ನಾರಾಯಣಪುರ ಜಲಾಶಯದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನ.30ರವರೆಗೆ ನಿರಂತರ ನೀರು ಹರಿಸಬೇಕು. ರೈತರ ಬೆಳೆಗಳನ್ನು ಉಳಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಸಚಿವ ನರಸಿಂಹ ನಾಯಕ ರಾಜುಗೌಡ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ನಾರಾಯಣಪುರ ಜಲಾಶಯದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನ.30ರವರೆಗೆ ನಿರಂತರ ನೀರು ಹರಿಸಬೇಕು. ರೈತರ ಬೆಳೆಗಳನ್ನು ಉಳಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಸಚಿವ ನರಸಿಂಹ ನಾಯಕ ರಾಜುಗೌಡ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಶುಕ್ರವಾರ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಯಾದಗಿರಿ ಬಂದ್ ಹಾಗೂ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರೈತರ ಹಿತಾಸಕ್ತಿ ಕಾಪಾಡುವಲ್ಲಿ ಸರ್ಕಾರ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ರೈತರು ಬೆಳೆ ಉಳಿಸಿಕೊಳ್ಳಲು ನೀರಿಗಾಗಿ ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ. ಕೃಷ್ಣಾ ನದಿಯಲ್ಲಿ ನೀರಿದ್ದರೂ ಜಿಲ್ಲೆಯ ರೈತರಿಗೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೆಲಂಗಾಣಕ್ಕೆ ನೀರು ಬಿಡಲು ಸಾಧ್ಯವಾದರೆ ನಮ್ಮ ರೈತರಿಗೆ ಏಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದ ರಾಜುಗೌಡ, ಕುಡಿಯುವ ನೀರಿನ ಉದ್ದೇಶದಿಂದ ತೆಲಂಗಾಣಕ್ಕೆ ನೀರು ಹರಿಸಲಾಗಿದೆ ಎಂಬ ಸಮರ್ಥನೆಯನ್ನು ಒಪ್ಪಲು ಸಾಧ್ಯವಿಲ್ಲ. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ರೈತರ ಹಿತದೃಷ್ಟಿಯಿಂದ ಮರುಪರಿಶೀಲಿಸಲು ಅವಕಾಶವಿದೆ. ಪ್ರಸ್ತುತ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.ಅ.15ರಂದು ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯ 2026-27ನೇ ಸಾಲಿನ ನೀರಾವರಿ ಸಲಹಾ ಸಮಿತಿ ಸಭೆಯ ದಾಖಲೆಗಳನ್ನು ಪ್ರದರ್ಶಿಸಿದ ಅವರು, ವಿವಿಧ ಜಿಲ್ಲೆಗಳಿಗೆ ಕುಡಿಯುವ ನೀರು, ಕೆರೆ ತುಂಬಿಸುವ ಯೋಜನೆ ಹಾಗೂ ಇತರ ಉದ್ದೇಶಗಳಿಗೆ ನೀರು ಕಾಯ್ದಿರಿಸಿರುವ ಕುರಿತು ವಿವರಿಸಿದರು. ವಿಜಯಪುರ ಮತ್ತು ಬಾಗಲಕೋಟೆ ಭಾಗಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಕಾಯ್ದಿರಿಸಲಾಗಿದೆ. ಯಾದಗಿರಿ ಜಿಲ್ಲೆಯ ರೈತರ ಬೆಳೆಗಳ ರಕ್ಷಣೆಗೆ ಅಗತ್ಯವಿರುವ ನೀರನ್ನು ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ವಿಜಯಪುರ ಹಾಗೂ ಬಾಗಲಕೋಟೆ ಭಾಗದ ಜನಪ್ರತಿನಿಧಿಗಳು ತಮ್ಮ ಪ್ರದೇಶದ ನೀರಿನ ಹಕ್ಕಿಗಾಗಿ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಯಾದಗಿರಿ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳ ಜನಪ್ರತಿನಿಧಿಗಳು ರೈತರ ಹಿತಕ್ಕಾಗಿ ಒಗ್ಗಟ್ಟಾಗಬೇಕು. ಸಚಿವ ಎಂ.ಬಿ. ಪಾಟೀಲರು ತಮ್ಮ ಭಾಗಕ್ಕೆ ಕಾಯ್ದಿರಿಸಿರುವ ನೀರಿನಲ್ಲಿ ಸಾಧ್ಯವಾದಷ್ಟು ಪ್ರಮಾಣ ನಮ್ಮ ಭಾಗದ ರೈತರಿಗೂ ಒದಗಿಸಲು ಸಹಕರಿಸಬೇಕು ಎಂದು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವರು ಸಹಿತ ಆಡಳಿತ ಪಕ್ಷದ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ರೈತರ ಸಮಸ್ಯೆ ಕುರಿತು ಕೇವಲ ಸಭೆ ನಡೆಸುವುದು, ಮನವಿ ಪತ್ರ ಸಲ್ಲಿಸುವುದರಿಂದ ಪ್ರಯೋಜನವಿಲ್ಲ. ಸರ್ಕಾರದ ಮೇಲೆ ಒತ್ತಡ ಹೇರಿ ನ.30ರವರೆಗೆ ಕಾಲುವೆಗಳಿಗೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು. ರೈತರ ಸಂಕಷ್ಟ ನಿರ್ಲಕ್ಷಿಸಿದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದರು.
*ರೈತರ ಮೇಲಿನ ಎಫ್ಐಆರ್ ಹಿಂಪಡೆಯಿರಿ: ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ 30 ರೈತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿ ಬಂದಿದೆ. ಬೆಳೆಗಳು ಒಣಗುತ್ತಿರುವ ನೋವಿನಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಅಂತಹ ರೈತರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸುವುದು ಸರಿಯಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೂಡಲೇ ಪ್ರಕರಣಗಳ ಹಿಂಪಡೆಯಲು ಕ್ರಮ ಕೈಗೊಳ್ಳಬೇಕು. ರೈತರ ವಿರುದ್ಧ ಪ್ರಕರಣಗಳನ್ನು ಮುಂದುವರಿಸಿದರೆ ತಾವೇ ಮೊದಲು ಬಂಧನಕ್ಕೆ ಒಳಗಾಗಲು ಸಿದ್ಧವಿದ್ದು, ರೈತರೊಂದಿಗೆ ಜೈಲ್ ಭರೋ ಚಳವಳಿ ನಡೆಸುವುದಾಗಿ ಎಚ್ಚರಿಸಿದರು.ಅರಿಕೇರಿ ಕ್ರಾಸ್ ಬಳಿ ನೀರಿಗಾಗಿ ರೈತರು ನಡೆಸಿದ ಪ್ರತಿಭಟನೆ ಉಲ್ಲೇಖಿಸಿದ ಅವರು, ಬೆಳೆಗಳು ಒಣಗುತ್ತಿರುವುದರಿಂದ ಕಂಗಾಲಾದ ರೈತರು ಮುಳ್ಳಿನ ಮೇಲೆ ಕುಳಿತು ಪ್ರತಿಭಟನೆ ನಡೆಸುವ ಪರಿಸ್ಥಿತಿ ಎದುರಾಗಿದೆ. ರೈತರ ನೋವನ್ನು ಕಂಡಾಗ ಸುಮ್ಮನಿರಲು ಸಾಧ್ಯವಿಲ್ಲ. ಅಧಿಕಾರದಲ್ಲಿರಲಿ, ಇಲ್ಲದಿರಲಿ ರೈತರ ಪರವಾಗಿ ಹೋರಾಟ ನಡೆಸುವುದು ತಮ್ಮ ಕರ್ತವ್ಯ. ರೈತರ ಹಿತಕ್ಕಾಗಿ ಜೈಲಿಗೆ ಹೋಗಲೂ ಸಿದ್ಧ ಎಂದು ಭಾವುಕರಾಗಿ ನುಡಿದರು.
ನ.12ರಂದು ಜಲಾಶಯದ ಬಳಿ ಮತ್ತೊಂದು ಹಂತದ ತೀವ್ರ ಹೋರಾಟ ನಡೆಸುವ ಕುರಿತು ಮಾತನಾಡಿದ ಅವರು, ಹೋರಾಟದ ಸಂದರ್ಭ ಯಾವುದೇ ಕಾರಣಕ್ಕೂ ಜಲಾಶಯ ಅಥವಾ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಬಾರದು. ಜಲಾಶಯ ನಿರ್ಮಾಣವಾಗಿರುವುದು ಜನರ ಹಣದಿಂದ. ಅದನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಹೋರಾಟ ಶಾಂತಿಯುತವಾಗಿರಬೇಕು. ಆದರೆ ರೈತರ ಹಕ್ಕುಗಳ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಬಂದ್ಗೆ ಬೆಂಬಲ ನೀಡಿದ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು, ಹಿತರಕ್ಷಣಾ ಸಮಿತಿಗಳು, ನ್ಯಾಯವಾದಿಗಳು, ವರ್ತಕರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ರಾಜುಗೌಡ ಕೃತಜ್ಞತೆ ಸಲ್ಲಿಸಿದರು. ರೈತರ ಹಿತಕ್ಕಾಗಿ ಯಾವುದೇ ಸಂಘಟನೆ ಹೋರಾಟಕ್ಕೆ ಕರೆ ನೀಡಿದರೂ ತಮ್ಮ ಬೆಂಬಲ ಸದಾ ಇರಲಿದೆ ಎಂದು ಭರವಸೆ ನೀಡಿದರು.