ಜಿಲ್ಲೆಯ ರೈತರಿಗೆ ನಾರಾಯಣಪುರ ಜಲಾಶಯದಿಂದ ನ.30ರವರೆಗೆ ನಿರಂತರ ನೀರು ಹರಿಸಲು ಆಗ್ರಹಿಸಿ ರೈತ, ಕನ್ನಡಪರ ಸಂಘಟನೆಗಳು, ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ನೇತೃತ್ವದಲ್ಲಿ ಶುಕ್ರವಾರ ಕರೆ ನೀಡಿದ್ದ ಯಾದಗಿರಿ ಜಿಲ್ಲೆ ಬಂದ್‌ ಶಾಂತಿಯುತ, ಯಶಸ್ಸಿಯಾಗಿ ನಡೆದಿದೆ. ಜಿಲ್ಲೆಯ ಆರು ತಾಲೂಕು ಕೇಂದ್ರಗಳಲ್ಲಿ ಬಂದ್‌ಗೆ ವಿವಿಧೆಡೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ರೈತರಿಗೆ ನಾರಾಯಣಪುರ ಜಲಾಶಯದಿಂದ ನ.30ರವರೆಗೆ ನಿರಂತರ ನೀರು ಹರಿಸಲು ಆಗ್ರಹಿಸಿ ರೈತ, ಕನ್ನಡಪರ ಸಂಘಟನೆಗಳು, ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ನೇತೃತ್ವದಲ್ಲಿ ಶುಕ್ರವಾರ ಕರೆ ನೀಡಿದ್ದ ಯಾದಗಿರಿ ಜಿಲ್ಲೆ ಬಂದ್‌ ಶಾಂತಿಯುತ, ಯಶಸ್ಸಿಯಾಗಿ ನಡೆದಿದೆ. ಜಿಲ್ಲೆಯ ಆರು ತಾಲೂಕು ಕೇಂದ್ರಗಳಲ್ಲಿ ಬಂದ್‌ಗೆ ವಿವಿಧೆಡೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ.ಜಿಲ್ಲಾ ಕೇಂದ್ರದ ನಗರದಲ್ಲಿ ಬೆಳಗ್ಗೆಯಿಂದಲೇ ಎಲ್ಲ ಅಂಗಡಿ, ಮುಂಗ್ಗಟುಗಳು ಮುಚ್ಚಿದ್ದವು. ವಿವಿಧ ಸಂಘಟನೆಗಳ ನೂರಾರು ಜನರು ಬೆಳಗ್ಗೆಯಿಂದಲೇ ನಗರದ ಎಲ್ಲಡೆ ನಂಚರಿಸಿ ಬಂದ್‌ಗೆ ಸಹಕರಿಸಿ ವ್ಯಾಪಾರ, ವಹಿವಾಟು ಬಂದ್ ಮಾಡುವಂತೆ ಮನವಿ ಮಾಡಿದರು.

ನೇತಾಜಿ ಸುಭಾಶ್ಚಂದ್ರ ಭೋಸ್ ಸರ್ಕಲ್, ಲಾಲ್‌ ಬಹಾದ್ದೂರ್ ಶಾಸ್ತ್ರಿ ಚೌಕ್, ಹೊಸಳ್ಳಿ ಕ್ರಾಸ್, ಗಂಜ್ ಏರಿಯಾ, ಮೈಲಾಪುರ ಅಗಸಿ, ಗಾಂಧಿ ಚೌಕ್ ತಹಸೀಲ್ದಾರ ಕಚೇರಿ ಮುಂಭಾಗ ಹೀಗೆ ವಿವಿಧ ದ್ವಿಚಕ್ರ ವಾಹನಗಳ ಮೇಲೆ ಸಂಚರಿಸಿದ ಅನೇಕರು, ಅಂಗಡಿ, ಹೋಟೆಲ್ ಇತರೆ ವ್ಯಾಪಾರಗಳನ್ನು ಬಂದ್ ಮಾಡಿದರು.

ಹೊಸ ಮತ್ತು ಹಳೆ ಬಸ್ ನಿಲ್ದಾಣಗಳಿಂದ ಬೇರೆ, ಬೇರೆ ಊರುಗಳಿಗೆ ತೆರಳಲು ಆಗಮಿಸಿದ ಬಸ್‌ಗಳನ್ನು ಕಡೆದು ವಾಪಸ್ ಕಳುಹಿಸಿದರು. ಇದರಿಂದ ಬಸ್‌ನಲ್ಲಿ ಕುಳಿತಿದ್ದ ಪ್ರಯಾಣಿಕರು ಅನಿವಾರ್ಯವಾಗಿ ಕೆಳಗಿಳಿದು ವಾಪಸ್ ಮನೆಗಳಿಗೆ ತೆರಳಿದರು. ಬೇರೆ ಕಡೆಗಳಿಂದ ನಗರಕ್ಕೆ ಪ್ರವೇಶಿಸಿದ ಲಾರಿ, ಕಾರು, ವಿವಿಧ ವಾಹನಗಳನ್ನು ತಡೆದು ನಿಲ್ಲಿಸಿದರು. ಗುಂಪು, ಗುಂಪಾಗಿ ಹೊರಟ ಹೋರಾಟಗಾರರು ಇಡೀ ನಗರದ ಎಲ್ಲಡೆ ಸುತ್ತಾಡಿ ಬಂದ್ ಬಗ್ಗೆ ಪರಿಶೀಲನೆ ನಡೆಸಿದರು.

ಬಂದ್‌ನಿಂದಾಗಿ ಸಾವಿರಾರು ಪ್ರಯಾಣಿಕರು ಮತ್ತು ಶಾಲಾ, ಕಾಲೇಜುಗಳಿಗೆ ಮತ್ತು ಬೇರೆ, ಬೇರೆ ಕೆಲಸಗಳಿಗೆ ತೆರಳಬೇಕಾಗಿದ್ದ ಅನೇಕರು ಪರದಾಡಿದರು. ಬಂದ್ ಹಿನ್ನಲೆಯಲ್ಲಿ ಎಲ್ಲಡೆ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು. ಬೆಳಗ್ಗೆ 11ರ ಸುಮಾರಿಗೆ ಇಲ್ಲಿನ ತಹಸಿಲ್ ಕಚೇರಿ ಹತ್ತಿರ ಜಮಾಗೊಂಡ ಸಾವಿರಾರು ಜನರು ಅಲ್ಲಿಂದ ನೇತಾಜಿ ಸುಭಾಶ್ಚಂದ್ರ ಭೋಸ್‌ ವೃತ್ತದವರೆಗೆ ಪಾದಯಾತ್ರೆ ಮೂಲಕ ಆಗಮಿದರು.

ಜಿಲ್ಲೆಯ ಸುರಪುರ, ಶಹಾಪುರ, ವಡಗೇರಾ, ಹುಣನಗಿ, ಗುರುಮಠಕಲ್. ಕೆಂಭಾವಿ, ಕೊಡೆಕಲ್ ಸೇರಿದಂತೆ ವಿವಿಧ ಊರುಗಳಿಂದ ಸಾವಿರಾರು ಜನರು ಇಲ್ಲಿನ ಬಂದ್‌ನಲ್ಲಿ ಭಾಗವಹಿಸಲು ಆಗಮಿಸಿದ್ದರು. ಪ್ರತಿಯೊಬ್ಬರ ಕೊ‌ರಳಲ್ಲಿದ್ದ ಹಸಿರು ಶಾಲು ಗಮನ ಸೆಳೆಯಿತು.

ತಹಸೀಲ್‌ ಕಚೇರಿ ಬಳಿ ಬೆಳಗ್ಗೆ 10ರಿಂದಲೇ ಹೋರಾಟಗಾರರು ಆಗಮಿಸಿದರು. ವಿವಿಧ ಕನ್ನಡಪರ, ರೈತ ಸಂಘಟನೆಗಳು ಪದಾಧಿಕಾರಿಗಳು, ಕಾರ್ಯಕರ್ತರು ತಂಡೋಪತಂಡವಾಗಿ ಆಗಮಿಸಿದರೆ, ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಮತ್ತು ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶರೆಡ್ಡಿ ಮುದ್ದಾಳ ನೇತೃತ್ವದಲ್ಲಿ ನೂರಾರು ಜನರು ಪ್ರತ್ಯೇಕವಾಗಿ ಮೆರವಣಿಗೆ ಮೂಲಕ ಹಲಗಿಗಳ ಸದ್ದಿನೊಂದಿಗೆ ಆಗಮಿಸಿ ಸೇರಿಕೊಂಡರು. ಕಾರು, ಜೀಪ್, ಕ್ರಷ್ಟರ್‌ಗಳಲ್ಲಿ ಜನರು ಆಗಮಿಸಿ ಭಾಗವಹಿಸಿದ್ದರು.

ಲಲಿತಾ ಅನಪುರ, ಹನುಮೇಗೌಡ ಬೀರನಕಲ್, ಉಮೇಶ ಮುದ್ನಾಳ್‌ ನೇತೃತ್ವದಲ್ಲಿ ನೂರಾರು ಆಗಮಿಸಿ ಘೋಷಣೆಗಳನ್ನು ಕೂಗಿ ಬೇಡಿಕೆಗಳಿಗೆ ಆಗ್ರಹಿಸಿದರು. ಸುರಪುರದಿಂದ ರಾಜುಗೌಡ, ಶಹಾಪುರದಿಂದ ಬಸವರಾಜಪ್ಪ ವಿಭೂತಿಹಳ್ಳಿ, ಅಮೀನರೆಡ್ಡಿ ಯಾಳಗಿ ಅವರು ಸಹ ಆಗಮಿಸಿದರು.

ಬಹಿರಂಗ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಮಾಜಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ, ಬಿಜೆಪಿ ಮುಖಂಡರಾದ ರಾಚಣ್ಣಗೌಡ ಮುದ್ನಾ ಳ, ಲಲಿತಾ ಅನಪುರ, ದೇವೇಂದ್ರನಾಥ ನಾದ. ಮಹೇಶರೆಡ್ಡಿ ಮುದ್ನಾಳ್‌, ಸಂಘಟನೆಗಳ ಮುಖಂಡರಾದ ಶರಣು ಗದ್ದುಗೆ, ಭೀಮನಾಯಕ್‌, ಮಲ್ಲಿಕಾರ್ಜುನ, ಜಲ್ಲಪ್ಪಗೊಳ, ಹನುಮಗೌಡ ಬೀರನಕಲ್, ಉಮೇಶ ಮುದ್ನಾಳ್‌, ಬಂಗಾರು ರಾಠೋಡ್‌, ಬೆಂಬಲ ನೀಡಿರುವ ವಕೀಲರ ಪರವಾಗಿ ಭೀಮಾಶಂಕರ ಯರಗೋಳ ಇತರರು ಮಾತನಾಡಿ, ಜಿಲ್ಲೆಯ ರೈತರಿಗೆ ನ.30ರವರೆಗೆ ನೀರು ಹರಿಸಬೇಕು. ಇಲ್ಲವಾದರೇ ರಾಜುಗೌಡ ನೇತೃತ್ವದಲ್ಲಿ ಮುಂದಿನ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಡಿಸಿ, ಎಸ್‌ಪಿ: ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಬಂದ್‌ ಬಹಿರಂಗ ಸಭೆ ಸ್ಥಳಕ್ಕೆ ಆಗಮಿಸಿ ಡಿಸಿ ರಾಹುಲ್ ಪಾಂಡೈ, ಎನ್‌ಪಿ ಪೃಥ್ವಿಕ್ ಶಂಕರ್ ಅವರು ವೇದಿಕೆ ಏರಿ ಹೋರಾಟಗಾರರಿಂದ ಮನವಿ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಡಿಸಿ ರಾಹುಲ್, ಬೇಡಿಕೆಯ ಮನವಿಯನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸಿ. ಇಲ್ಲಿನ ರೈತರ ಸ್ಥಿತಿ ಮತ್ತು ಜಲಾಶಯದಲ್ಲಿನ ನೀರನ ಬಗ್ಗೆ ವಿವರಿಸುವುದಾಗಿ ಹೇಳಿದರು.