ಸಾರಾಂಶ
೨೧ನೇ ಶತಮಾನದಲ್ಲಿ ನಿಮ್ಮ ಜೀವನ ನಿರ್ವಹಿಸುವ ನಿರ್ಣಾಯಕರು ವಿದ್ಯಾರ್ಥಿಗಳೇ ಆಗಿದ್ದೀರಿ. ಆದರೆ, ನಿಮ್ಮ ಸಾಮರ್ಥ್ಯವೇ ನಿಮ್ಮ ಅರ್ಹತೆ ನಿರ್ಣಯಿಸುತ್ತದೆ.
ಯಲ್ಲಾಪುರ:
ವಿದ್ಯಾರ್ಥಿಗಳು ಓದಿಗಷ್ಟೇ ಸೀಮಿತವಾಗದೇ ಬಹುಮುಖ ಪ್ರತಿಭೆಗಳಾಗಿ ಹೊರಹೊಮ್ಮಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಅವರು ಬುಧವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಾಂಸ್ಕೃತಿಕ, ಕ್ರೀಡೆ, ಯುವ ರೆಡ್‌ಕ್ರಾಸ್, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿವಿಧ ವೇದಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಬೌದ್ಧಿಕ ಬೆಳವಣಿಗೆಯೊಂದೆ ಬದುಕಿಗೆ ಪೂರಕವಲ್ಲ. ಇಂದು ಜಗತ್ತು ಕಿರಿದಾಗಿದೆ. ಯಾವುದೇ ಪ್ರಶ್ನೆ ಕೇಳಿದರೂ ಅದಕ್ಕೆ ಸಮರ್ಥ ಉತ್ತರ ಕೊಡಲು ವಿದ್ಯಾರ್ಥಿಗಳು ಸಿದ್ಧರಾಗಬೇಕು. ವಿಶ್ವಕ್ಕೆ ಇಲ್ಲಿಯ ವಿದ್ಯಾರ್ಥಿಗಳು ತೆರೆದುಕೊಳ್ಳುವಂತಾಗಬೇಕು. ೨೧ನೇ ಶತಮಾನದಲ್ಲಿ ನಿಮ್ಮ ಜೀವನ ನಿರ್ವಹಿಸುವ ನಿರ್ಣಾಯಕರು ನೀವೇ ಆಗಿದ್ದೀರಿ. ಆದರೆ, ನಿಮ್ಮ ಸಾಮರ್ಥ್ಯವೇ ನಿಮ್ಮ ಅರ್ಹತೆ ನಿರ್ಣಯಿಸುತ್ತದೆ. ನಿಮ್ಮನ್ನು ಕಷ್ಟಪಟ್ಟು ಓದಿಸಿದ ಮಾತಾ-ಪಿತರಿಗೆ ಉತ್ತಮ ಫಲಿತಾಂಶ ನೀಡುವಂತಾಗಬೇಕು ಎಂದರು.ವಿಕಾಸ್ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಶುಭಕೋರಿದರು. ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ, ಪಪಂ ಮಾಜಿ ಅಧ್ಯಕ್ಷೆ ಸುನಂದಾ ದಾಸ್ ವೇದಿಕೆಯಲ್ಲಿದ್ದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಸವಿತಾ ನಾಯ್ಕ ಮಾತನಾಡಿದರು.ಕ್ರೀಡಾ ಮತ್ತು ರೆಡ್ ಕ್ರಾಸ್ ಸಂಚಾಲಕ ಶರತಕುಮಾರ ಸ್ವಾಗತಿಸಿದರು, ಸಾಂಸ್ಕೃತಿಕ ಸಂಚಾಲಕ ಆರ್.ಡಿ. ಜನಾರ್ದನ ಮಾತನಾಡಿದರು. ಪ್ಲೇಸ್‌ಮೆಂಟ್ ಸಂಚಾಲಕಿ ಸುರೇಖಾ ತಡವಲ ನಿರ್ವಹಿಸಿದರು. ಮತದಾನ ಸಾಕ್ಷರತಾ ಕ್ಲಬ್ಬಿನ ಪ್ರಮುಖಿ ಡಾ. ರುಬೀನಾ ಖಾತು ವಂದಿಸಿದರು.