ಮತ್ತೊಂದು ದೇಶದ ನೆಲಕ್ಕೆ ಹೋಗಿ, ಅಲ್ಲಿನ ಆಂತರಿಕ ಸೂಕ್ಷ್ಮ ವಿಚಾರಗಳನ್ನು ವರದಿ ಮಾಡುವ ಬೇಹುಗಾರಿಕೆಯು ರಾಷ್ಟ್ರರಕ್ಷಣೆಯಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಅದು ಅತ್ಯಂತ ಕಷ್ಟ, ಸವಾಲಿನ ಕೆಲಸ ಎಂದು ನಿವೃತ್ತ ಡಿಐಜಿಪಿ ಡಿ.ಸಿ.ರಾಜಪ್ಪ ತಿಳಿಸಿದ್ದಾರೆ.
ದಾವಣಗೆರೆ: ಮತ್ತೊಂದು ದೇಶದ ನೆಲಕ್ಕೆ ಹೋಗಿ, ಅಲ್ಲಿನ ಆಂತರಿಕ ಸೂಕ್ಷ್ಮ ವಿಚಾರಗಳನ್ನು ವರದಿ ಮಾಡುವ ಬೇಹುಗಾರಿಕೆಯು ರಾಷ್ಟ್ರರಕ್ಷಣೆಯಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಅದು ಅತ್ಯಂತ ಕಷ್ಟ, ಸವಾಲಿನ ಕೆಲಸ ಎಂದು ನಿವೃತ್ತ ಡಿಐಜಿಪಿ ಡಿ.ಸಿ.ರಾಜಪ್ಪ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಬುಧವಾರ ಪಾಕ್‌ನಲ್ಲಿ ನಮ್ಮ ಧುರಂಧರರು-ಬೇಹುಗಾರಿಕೆ ಬದುಕು ಬವಣೆ ಪುಸ್ತಕ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮತ್ತೊಂದು ದೇಶಕ್ಕೆ ಹೋಗಿ, ಅಲ್ಲಿನ ಪ್ರಜೆಯಾಗಿ, ಯಾರಿಗೂ ಸಿಗದಂತೆ, ಅನುಮಾನ ಬಾರದಂತೆ, ಅಲ್ಲಿನ ಭೌಗೋಳಿಕ ಪರಿಸ್ಥಿತಿ, ಆಹಾರ ಪದ್ಧತಿ, ಆಚಾರ ವಿಚಾರಕ್ಕೆ ಹೊಂದಿಕೊಂಡು ಕೆಲಸ ಮಾಡವುದು ತ್ರಾಸದ, ಸವಾಲಿನ ಕೆಲಸ ಎಂದರು.ಗೂಢಚಾರಿಕೆಗೂ, ಗುಪ್ತಚರಕ್ಕೂ ಬಹಳಷ್ಟು ವ್ಯತ್ಯಾಸವಿದೆ. 1967ರಲ್ಲಿ ಬೇಹುಗಾರರಾಗಿ ಪಾಕಿಸ್ಥಾನಕ್ಕೆ ಹೋಗಿದ್ದ ಮೋಹನಲಾಲ್ ಭಾಸ್ಕರ್ ಸಾಕಷ್ಟು ವರ್ಷಗಳ ಕಾಲ ಅಲ್ಲಿನ ಜೈಲಿನಲ್ಲಿ ಇದ್ದು, ಕಡೆಗೆ ಬಿಡುಗಡೆಯಾಗಿ ಬಂದರು. ಸಮುದ್ ಸಿಂಗ್ 36 ವರ್ಷದ ಕಾಲ ಪಾಕಿಸ್ಥಾನದ ಜೈಲಿನಲ್ಲಿದ್ದರು. ಈಗಲೂ ಕುಲಭೂಷಣ್ ಸಿಂಗ್ ಪಾಕಿಸ್ಥಾನದ ಜೈಲಿನಲ್ಲಿದ್ದಾರೆ. ಗೂಢಚಾರಿಯ ಕೆಲಸ ಮಾಡುವುದು ಅಂದುಕೊಂಡಷ್ಟು ಸುಲಭದ್ದೂ ಅಲ್ಲ ಎಂದು ಅವರು ಹೇಳಿದರು.
ಜನಸ್ನೇಹಿ ವ್ಯಕ್ತಿತ್ವ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಪೊಲೀಸ್ ಸೇವೆಯಲ್ಲಿರುವವರು ಒಂದರ್ಥದಲ್ಲಿ ಆದಿಕವಿ ಪಂಪನ ಪರಂಪರೆಯವರು. ಪಂಪ ಕವಿ ಮಹಾಭಾರತ ಬರೆದರೆ, ನಾವು ಮನೆ ಮನೆ ಭಾರತ ಅಂದರೆ ಎಫ್ಐಆರ್ ಬರೆಯುತ್ತೇವೆ. ಹಾಗಾಗಿ ನಾವು ಕಲಿಗಳೂ ಹೌದು, ಕವಿಗಳೂ ಹೌದು. ಪೊಲೀಸರು ತಮ್ಮ ಅನುಭವ, ಸೇವಾನುಭವ, ಘಟನೆಗಳನ್ನು ಬರವಣಿಗೆ ಮೂಲಕ ಅವುಗಳನ್ನು ದಾಖಲಿಸುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.ಸಾಹಿತ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ ಭಾಷೆ, ಮಾತು ಬದಲಾಗುತ್ತದೆ. ಭಾಷೆ ಸೌಮ್ಯ, ಮಾತು ಮಧುರವಾಗುತ್ತದೆ. ಎಲವೋ ಎನ್ನುವಲ್ಲಿ ನಯ, ವಿನಯ ಸಹಜವಾಗಿಯೇ ಬರುತ್ತದೆ. ಸಾಹಿತ್ಯವು ಕರ್ತವ್ಯ, ವ್ಯಕ್ತಿತ್ವಕ್ಕೆ ಹೊಸ ರೂಪ, ಮೆರಗನ್ನು ಕೊಡುತ್ತದೆ. ಹಾಗಾಗಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಮ್ಮ ಬಿಡುವಿನ ಅವದಿಯಲ್ಲಿ ಸಾಹಿತ್ಯ ಕೃಷಿ ಕೈಗೊಳ್ಳಬೇಕು, ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು. ಸಾಹಿತ್ಯ ರೂಢಿಸಿಕೊಳ್ಳುವುದರಿಂದ ಸಾರ್ವಜನಿಕರಿಗೆ ನಮ್ಮ ಮೇಲೆ ಮತ್ತಷ್ಟು ವಿಶ್ವಾಸ ಹೆಚ್ಚುತ್ತದೆ ಎಂದು ಡಿ.ಸಿ.ರಾಜಪ್ಪ ಅಭಿಪ್ರಾಯಪಟ್ಟರು.
ನಿವೃತ್ತ ಡಿಜಿಪಿ, ಲೇಖಕ, ಅಂಕಣಕಾರ ಡಾ. ಡಿ.ವಿ.ಗುರುಪ್ರಸಾದ ಮಾತನಾಡಿ, ಚಿಕ್ಕಂದಿನಿಂದಲೂ ತಮಗೆ ಗೂಢಚಾರಿ ಆಗುವಾಸೆ ಇತ್ತು. ಜೇಮ್ಸ್ ಬಾಂಡ್ ಕಾದಂಬರಿಗಳನ್ನು ತಪ್ಪದೇ ಓದುತ್ತಿದ್ದೆ. ಕನ್ನಡದಲ್ಲಿ ಪತ್ತೆದಾರಿ ಸಾಹಿತ್ಯಗಳಿದ್ದರೂ ಬೇಹುಗಾರಿಕೆ ಕುರಿತಂತೆ ಅಷ್ಟಾಗಿ ಸಾಹಿತ್ಯ ಇರಲಿಲ್ಲ. ಇಂತಹ ನಿರ್ವಾತ ತುಂಬಲು ಸಾಹಿತ್ಯ ಕೃಷಿಯಲ್ಲಿ ತಾವು ತೊಡಗಿದ್ದರಿಂದ ಈಗ ನನ್ನ 106ನೇ ಕೃತಿ ಹೊರ ಬಂದಿದೆ. ಪ್ರಕಟವಾದ 3 ತಿಂಗಳಲ್ಲೇ ಸಾವಿರಾರು ಪ್ರತಿಗಳು ದಾವಣಗೆರೆ ಬೆಣ್ಣೆದೋಸೆಯಂತೆ ಮಾರಾಟವಾಗುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.ಪೊಲೀಸ್ ಇಲಾಖೆಯಲ್ಲಿ ಕನ್ನಡಕ್ಕಗಿ ಕೆಲಸ ಮಾಡಿದವರಲ್ಲಿ ಡಾ.ಬಿ.ಆರ್.ರವಿಕಾಂತೇಗೌಡ, ಡಿ.ಸಿ.ರಾಜಪ್ಪ ಅಗ್ರಗಣ್ಯರು. ಕನ್ನಡದಲ್ಲಿ ಪೊಲೀಸ್ ಕವಾಯಿತು ಆದೇಶಗಳನ್ನು ಜಾರಿಗೊಳಿಸುವ ಮೂಲಕ ಐಜಿಪಿ ಡಾ.ರವಿಕಾಂತೇಗೌಡ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ತಮ್ಮ ಅಧೀನದ ಕಚೇರಿಗಳಲ್ಲಿ ಕನ್ನಡಮಯ ವಾತಾವರಣವನ್ನು ನಿರ್ಮಿಸಿದ ಕೀರ್ತಿಯು ಇದೇ ಅಧಿಕಾರಿಗಳಿಗೆ ಸಲ್ಲುತ್ತದೆ ಎಂದು ಡಾ.ಗುರುಪ್ರಸಾದ್ ಶ್ಲಾಘಿಸಿದರು.
ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಎಚ್.ಟಿ.ಶೇಖರ್, ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಸಾಹಿತ್ಯಾಸಕ್ತರು ಇದ್ದರು.- - -
-19ಕೆಡಿವಿಜಿ8: ದಾವಣಗೆರೆ ಎಸ್ಪಿ ಕಚೇರಿಯಲ್ಲಿ ಬುಧವಾರ ಪಾಕ್‌ನಲ್ಲಿ ನಮ್ಮ ಧುರಂಧರರು-ಬೇಹುಗಾರಿಕೆ ಬದುಕು ಬವಣೆ ಪುಸ್ತಕ ಸಂವಾದ ಕಾರ್ಯಕ್ರಮ ಉದ್ಘಾಟನೆಯಲ್ಲಿ ನಿವೃತ್ತ ಡಿಜಿಪಿ, ಲೇಖಕ, ಅಂಕಣಕಾರ ಡಾ.ಡಿ.ವಿ.ಗುರುಪ್ರಸಾದ, ನಿವೃತ್ತ ಪೊಲೀಸ್ ಮಹಾ ನಿರೀಕ್ಷಕ ಡಿ.ಸಿ.ರಾಜಪ್ಪ, ಐಜಿಪಿ ಡಾ.ರವಿಕಾಂತೇಗೌಡ, ಎಸ್ಪಿ ಡಾ.ಎಚ್.ಟಿ.ಶೇಖರ ಇತರರು.- - -
-19ಕೆಡಿವಿಜಿ9: ದಾವಣಗೆರೆ ಎಸ್ಪಿ ಕಚೇರಿಯಲ್ಲಿ ಬುಧವಾರ ಪಾಕ್‌ನಲ್ಲಿ ನಮ್ಮ ಧುರಂಧರರು-ಬೇಹುಗಾರಿಕೆ ಬದುಕು ಬವಣೆ ಪುಸ್ತಕ ಸಂವಾದ ವೇಳೆ ನಿವೃತ್ತ ಡಿಜಿಪಿ, ಲೇಖಕ, ಅಂಕಣಕಾರ ಡಾ.ಡಿ.ವಿ.ಗುರುಪ್ರಸಾದರ ಪುಸ್ತಕಗಳನ್ನು ವೀಕ್ಷಿಸಿದ ನಿವೃತ್ತ ಪೊಲೀಸ್ ಮಹಾ ನಿರೀಕ್ಷಕ ಡಿ.ಸಿ.ರಾಜಪ್ಪ, ಐಜಿಪಿ ಡಾ.ರವಿಕಾಂತೇಗೌಡ, ಎಸ್ಪಿ ಡಾ.ಎಚ್.ಟಿ.ಶೇಖರ ಇತರರು.