ಕ್ರಿಯಾತ್ಮಕ ಚಟುವಟಿಕೆಗಳಿಂದ ಮಕ್ಕಳ ಬೌದ್ಧಿಕ ವಿಕಸನ ಸಾಧ್ಯ: ಅರ್ಚನಾ ಬೇಡ್ಕಣಿ

| Published : Sep 02 2024, 02:03 AM IST

ಕ್ರಿಯಾತ್ಮಕ ಚಟುವಟಿಕೆಗಳಿಂದ ಮಕ್ಕಳ ಬೌದ್ಧಿಕ ವಿಕಸನ ಸಾಧ್ಯ: ಅರ್ಚನಾ ಬೇಡ್ಕಣಿ
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ಪಟ್ಟಣದ ಸಮರ್ಪಣ ಸಂಸ್ಥೆಯ ಸ್ಮಾರ್ಟ್ ಕಿಡ್ಜ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ವಿವಿಧ ವೇಷಭೂಷಣ ಸ್ಪರ್ಧೆ ನಡೆಯಿತು.

ಕನ್ನಡಪ್ರಭ ವಾರ್ತೆ ಸೊರಬ

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರ್ವ ಪ್ರಾಥಮಿಕ ಹಂತದಲ್ಲಿಯೆ ಶಿಕ್ಷಣ ನೀಡುವುದರ ಜೊತೆಗೆ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಜಾಗೃತಗೊಳಿಸುವುದರಿಂದ ಬೌದ್ಧಿಕವಾಗಿ ವಿಕಸನ ಹೊಂದುವ ಸಾಧ್ಯತೆ ಇದೆ ಎಂದು ಅರ್ಚನಾ ರಾಘವೇಂದ್ರ ಬೇಡ್ಕಣಿ ಅಭಿಪ್ರಾಯಪಟ್ಟರು.

ಶನಿವಾರ ಪಟ್ಟಣದ ಸಮರ್ಪಣ ಸಂಸ್ಥೆಯ ಸ್ಮಾರ್ಟ್ ಕಿಡ್ಜ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿವಿಧ ವೇಷಭೂಷಣ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಪಾಲ್ಗೊಂಡು ಮಾತನಾಡಿದರು.

ಮಕ್ಕಳ ಮನಸ್ಸು ಹೂವಿನಷ್ಟೇ ನವಿರು. ನಾವು ಮಾಡುವ ಚಟುವಟಿಕೆಗಳನ್ನು ಗಮನಿಸಿ ಅನುಸರಿಸುತ್ತವೆ. ಹಾಗಾಗಿ ಮಕ್ಕಳಿಗೆ ನವೋಲ್ಲಾಸ ನೀಡುವಂಥ ಕಾರ್ಯಪ್ರವೃತ್ತಿ ಅನುಸರಿಸಿದರೆ ಒಳ್ಳೆಯ ಮನಸ್ಥಿತಿಯಿಂದ ಗುರ್ತಿಸಿಕೊಳ್ಳುತ್ತದೆ ಎಂದರು.

ಸಂಸ್ಥೆಯ ಮಮತಾ ರಾಜೇಶ್ ಮಾತನಾಡಿ, ಶಿಕ್ಷಣ ಸಂಸ್ಥೆ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಶೈಕ್ಷಣಿಕ ಪ್ರಗತಿಯತ್ತ ಹೆಚ್ಚು ಗಮನಹರಿಸಿದ್ದು, ಮಾನವೀಯ ಮೌಲ್ಯಗಳ ಅರಿವನ್ನು ಅವರ ಬೌದ್ಧಿಕ ಮಟ್ಟಕ್ಕೆ ಅನುಸಾರವಾಗಿ ಮೂಡಿಸುವ ಪ್ರಯತ್ನ ನಡೆದಿದೆ. ಮಕ್ಕಳು ಸ್ಪಂದಿಸುತ್ತಿದ್ದಾರೆ. ಪರಿಸರ, ನೈತಿಕ, ಆಟೋಟ ವಿಚಾರದಲ್ಲಿ ಕ್ರಿಯಾಶೀಲತೆ ತೋರುತ್ತಿದ್ದು, ಪೋಷಕರ ಸಹಕಾರವೂ ಇರುವುದರಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿದೆ ಎಂದರು.

ನಿರ್ಣಾಯಕರಾಗಿ ಪಾಲ್ಗೊಂಡಿದ್ದ ಸಂಪನ್ಮೂಲ ವ್ಯಕ್ತಿ ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಪೂರ್ವ ಪ್ರಾಥಮಿಕ ಹಂತದ ಮಕ್ಕಳು ಯಾವುದೇ ವೇಷ ಭೂಷಣಗಳಲ್ಲಿಯೂ ಚೆಂದ ಕಾಣುತ್ತಾರೆ. ಚಂದದ ಜೊತೆಗೆ ಅವರ ಆ ವೇಷದ ವೇದಿಕೆಯಲ್ಲಿನ ಸ್ಪಂದನೆಗನುಗುಣವಾಗಿ ಸ್ಪರ್ಧೆಯಲ್ಲಿ ಗುರುತಿಸಿ ಪ್ರಥಮ, ದ್ವಿತೀಯ ಎಂದು ನಿರ್ಣಯಿಸಲಾಗುತ್ತಿದೆ. ಹಾಗೆಂದು ಉಳಿದವು ಹಿಂದಿವೆ ಎಂದು ಪರಿಗಣಿಸದೆ ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಪೋಷಕರಿಗೆ ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಕೆ.ಪಿ. ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಮಕ್ಕಳಿಗೂ ಬಹುಮಾನ ವಿತರಿಸಲಾಯಿತು.

ಪ್ರೀ-ಕೆಜಿಯ ಅಶ್ಮಿತಾ ಪೂಜಾರಿ, ಎಲ್ಕೆಜಿಯ ಜಿ.ಪಿ.ಅಭಿನವ್, ಎ.ಜೆ.ಅಶ್ರಿತ್, ವೈಭವ್, ಕೃತ್ವಿಕ್, ಯೂಕೆಜಿಯ ಸಾನ್ವಿಕ್, ಸಿದ್ದಿಕ್, ಲೋಕೇಶ್, ಶಫಿಯಾ ವಿಶೇಷ ಬಹುಮಾನ ಗಳಿಸಿದರು. ಶಿಕ್ಷಕಿಯರಾದ ಪೂರ್ಣಿಮಾ, ಯಶೋಧ, ಪೋಷಕರು ಇದ್ದರು.