ಕೊಳಚಿಕಂಬಳದಲ್ಲಿ ಹದಗೆಟ್ಟಿರುವ ರಸ್ತೆ ಬಗ್ಗೆ, ಸಸಿಹಿತ್ಲು ಸರ್ಕಾರಿ ಜಾಗದಲ್ಲಿ ರೆಸಾರ್ಟ್ ಕಾಮಗಾರಿ, ಮನೆ ನಿವೇಶನ ಕುರಿತು, ಸಾರ್ವಜನಿಕ ರಸ್ತೆ ಬಂದ್ ಮಾಡಿರುವ ಹಾಗೂ ಮತ್ತಿತರ ವಿಷಯಗಳ ಕುರಿತು ಮೂಲ್ಕಿ ತಾಲೂಕು ಕಚೇರಿಯ ಪ್ರಜಾ ಸೌಧದ ಸಭಾಂಗಣದಲ್ಲಿ ಜರುಗಿದ ಮೂಲ್ಕಿ ತಾಲೂಕು ಮಟ್ಟದ ಪ್ರಜಾ ಸೇವೆ ಆಂದೋಲನ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.
ಮೂಲ್ಕಿ: ಕೊಳಚಿಕಂಬಳದಲ್ಲಿ ಹದಗೆಟ್ಟಿರುವ ರಸ್ತೆ ಬಗ್ಗೆ, ಸಸಿಹಿತ್ಲು ಸರ್ಕಾರಿ ಜಾಗದಲ್ಲಿ ರೆಸಾರ್ಟ್ ಕಾಮಗಾರಿ, ಮನೆ ನಿವೇಶನ ಕುರಿತು, ಸಾರ್ವಜನಿಕ ರಸ್ತೆ ಬಂದ್ ಮಾಡಿರುವ ಹಾಗೂ ಮತ್ತಿತರ ವಿಷಯಗಳ ಕುರಿತು ಮೂಲ್ಕಿ ತಾಲೂಕು ಕಚೇರಿಯ ಪ್ರಜಾ ಸೌಧದ ಸಭಾಂಗಣದಲ್ಲಿ ಜರುಗಿದ ಮೂಲ್ಕಿ ತಾಲೂಕು ಮಟ್ಟದ ಪ್ರಜಾ ಸೇವೆ ಆಂದೋಲನ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.ಜನಸಾಮಾನ್ಯರು ಎದುರಿಸುತ್ತಿರುವ ಪಿಂಚಣಿ ಸಮಸ್ಯೆ, ಪಹಣಿಗಳಲ್ಲಿನ ಸಮಸ್ಯೆ, ವಸತಿ ಹಾಗೂ ನಿವೇಶನ ಸಮಸ್ಯೆ, ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಎದುರಿಸುತ್ತಿರುವ ಸಮಸ್ಯೆ ಮತ್ತು ಇನ್ನಿತರ ಸರ್ಕಾರಿ ಸೇವೆಗಳ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕ ಉಮಾನಾಥ ಎ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಚರ್ಚೆ ಕೈಗೊಳ್ಳಲಾಯಿತು.ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಸಿಹಿತ್ಲುನಲ್ಲಿ ಸಮುದ್ರ ತೀರದ ಸರ್ಕಾರಿ ಜಾಗದಲ್ಲಿ ಖಾಸಗಿಯವರು ಪರವಾನಗಿ ಇಲ್ಲದೆ ರೆಸಾರ್ಟ್ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು, ದೂರು ನೀಡಿದ್ದರೂ ಕ್ರಮಕೈಗೊಂಡಿಲ್ಲವೆಂದು ಸಸಿಹಿತ್ಲು ನಿವಾಸಿ ಅಮರ್‌ರಾಜ್ ಮತ್ತಿತರರು ಸಭೆಯಲ್ಲಿ ಪ್ರಸ್ತಾವಿಸಿದಾಗ ಶಾಸಕ ಉಮನಾಥ ಕೋಟ್ಯಾನ್ ಅವರು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ತಹಸೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಕಂದಾಯ ಅಧಿಕಾರಿಗಳಿಗೆ ಆದೇಶಿಸಿದರು.
ಜೀಶಾ, ಶುಭಕರ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರಾದ ಸಂಜೀವ ಮಡಿವಾಳ, ಮುಸ್ತಾಫಾ, ಬಬಿತಾ ಪರಮೇಶ್ವರ್, ಭರತೇಶ್, ರಕ್ಷಿತಾ ಗೋಳಿಜೋರ, ದಿನೇಶ್ಚಂದ್ರ ಅಜಿಲ, ಸುನಿಲ್ ಆಳ್ವ, ಮನೋಹರ ಕೋಟ್ಯಾನ್ ಮತ್ತು ಶೈಲೇಶ್ ಕುಮಾರ್ ಮತ್ತು ಸ್ಥಳೀಯರು ಸಭೆಯಲ್ಲಿ ಪ್ರಸ್ತಾವಿಸಿದರು.ಮೂಲ್ಕಿ ತಹಸೀಲ್ದಾರ್ ಪೃಥ್ವಿ ಸಾನಿಕಂ, ತಾ ಪಂ ಕಾರ್ಯ ನಿರ್ವಹಣಾಧಿಕಾರಿ ಅರ್ಚಿತ್ ಪರಾಗ್ ಡೋಂಗ್ರೆ, ಮೂಲ್ಕಿ ನ. ಪಂ ಮುಖ್ಯಾಧಿಕಾರಿ ಮಧುಕರ್ ಕೆ. ಪಿಎಸ್‌ಐ ರಾಘವೇಂದ್ರ ನಾಯಕ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್ ಸ್ವಾಗತಿಸಿದರು. ವಿಎ ಆಶಾ ಮೆಹಂದಳೆ ನಿರೂಪಿಸಿದರು.