ಪ್ರಾಥಮಿಕ ವರದಿಗಳ ಪ್ರಕಾರ ಈ ಭಾಗದಲ್ಲಿ ಕನಿಷ್ಠ ೬೦ ರಿಂದ ೭೦ ಎಕರೆ ಭೂಮಿ ಇರುವುದಾಗಿ ತಿಳಿದುಬಂದಿದೆ. ಇನ್ನೂ ಹೆಚ್ಚಿದ್ದರೂ ಆಶ್ಚರ್ಯಪಡಬೇಕಿಲ್ಲ. ಆ ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ. ಇಲ್ಲಿ ಎಆರ್ಎಐ ಕೇಂದ್ರ ಸ್ಥಾಪನೆಗೆ ಸರ್ಕಾರ ಮುಂದಾದರೆ ಪರಿಹಾರ ರೂಪದಲ್ಲಿ ಸಾವಿರಾರು ಕೋಟಿ ರು. ಪಡೆಯಬಹುದೆಂಬ ಹುನ್ನಾರ ಅಡಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ಜಿಲ್ಲೆಗೆ ಕೈಗಾರಿಕೆ ತರುವುದಕ್ಕೆ ಮನಸ್ಸೂ ಇಲ್ಲ. ಜೆಡಿಎಸ್ನವರನ್ನೇ ಎತ್ತಿಕಟ್ಟಿ ರಾಜಕೀಯ ಮಾಡುತ್ತಿದ್ದಾರಷ್ಟೇ. ಮಂಡ್ಯ ತಾಲೂಕು ಬಸರಾಳು ಸಮೀಪದ ಮುದ್ದನಘಟ್ಟ-ಹೆಗ್ಗಡತಿಹಳ್ಳಿ ಬಳಿಯ ೧೦೭ ಎಕರೆ ಪ್ರದೇಶದಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸುವುದಕ್ಕೆ ಎಆರ್ಎಐ ಅಧಿಕಾರಿಗಳೇ ಸ್ಥಳ ಪರಿಶೀಲನೆ ನಡೆಸಿ ಒಪ್ಪಿಗೆ ಸೂಚಿಸಿದ್ದಾರೆ. ಇದಕ್ಕೆ ಜೆಡಿಎಸ್ ನಾಯಕರು ತಕರಾರು ಎತ್ತುತ್ತಿರುವುದೇಕೆ ಎಂದು ಶಾಸಕ ಪಿ.ರವಿಕುಮಾರ್ ಪ್ರಶ್ನಿಸಿದರು.ಮುದ್ದನಘಟ್ಟ- ಹೆಗ್ಗಡತಿಹಳ್ಳಿ ಗ್ರಾಮದಲ್ಲಿರುವ ೧೦೭ ಎಕರೆ ಜಮೀನು ಸಂಪೂರ್ಣವಾಗಿ ಸರ್ಕಾರಿ ಜಮೀನು. ಈ ಜಮೀನಿನ ಬಗ್ಗೆ ಯಾವುದೇ ಗೊಂದಲ, ತಕರಾರು ಇರುವುದಿಲ್ಲ. ಅದನ್ನು ಕೊಡುವುದಕ್ಕೆ ಸಿದ್ಧರಿದ್ದೇವೆ. ಹೆಚ್ಚುವರಿ ಜಾಗದ ಅವಶ್ಯಕತೆ ಇದ್ದರೆ ರೈತರ ಮನವೊಲಿಸಿ ಈ ಭಾಗದಲ್ಲೇ ಸ್ವಾಧೀನಪಡಿಸಿಕೊಡುತ್ತೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಮುದ್ದನಘಟ್ಟ ಗ್ರಾಮ ವ್ಯಾಪ್ತಿಯಲ್ಲಿ ೧೫೩ ಎಕರೆ ಗೋಮಾಳ ಪ್ರದೇಶವಿದ್ದು, ಅದರಲ್ಲಿ ೭೬ ಎಕರೆ ಪ್ರದೇಶವನ್ನು ರೈತರಿಗೆ ಮಂಜೂರು ಮಾಡಲಾಗಿದೆ. ಉಳಿದ ೭೭ ಎಕರೆ ಖಾಲಿ ಉಳಿದುಕೊಂಡಿದೆ. ಅದೇ ರೀತಿ ಹೆಗ್ಗಡತಿಹಳ್ಳಿ ಗ್ರಾಮದಲ್ಲಿ ೮೯ ಎಕರೆ ಸರ್ಕಾರಿ ಜಾಗವಿದ್ದು ಅದರಲ್ಲಿ ೩೦ ಎಕರೆ ಹೊರತುಪಡಿಸಿ ೫೯ ಎಕರೆ ಪ್ರದೇಶವನ್ನು ರೈತರಿಗೆ ಭೂ ಮಂಜೂರಾತಿ ಮಾಡಲಾಗಿದೆ. ಉಳಿದ ಒಟ್ಟು ೧೦೭ ಎಕರೆ ಜಮೀನು ಒಂದೇ ಬೌಂಡರಿಯಲ್ಲಿರುವುದಾಗಿ ಸ್ಯಾಟಲೈಟ್ ಮೂಲಕ ಮಾಡಿರುವ ಸ್ಕೆಚ್ನ್ನು ಪ್ರದರ್ಶಿಸಿದರು.ಉಳಿದಿರುವ ೧೦೭ ಎಕರೆ ಗೋಮಾಳ ಜಮೀನಿಗೆ ೨೫೦ ಜನರು ೧೯೦ ಎಕರೆ ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರಿ ನಿಯಮ ೯೭(೧)ರ ಪ್ರಕಾರ ಇರುವ ಭೂಮಿಗಿಂತ ಹೆಚ್ಚು ಭೂಮಿಗೆ ಅರ್ಜಿ ಸಲ್ಲಿಸಿದ್ದರಿಂದ ೨೦೨೪ರಲ್ಲೇ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದರು.
ಎಆರ್ಎಐ ಅಧಿಕಾರಿಗಳ ಒಪ್ಪಿಗೆ:ಮುದ್ದನಘಟ್ಟ- ಹೆಗ್ಗಡತಿಹಳ್ಳಿಯಲ್ಲಿರುವ ೧೦೭ ಎಕರೆ ಭೂಮಿಗೆ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಸೂಕ್ತವಾಗಿದೆ ಎಂದು ಎಆರ್ಎಐ ಸಂಸ್ಥೆಯ ಕಮಾಂಡರ್ ಇನ್ ಚೀಫ್-೨ ಒಪ್ಪಿಗೆ ಸೂಚಿಸಿದ್ದಾರೆ. ಅವರ ಷರತ್ತಿನ ಪ್ರಕಾರ ಪರೀಕ್ಷಾ ಕೇಂದ್ರ ಸ್ಥಾಪನೆಗೆ ೧೨೦೦ ಮೀ. ಉದ್ದ, ೫೫೦ ಮೀ. ಅಗಲವಿರುವ ಪ್ರದೇಶವಿರಬೇಕು ಎಂದಿದ್ದು, ಅದರಂತೆ ಈ ಪ್ರದೇಶದ ಭೂಮಿ ಅನುಕೂಲಕರವಾಗಿದೆ. ಆದರೆ, ಇದನ್ನು ಜೆಡಿಎಸ್ನವರು ಒಪ್ಪದೆ ಜನರನ್ನು ಎತ್ತಿಕಟ್ಟಿ ಗೊಂದಲ ಸೃಷ್ಟಿಸುತ್ತಿದ್ದಾರೆ. ನಾವು ಕುಮಾರಸ್ವಾಮಿ ಅವರಿಗೆ ನೀಡಿರುವ ಮಾತಿನಂತೆ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ೧೦೦ ಎಕರೆ ಭೂಮಿ ಕೊಡುವುದಕ್ಕೆ ಸಿದ್ಧರಿದ್ದೇವೆ ಎಂದು ಪುನರುಚ್ಚರಿಸಿದರು.
ಮುದ್ದನಘಟ್ಟ- ಹೆಗ್ಗಡತಿಹಳ್ಳಿಯಲ್ಲಿರುವ ೧೦೭ ಎಕರೆ ಸರ್ಕಾರಿ ಭೂಮಿ ಉಚಿತವಾಗಿ ಕೈಗಾರಿಕೆ ಸ್ಥಾಪನೆಗೆ ಸಿಗಲಿದೆ. ಎಲೆಚಾಕನಹಳ್ಳಿಯಲ್ಲಿ ಭೂ ಸ್ವಾಧೀನಕ್ಕೆ ಹೋದರೆ ಸಾವಿರಾರು ಕೋಟಿ ರು. ಆರ್ಥಿಕ ಹೊರೆ ಬೀಳಲಿದೆ. ಪುಕ್ಕಟೆಯಾಗಿ ಸಿಗುವ ಜಮೀನು ಬಿಟ್ಟು, ಆರ್ಥಿಕ ಹೊರೆ ಬೀಳುವ ಜಮೀನಿಗೆ ಒತ್ತಾಯಿಸುತ್ತಿರುವುದೇಕೆ ಎಂದು ಪ್ರಶ್ನಿಸಿದರು.ಗೋಷ್ಠಿಯಲ್ಲಿ ರಾಜ್ಯ ಕೈಮಗ್ಗ ಮತ್ತು ಜವಳಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಅಶೋಕ್, ನಗರ ಘಟಕದ ಅಧ್ಯಕ್ಷ ರುದ್ರಪ್ಪ ಇದ್ದರು.
--------ಟೈಮ್ ಪಾಸ್ ಮಾಡಲು ಸಮಯವಿಲ್ಲ
ಜಿಲ್ಲೆಯೊಳಗೆ ಕೈಗಾರಿಕೆ ಸ್ಥಾಪನೆಗೆ ೧೦೦ ಎಕರೆ ಭೂಮಿ ಕೇಳಿದ್ದೆವು. ಅದರಂತೆ ಕೊಡುವುದಕ್ಕೆ ದಾಖಲೆಗಳ ಸಹಿತ ಸಿದ್ಧರಿದ್ದೇವೆ. ಮತ್ತೆ ಜೆಡಿಎಸ್ ನಾಯಕರ ಜೊತೆ ಸಭೆ ನಡೆಸುವುದಕ್ಕೆ ನಮಗೆ ಪುರುಸೊತ್ತಿಲ್ಲ. ಈಗ ಮುಖ್ಯಮಂತ್ರಿಗಳು ೧೭೦೦ ಕೋಟಿ ರು. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಹೋಗಿದ್ದಾರೆ. ಆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವುದು ನಮ್ಮ ಗುರಿಯಾಗಿದೆ. ಜೆಡಿಎಸ್ ನಾಯಕರೊಂದಿಗೆ ಸಭೆ ನಡೆಸುತ್ತಾ ಟೈಮ್ ಪಾಸ್ ಮಾಡುವುದಕ್ಕೆ ನಮಗೆ ಇಷ್ಟವಿಲ್ಲ ಎಂದು ನೇರವಾಗಿ ಹೇಳಿದರು.ಈಗಾಗಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ರಾಜ್ಯ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಸಭೆ ಕರೆದಿದ್ದಾಗಿದೆ. ಅಲ್ಲಿಗೆ ಜೆಡಿಎಸ್ ನಾಯಕರೂ ಬಂದಿದ್ದರು. ಮತ್ತೆ ಸಭೆ ಕರೆಯುವುದರಲ್ಲಿ ಅರ್ಥವಿದೆಯೇ. ಅವರಿಗೆ ಬೇಕಾದ ೧೦೦ ಎಕರೆ ಭೂಮಿ ತೋರಿಸಿದ್ದೇವೆ. ಪಡೆದುಕೊಂಡು ಕೈಗಾರಿಕೆ ಸ್ಥಾಪಿಸಬೇಕು. ಜನರನ್ನು ಎತ್ತಿಕಟ್ಟಿ ಗೊಂದಲ ಸೃಷ್ಟಿಸುವುದೇಕೆ. ೧೦೦ ಎಕರೆ ಭೂಮಿ ನೀಡುವುದಾಗಿ ಹೇಳಿ ೬ ತಿಂಗಳವರೆಗೆ ಸುಮ್ಮನಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಡ್ಯಕ್ಕೆ ಬರುವ ವಿಷಯ ತಿಳಿದು ಅದರ ಹಿಂದಿನ ದಿನ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವ ಉದ್ದೇಶವೇನು ಎಂದು ಪ್ರಶ್ನಿಸಿದರು.
-----ಎಲೆಚಾಕನಹಳ್ಳಿಯಲ್ಲಿ ಎಚ್ಡಿಕೆ ಕುಟುಂಬದ ಆಸ್ತಿ: ಸಿ.ಡಿ.ಗಂಗಾಧರ್
ಪ್ರಾಥಮಿಕವಾಗಿ ಕನಿಷ್ಠ ೬೦ ರಿಂದ ೭೦ ಎಕರೆ ಭೂಮಿ ಇರುವ ಶಂಕೆ । ಪರಿಹಾರ ರೂಪದಲ್ಲಿ ಸಾವಿರಾರು ಕೋಟಿ ರು. ಪಡೆಯಲು ಸಂಚುಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ತಾಲೂಕಿನ ಎಲೆಚಾಕನಹಳ್ಳಿ ಸಮೀಪ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕುಟುಂಬದವರ ಆಸ್ತಿ ಇರುವುದರಿಂದಲೇ ಎಆರ್ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಜೆಡಿಎಸ್ ನಾಯಕರು ಭೂಮಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸೂಚ್ಯವಾಗಿ ಹೇಳಿದರು.ಪ್ರಾಥಮಿಕ ವರದಿಗಳ ಪ್ರಕಾರ ಈ ಭಾಗದಲ್ಲಿ ಕನಿಷ್ಠ ೬೦ ರಿಂದ ೭೦ ಎಕರೆ ಭೂಮಿ ಇರುವುದಾಗಿ ತಿಳಿದುಬಂದಿದೆ. ಇನ್ನೂ ಹೆಚ್ಚಿದ್ದರೂ ಆಶ್ಚರ್ಯಪಡಬೇಕಿಲ್ಲ. ಆ ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ. ಇಲ್ಲಿ ಎಆರ್ಎಐ ಕೇಂದ್ರ ಸ್ಥಾಪನೆಗೆ ಸರ್ಕಾರ ಮುಂದಾದರೆ ಪರಿಹಾರ ರೂಪದಲ್ಲಿ ಸಾವಿರಾರು ಕೋಟಿ ರು. ಪಡೆಯಬಹುದೆಂಬ ಹುನ್ನಾರ ಅಡಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಎಆರ್ಎಐ ಸಂಸ್ಥೆಯವರೇ ಮುದ್ದನಘಟ್ಟ- ಹೆಗ್ಗಡತಿಹಳ್ಳಿ ಬಳಿಯ ಜಮೀನನ್ನು ಪಡೆಯುವುದಕ್ಕೆ ಒಪ್ಪಿದ್ದಾರೆ. ಆದರೆ, ಜೆಡಿಎಸ್ ನಾಯಕರು ತಮ್ಮ ಸ್ವಾರ್ಥ ಹಿತಾಸಕ್ತಿ ಕಾಪಾಡಿಕೊಳ್ಳಲು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಮದ್ದೂರು ಕ್ಷೇತ್ರದ ಮಾಜಿ ಶಾಸಕರಾದ ಡಿ.ಸಿ.ತಮ್ಮಣ್ಣನವರೂ ಕೂಡ ತಾವು ಪ್ರತಿನಿಧಿಸುವ ಕ್ಷೇತ್ರದ ಮೇಲಿನ ವ್ಯಾಮೋಹಕ್ಕಿಂತ ಎಲೆಚಾಕನಹಳ್ಳಿ ಬಳಿಯತ್ತ ಬೊಟ್ಟು ಮಾಡುತ್ತಿರುವುದು ಸಾಕಷ್ಟು ಅನುಮಾನಗಳನ್ನು ಮೂಡಿಸುವಂತೆ ಮಾಡಿದೆ ಎಂದು ಆರೋಪಿಸಿದರು.ಇಂತಹ ಸ್ವಾರ್ಥ ಹಿತಾಸಕ್ತಿಯನ್ನು ಜೆಡಿಎಸ್ನವರು ಪಕ್ಕಕ್ಕಿಟ್ಟು ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಮುದ್ದನಘಟ್ಟ- ಹೆಗ್ಗಡತಿಹಳ್ಳಿಯಲ್ಲಿರುವ ೧೦೭ ಎಕರೆ ಜಮೀನು ಪಡೆದು ಕೈಗಾರಿಕೆ ಸ್ಥಾಪಿಸುವಂತೆ ತಿಳಿಸಿದರು.