ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ತಾಲೂಕಿನ ರೈತರು ನಿರಂತರ ವಿದ್ಯುತ್ ವ್ಯತ್ಯಯ, ಕಡಿಮೆ ವೋಲ್ಟೇಜ್, ಟ್ರಾನ್ಸ್‌ಫಾರ್ಮರ್ ದೋಷ ಹಾಗೂ ಸಿಬ್ಬಂದಿ ಕೊರತೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತರ ಬೇಡಿಕೆಗಳನ್ನು ಕೂಡಲೇ ಈಡೇರಿಸದಿದ್ದರೆ ಢವಳಗಿ ಉಪಕೇಂದ್ರದ ಎದುರು ಉಗ್ರ ಹೋರಾಟ ಹಾಗೂ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಎಚ್ಚರಿಕೆ ನೀಡಿದರು.ತಾಲೂಕಿನ ಢವಳಗಿ ಗ್ರಾಮದಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ ರೈತರ ಸಭೆಯಲ್ಲಿ ಅವರು ಮಾತನಾಡಿದರು.
ಕೆಲವು ದಿನಗಳ ಹಿಂದೆ ಕೆಇಬಿ ಇಲಾಖೆಯ ವಿವಿಧ ಸಮಸ್ಯೆಗಳ ಕುರಿತು ರೈತ ಸಂಘ ಹೋರಾಟ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳು ರೈತರ ಬೇಡಿಕೆಗಳನ್ನು ಶೀಘ್ರ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಒಂದು ತಿಂಗಳಿಗೂ ಹೆಚ್ಚು ಕಾಲ ಕಳೆದರೂ ಯಾವುದೇ ಮಹತ್ವದ ಕ್ರಮ ಕೈಗೊಳ್ಳದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ ಎಂದವರು ಹೇಳಿದರು.ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ಮೂಲಸೌಕರ್ಯ ಬಲಪಡಿಸುವುದು ಅಗತ್ಯವಾಗಿದೆ. ಢವಳಗಿ ಉಪಕೇಂದ್ರದ ಮೇಲಿನ ಓವರ್‌ಲೋಡ್ ಸಮಸ್ಯೆ ನಿವಾರಣೆಗಾಗಿ ವನಹಳ್ಳಿ 110 ಕೆ.ವಿ. ಉಪಕೇಂದ್ರದಲ್ಲಿ ಹೆಚ್ಚುವರಿ 20 ಎಂ.ವಿ.ಎ. ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು. ಅಗಸಬಾಳ ಭಾಗದ ರೈತರಿಗೆ ಕಣಕಾಲ ಲೈನ್‌ನಿಂದ ಹಾಗೂ ಬಿದರಕುಂದಿ ಭಾಗದ ರೈತರಿಗೆ ಮುದ್ದೇಬಿಹಾಳ ಸ್ಟೇಷನ್ ಲೈನ್‌ನಿಂದ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮಳೆಗಾಳಿಯಿಂದ ಹಾನಿಗೊಳಗಾದ ಸುಮಾರು 200ಕ್ಕೂ ಅಧಿಕ ವಿದ್ಯುತ್ ಕಂಬಗಳನ್ನು ತಕ್ಷಣ ಬದಲಾಯಿಸಬೇಕು. ಉಪಕೇಂದ್ರಗಳಲ್ಲಿ ಖಾಲಿ ಇರುವ ಲೈನ್‌ಮನ್ ಹಾಗೂ ತಾಂತ್ರಿಕ ಸಿಬ್ಬಂದಿ ಹುದ್ದೆ ಭರ್ತಿ ಮಾಡಿ, ರೈತರಿಗೆ ನಿಗದಿತ ವೇಳಾಪಟ್ಟಿಯಂತೆ ನಿರಂತರ ತ್ರಿಫೇಸ್ ವಿದ್ಯುತ್ ಸರಬರಾಜು ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಮಾತನಾಡಿದ ಬಸನಗೌಡ ಬಿರಾದಾರ, ಸಿದ್ದನಗೌಡ ಜಾಲಿಕಟ್ಟಿ ಹಾಗೂ ಜಾಕೀರ್ ಅವರು, ಅಗಸಬಾಳ, ಹಳ್ಳೂರ, ರೂಡಗಿ ಸೇರಿ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಗಳು ಪದೇ ಪದೆ ಎದುರಾಗುತ್ತಿವೆ. ಸುಟ್ಟ ಟ್ರಾನ್ಸ್‌ಫಾರ್ಮರ್‌ಗಳ ಬದಲಾವಣೆಯಲ್ಲಿ ವಿಳಂಬವಾಗುತ್ತಿದ್ದು, ರೈತರಿಗೆ ತೊಂದರೆಯಾಗುತ್ತಿದೆ. ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ರೈತ ರಾಮನಗೌಡ ಬಿರಾದಾರ ಮಾತನಾಡಿ, ವಿದ್ಯುತ್ ಪೂರೈಕೆಯನ್ನು ರಾತ್ರಿ ವೇಳೆಯಲ್ಲಿ ನೀಡುವ ಬದಲು ಬೆಳಗ್ಗೆ 5 ರಿಂದ 8 ಗಂಟೆಯವರೆಗೆ ವಿದ್ಯುತ್ ಪೂರೈಕೆ ಒದಗಿಸಬೇಕು. ಕಾಲುವೆ ಹಾಗೂ ಕೆರೆಗಳಿಗೆ ಸಮರ್ಪಕ ನೀರು ತುಂಬಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.ನಂತರ ರೈತರು ತಮ್ಮ ವಿವಿಧ ಬೇಡಿಕೆಗಳ ಮನವಿಯನ್ನು ಹೆಸ್ಕಾಂ ಬಸವ ಬಾಗೇವಾಡಿ ವಿಭಾಗದ ಇಇಇ ಸಿದ್ದರಾಮ ಬಿರಾದಾರ ಅವರಿಗೆ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಇಇಇ ಸಿದ್ದರಾಮ ಬಿರಾದಾರ, ರೂಡಗಿ, ಢವಳಗಿ, ಹಳ್ಳೂರ, ಮಡಿಕೇಶ್ವರ ಹಾಗೂ ಅಗಸಬಾಳ ಭಾಗದ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್ ತಂತಿ, ಟ್ರಾನ್ಸ್‌ಫಾರ್ಮರ್ ಸೇರಿ ವಿವಿಧ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲಾಗುವುದು. ಢವಳಗಿ ಹಾಗೂ ಯರಝರಿ ಭಾಗಗಳಲ್ಲಿ ಹೊಸ 110 ಕೆ.ವಿ. ಉಪಕೇಂದ್ರ ಸ್ಥಾಪನೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ರೈತ ಯುವ ಮುಖಂಡ ದೇವರಾಜ ಗುಂಡಕನಾಳ ನಾಗೂರ,ಮುದ್ದೇಬಿಹಾಳ ಹೆಸ್ಕಾಂ ಅಧಿಕಾರಿ ಆರ್.ಎನ್. ಹಾದಿಮನಿ, ಢವಳಗಿ ಹೆಸ್ಕಾಂ ಶಾಖಾಧಿಕಾರಿ ಭೀಮಣ್ಣ ಯಲಗೋಡ,ವಿದ್ಯುತ್ ಸ್ಟೇಷನ್ ಅಧಿಕಾರಿ ಸುನಂದಾ ಜಬಂಗಿ,ಆರ್ ಎಸ್ ಚಿತ್ತಾಪುರ,ಕ್ರೈಂ ಪಿಎಸ್ಐ ಆರ್.ಎಸ್. ಬಂಗಿ, ಪೊಲೀಸ್ ಸಿಬ್ಬಂದಿ, ರೈತ ಮುಖಂಡರು ಹಾಗೂ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.