ಅಭಿವೃದ್ಧಿಯಾಗಬೇಕು ಎಂದರು.ಯುಎಸ್‌ಎ ವಾಷಿಂಗ್ಟನ್ ಡಿಸಿ ಐಎಸ್‌ಎಫ್‌ಆರ್‌ಐನ ಸಂಶೋಧನಾ ಸಹೋದ್ಯೋಗಿ ಡಾ.ಸುರೇಶ್ ಚಂದ್ರಬಾಬು ಮಾತನಾಡಿ, ಹಿರಿಯ ಸಂಶೋಧಕರ ಅನುಭವದಿಂದ ಯುವ ಸಂಶೋಧಕರನ್ನು ಉತ್ತೇಜಿಸಬೇಕು. ಹವಾಮಾನ ಸ್ಥಿತಿಸ್ಥಾಪಕತ್ವ ಸಾಧಿಸಲು ಸಂಶೋಧನೆ ಅತಿ ಮುಖ್ಯವಾಗಿದೆ ಎಂದರು.
ಯುನೈಟೆಡ್ ಕಿಂಗ್‌ಡಮ್‌ನ ಗ್ರೀನ್‌ವಿಚ್ ವಿಶ್ವವಿದ್ಯಾಲಯದ ಕರ್ನ ಹ್ಯಾನ್ಸನ್ ಮಾತನಾಡಿ, ಹವಾಮಾನ ಬದಲಾವಣೆ ಒಂದು ನಿಜವಾದ ಸವಾಲಾಗಿದ್ದು, ನವೀನ ಸಂಶೋಧನೆಗಳು ಮತ್ತು ಇಂತಹ ಕಾರ್ಯಾಗಾರಗಳು ಎಲ್ಲರೂ ಒಟ್ಟಾಗಿ ಸೇರಿ ಪರಿಹಾರೋಪಾಯಗಳನ್ನು ಕಂಡು ಹಿಡಿಯಲು ಒಂದು ಉತ್ತಮ ಅವಕಾಶವಾಗಿದೆ ಎಂದರು.ಸಿಆರ್‌ಎಆರ್‌ಸಿ -2026 ನ ಸಂಘಟನಾ ಕಾರ್ಯದರ್ಶಿ ಡಾ.ಎಚ್.ಎಂ.ವಿನಯ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿಯ ಮೇಲೆ ಹವಾಮಾನ ಬದಲಾವಣೆಯಿಂದಾಗಿ ಹೆಚ್ಚುತ್ತಿರುವ ಸವಾಲುಗಳನ್ನು ಪರಿಹರಿಸುವಲ್ಲಿ ಜಾಗತಿಕ ಪಾಲುದಾರಿಕೆಗಳನ್ನು ಬಲಪಡಿಸುವುದು ಮತ್ತು ಸಂಶೋಧನಾ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಕಾರ್ಯಾಗಾರದ ಗುರಿಯಾಗಿದೆ ಎಂದು ತಿಳಿಸಿದರು.ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ ಜಗದೀಶ ಅಧ್ಯಕ್ಷತೆ ವಹಿಸಿದ್ದರು.
ಭಾರತ ಬ್ರಿಟಿಷ್ ಕೌನ್ಸಿಲ್‌ನ ಕಾರ್ಯಕ್ರಮಗಳು ಮತ್ತು ಪಾಲುದಾರಿಕೆಗಳ ಮುಖ್ಯಸ್ಥ ಡಾ.ರಾಜೇಂದ್ರ ತ್ರಿಪಾಠಿ, ಯುನೈಟೆಡ್ ಕಿಂಗ್‌ಡಮ್‌ನ ಗ್ರೀನ್‌ವಿಚ್ ವಿಶ್ವವಿದ್ಯಾಲಯದ ಡಾ.ಲೂಸಿ ಬುಷಿ, ಕೆಎಸ್‌ಎನ್‌ಯುಎಎಚ್ ಸಂಶೋಧನಾ ಸಹ ನಿರ್ದೇಶಕ ಡಾ.ಪ್ರದೀಪ್.ಎಸ್, ಆಡಳಿತ ಮಂಡಳಿ ಸದಸ್ಯರಾದ ಡಾ.ಟಿ.ಕೆ.ಬಸವರಾಜ್ ಪ್ರಭು, ಡಾ.ಬಿ.ಕೆ.ಕುಮಾರಸ್ವಾಮಿ, ದೇವಿಕುಮಾರ್ ಮತ್ತಿತರರಿದ್ದರು.