ಗಾಂಧಿ ಅಥೈಸಿಕೊಳ್ಳಲು ವೈಚಾರಿಕ ಪಕ್ವತೆ ಅಗತ್ಯ: ಡಾ.ಲಕ್ಷ್ಮೀಪತಿ
KannadaprabhaNewsNetwork | Published : Oct 09 2023, 12:46 AM IST
ಗಾಂಧಿ ಅಥೈಸಿಕೊಳ್ಳಲು ವೈಚಾರಿಕ ಪಕ್ವತೆ ಅಗತ್ಯ: ಡಾ.ಲಕ್ಷ್ಮೀಪತಿ
ಸಾರಾಂಶ
ದೊಡ್ಡಬಳ್ಳಾಪುರ: ವಿಚಾರಗಳನ್ನು ದ್ವೇಷಿಸುವ ಅಥವಾ ಸ್ವೀಕರಿಸುವ ಮನೋಧರ್ಮ ಇರಬೇಕೆ ಹೊರತು ವ್ಯಕ್ತಿ ಹಾಗೂ ವ್ಯಕ್ತಿತ್ವದ ಒಳಹುಗಳನ್ನೇ ನಿರ್ಮೂಲನೆ ಮಾಡುವ ಹುನ್ನಾರಗಳು ಖಂಡನೀಯ ಎಂದು ಸಮಾಜ ವಿಜ್ಞಾನಿ ಡಾ.ಸಿ.ಜಿ.ಲಕ್ಷ್ಮೀಪತಿ ಅಭಿಪ್ರಾಯಪಟ್ಟರು.
ದೊಡ್ಡಬಳ್ಳಾಪುರ: ವಿಚಾರಗಳನ್ನು ದ್ವೇಷಿಸುವ ಅಥವಾ ಸ್ವೀಕರಿಸುವ ಮನೋಧರ್ಮ ಇರಬೇಕೆ ಹೊರತು ವ್ಯಕ್ತಿ ಹಾಗೂ ವ್ಯಕ್ತಿತ್ವದ ಒಳಹುಗಳನ್ನೇ ನಿರ್ಮೂಲನೆ ಮಾಡುವ ಹುನ್ನಾರಗಳು ಖಂಡನೀಯ ಎಂದು ಸಮಾಜ ವಿಜ್ಞಾನಿ ಡಾ.ಸಿ.ಜಿ.ಲಕ್ಷ್ಮೀಪತಿ ಅಭಿಪ್ರಾಯಪಟ್ಟರು. ನಗರದ ಕನ್ನಡ ಜಾಗೃತ ಪರಿಷತ್ ಭನವದಲ್ಲಿ ಬಯಲು ಬಳಗ ಮತ್ತು ಶ್ರವಣ ಸಂಸ್ಕೃತಿ ಟ್ರಸ್ಟ್ ವತಿಯಿಂದ ನಡೆದ ‘ಗಾಂಧೀ: ಹೊಸ ಸಾಧ್ಯತೆಗಳು -ಮಾತು ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಾಂಧೀಜಿಯನ್ನು ದೈಹಿಕವಾಗಿ ಕೊಲ್ಲುವ ಮೂಲಕ ಅವರ ವಿಚಾರಗಳನ್ನು ನಿರ್ಮೂಲನೆ ಮಾಡಲು ಎಷ್ಟೆಲ್ಲಾ ಪ್ರಯತ್ನಗಳು ನಡೆದರೂ ಅದು ಈ ಕ್ಷಣಕ್ಕೂ ಸಾಧ್ಯವಾಗಿಲ್ಲ. ಸ್ವತಂತ್ರ ಭಾರತದಲ್ಲಿ ಮೊದಲ ರಾಜಕೀಯ ಉಗ್ರವಾದಿಗಳ ದಾಳಿ ನಡೆದಿದ್ದು ಗಾಂಧೀಜಿಯವರ ಕೊಲೆಯ ಮೂಲಕ ಎಂದು ಗುರುತಿಸಬಹುದಾಗಿದೆ ಎಂದ ಅವರು, ಗಾಂಧೀಜಿ ಅವರ ಬಗ್ಗೆ ಎಡ, ಬಲ ಸೇರಿದಂತೆ ಎಲ್ಲಾ ರೀತಿಯ ವಾದಿಗಳಿಂದಲು ತಿರಸ್ಕಾರದ ಭಾವನೆಗಳು ಇವೆ. ಆದರೆ ಇಡೀ ವಿಶ್ವದ ಮೂಲೆ ಮೂಲೆಗಳಲ್ಲೂ ಗಾಂಧೀಜಿ ಅವರನ್ನು ಅಂದಿನಿಂದ ಇಂದಿಗೂ ಪ್ರೀತಿಸುವ, ಅವರ ಮಾರ್ಗವನ್ನು ಅನುಸರಿಸುವ ದೊಡ್ಡ ಸಮೂಹವೂ ಇದೆ. ಗಾಂಧೀಜಿ ಅವರ ಜೀವನ ಕ್ರಮವೇ ಸಿದ್ದಾಂತವಾಗಿತ್ತೇ ಹೊರತು ಅದು ಪ್ರತ್ಯೇಕವಾಗಿ ಇರಲಿಲ್ಲ ಎಂದರು. ಪತ್ರಕರ್ತ ಮಂಜುನಾಥ ಅದ್ದೆ ಮಾತನಾಡಿ, ನಮಗೆ ಗಾಂಧೀಜಿ ಅರ್ಥವಾಗಬೇಕಾದರೆ ಮೊದಲು ನಮ್ಮ ಬದುಕು ಪಕ್ವವಾಗಬೇಕು. ಸುಳ್ಳುಗಳನ್ನೇ ಸತ್ಯಗಳಾಗಿ ಹೇಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂತಹ ಕ್ಲಿಷ್ಟಕರವಾದ ಸಂದರ್ಭದಲ್ಲಿ ಗಾಂಧೀಜಿ, ಅಂಬೇಡ್ಕರ್ ಅವರನ್ನು ಸತ್ಯದ ನೆಲೆಯಲ್ಲಿ ಓದಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಗಾಂಧೀಜಿ ಅವರು ವಿರೋಧಗಳ ನಡುವೆಯು ಸಹ ಎಲ್ಲಾ ಕಾಲಕ್ಕೂ ಜೀವಪರ ಪ್ರೀತಿ ಹೊಂದಿರುವ ಜನರ ಬದುಕಿಗೆ ಸ್ಫೂರ್ತಿದಾಯಕ ವ್ಯಕ್ತಿಯಾಗಿಯೇ ಇರುತ್ತಾರೆ. ಗಾಂಧೀಜಿ ಅರ್ಥವಾಗಬೇಕಾದರೆ ನಮ್ಮ ಬದುಕು ಪಕ್ವವಾಗಬೇಕು. ಭಾರತೀಯತೆಯಲ್ಲಿ ರೂಪುಗೊಂಡ ಸತ್ಯ, ಅಹಿಂಸೆ, ಉಪವಾಸಗಳು ಎಲ್ಲರ ಟೀಕೆಗಳನ್ನು ಮೀರಿ ನಿಲ್ಲುವ ಶಕ್ತಿಯನ್ನು ಹೊಂದಿವೆ ಎಂದು ಹೇಳಿದರು. ಗಾಂಧಿ, ಗೋಡ್ಸೆ ಇಬ್ಬರು ಸಹ ರಾಮನ ಜಪಮಾಡಿದ್ದಾರೆ. ಆದರೆ ರಾಮನನ್ನು ನಂಬಿದ್ದ ಮಾರ್ಗಗಳು ಮಾತ್ರ ಭಿನ್ನವಾಗಿವೆ. ಹಿಂದೂ ಎನ್ನುವುದು ಜೀವನ ಪದ್ದತಿಯೇ ಹೊರತು ಅದು ಒಂದು ಧರ್ಮ ಅಲ್ಲ. ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಹಿಂದುತ್ವ, ಹಿಂದೂ ಪದ್ದತಿಗಳಿಗಿಂತಲೂ ನಾವೇ ರಚಿಸಿಕೊಂಡಿರುವ ಸಂವಿಧಾನವೇ ಇಲ್ಲಿ ಅಂತಿಮ. ದೇಶಕ್ಕೆ ಸ್ವಾತಂತ್ರ ಬಂದಾಗ ಸಾಕ್ಷರತೆ ಪ್ರಮಾಣ ಶೇ 4ರಷ್ಟು ಇತ್ತು. ಈಗ ಸಾಕ್ಷರತೆ ಪ್ರಮಾಣ ಶೇ 65ಕ್ಕೆ ಏರಿಕೆಯಾಗಿದೆ. ಸಾಕ್ಷರತೆ ಪ್ರಮಾಣ ಬೆಳೆದಷ್ಟೇ ವೇಗವಾಗಿ ಜಾತಿಯತೆ, ಮೌಢ್ಯಾಚರಣೆಗಳು ಬೆಳೆಯುತ್ತಿರುವುದು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು. ಉಪನ್ಯಾಸಕ ಡಾ.ಟಿ.ಎಚ್.ಲವಕುಮಾರ್ ಮಾತನಾಡಿ, ಗಾಂಧೀಜಿಗೂ ದೊಡ್ಡಬಳ್ಳಾಪುರಕ್ಕೂ ನಿಕಟವಾದ ನಂಟು ಇದೆ. ಅವರ ಮಾರ್ಗದಲ್ಲಿ ನಡೆದ ಸ್ವಾತಂತ್ರ ಹೋರಾಟಗಾರರಿದ್ದಾರೆ. ನಂತರದ ದಿನಗಳಲ್ಲಿ ಇಲ್ಲಿನ ಕೊಂಗಾಡಿಯಪ್ಪ ಕಾಲೇಜಿನ ವತಿಯಿಂದ ನಡೆದ ಗಾಂಧಿ ಚಿಂತನ ಶಿಬಿರಗಳು ಹಲವಾರು ವಿದ್ಯಾರ್ಥಿಗಳು ಗಾಂಧೀಜಿ ಅವರ ವಿಚಾರಗಳಲ್ಲಿ ಮುನ್ನಡೆಯಲು ಸಹಕಾರಿಯಾಗಿವೆ ಎಂದರು. ಕಾರ್ಯಕ್ರಮದಲ್ಲಿ ಬಯಲು ಬಳಗದ ಡಾ.ಪ್ರಕಾಶ್ ಮಂಟೇದ, ಡಾ.ಸತೀಶ್, ಡಾ.ದೇವರಾಜು ಬೆಸ್ಕಾಂ ಇಂಜಿನಿಯರ್ ಹೇಮಂತ್, ಕನ್ನಡಪರ ಹೋರಾಟಗಾರ ಸಂಜೀವನಾಯಕ್, ಸುಲೋಚನಮ್ಮ ಡಾ.ವೆಂಕಟರೆಡ್ಡಿ ಇತರರಿದ್ದರು. ಫೋಟೋ- 8ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಬಯಲು ಬಳಗ, ಶ್ರಮಣ ಸಂಸ್ಕೃತಿ ಟ್ರಸ್ಟ್‌ನಿಂದ ನಡೆದ ಗಾಂಧಿ-ಹೊಸ ಸಾಧ್ಯತೆಗಳು, ಮಾತು-ಸಂವಾದ ಕಾರ್ಯಕ್ರಮದಲ್ಲಿ ಡಾ.ಸಿ.ಜಿ.ಲಕ್ಷ್ಮೀಪತಿ ಮತ್ತಿತರರು ಭಾಗಿಯಾಗಿದ್ದರು.