ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಶ್ಯಾದನಹಳ್ಳಿ ದಣ್ಣಮ್ಮ ಯುವಕರ ಬಳಗ ದೋಸ್ತಿ ದರ್ಬಾರ್ ವತಿಯಿಂದ ಡಿ.28 ಮತ್ತು 29ರಂದು ಪ್ರಥಮ ಬಾರಿಗೆ ಅಂತರ ರಾಜ್ಯಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸಲಾಗಿದೆ.ಶ್ಯಾದನಹಳ್ಳಿ ಹೊರವಲಯದಲ್ಲಿ ನಡೆಯುವ ಸ್ಪರ್ಧೆಗೆ ಡಿ.28ರಂದು ಮಧ್ಯಾಹ್ನ 2 ಗಂಟೆಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಬಿಜೆಪಿ ಮುಖಂಡ ಸಚ್ಚಿದಾನಂದ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಅವ್ವಮಾದೇಶ, ವಿಜಯಕಾಳಿ ದೇವಸ್ಥಾನದ ರಾಜೇಶ್ ಗುರೂಜಿ ಚಾಲನೆ ನೀಡಲಿದ್ದಾರೆ.
ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಗೆ ಎಲ್ಲಾ ಸಿದ್ಧತೆ ನಡೆಸಲಾಗಿದೆ. ಡಿ.28ರಂದು ಶನಿವಾರ ಮಧ್ಯಾಹ್ನ ಸ್ಪರ್ಧೆ ಆರಂಭಗೊಂಡರೆ ಡಿ.29 ಭಾನುವಾರದ ಸಂಜೆವರೆಗೂ ನಡೆಯಲಿದೆ. ಸ್ಪರ್ಧೆಗೆ ಭಾಗವಹಿಸುವ ಜೋಡಿ ಎತ್ತಿನಗಾಡಿಗಳಿಗೆ 3500 ರು. ನೋಂದಣಿ ಶುಲ್ಕ ನಿಗಧಿಪಡಿಸಲಾಗಿದೆ. 11 ಗಂಟೆ ನಂತರ ಬಂದರೆ ಹೆಚ್ಚುವರಿಯಾಗಿ 500 ಪ್ರವೇಶಾತಿ ಶುಲ್ಕ ನೀಡಬೇಕು.ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗುವ ಜೋಡಿ ಎತ್ತಿನಗಾಡಿ ಮಾಲೀಕರಿಗೆ ಪ್ರಥಮ ಬಹುಮಾನ 60 ಸಾವಿರ ನಗದು ಹಾಗೂ ಟ್ರೋಪಿ, ದ್ವಿತೀಯ ಸ್ಥಾನ 40 ಸಾವಿರ ನಗದು, ಟ್ರೋಪಿ, ತೃತೀಯ ಸ್ಥಾನ 30 ಸಾವಿರ ನಗದು, ಟ್ರೋಪಿ, ನಾಲ್ಕನೇ ಸ್ಥಾನ 15 ಸಾವಿರ ನಗದು, ಟ್ರೋಪಿ ಹಾಗೂ ಐದನೇ ಸ್ಥಾನ 10 ಸಾವಿರ ನಗದು ಹಾಗೂ ಟ್ರೋಪಿ ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸುವ ರಾಸುಗಳ ಮಾಲೀಕರು ಸ್ಪರ್ಧೆ ಆರಂಭವಾಗುವ ಮೊದಲೇ ಬೆಳಗ್ಗೆ 9 ರಿಂದ 10 ಗಂಟೆ ಒಳಗಾಗಿ ನೋಂದಾಯಿಸಿಕೊಳ್ಳಬೇಕು. 1 ಹಳ್ಳಿಕಾರ್, 1 ಗೂಳಿ, 1 ಕಿಲಾರಿ, 2 ಹಳ್ಳಿಕಾರ್‌ಗಳಿಗೆ ಅವಕಾಶವಿದೆ. ಸ್ಪರ್ಧೆಯಲ್ಲಿ ರಾಸುಗಳು, ಮಾಲೀಕರು ಹಾಗೂ ಪ್ರೇಕ್ಷಕರಿಗೆ ತೊಂದರೆಯಾದರೆ ಕಮಿಟಿಯವರು ಜವಾಬ್ದಾರರಲ್ಲ, ವಿಡಿಯೋ ಚಿತ್ರೀಕರಣಕ್ಕೆ ಅವಕಾಶವಿಲ್ಲ, ಗಾಡಿಕಟ್ಟಲು ಕೇವಲ 8 ಜನರಿಗೆ ಅವಕಾಶ, ಕಮಿಟಿಯವರು ಗಾಡಿಕಟ್ಟಲು ಕರೆದ 10 ನಿಮಿಷದ ಒಳಗೆ ಬಂದು ಗಾಡಿಕಟ್ಟಬೇಕು, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದೆ.ಸ್ಪರ್ಧೆಗೆ ಶ್ಯಾದನಹಳ್ಳಿಯ ಯಜಮಾನರು, ಮುಖಂಡರು, ಯುವಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಹಕಾರ ನೀಡಿದ್ದಾರೆ. ಎರಡು ದಿನಗಳ ಕಾಲ ನಡೆಯುವಂತಹ ಪ್ರಥಮ ಬಾರಿಯ ಅಂತರ ರಾಜ್ಯಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಗೆ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ 9380413012, ಮೊ- 9591470780ಗೆ ಸಂಪರ್ಕಿಸುವಂತೆ ಗ್ರಾಮದ ಮುಖಂಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ಯಾದನಹಳ್ಳಿ ಪಿ.ಚಲುವರಾಜು ಅವರು ತಿಳಿಸಿದ್ದಾರೆ.