-ಪೌರಕಾರ್ಮಿಕರ ಸಮಸ್ಯೆ, ಡಿಕೆಗಳು, ಕೆಲಸದ ಪರಿಸ್ಥಿತಿಗಳ ಕುರಿತು ಮಾಹಿತಿಪೋಟೋ- 2ಎಂವೈಎಸ್ 58
----------ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರು, ಪೌರ ಕಾರ್ಮಿಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿ, ಅವರ ಸಮಸ್ಯೆಗಳು, ಬೇಡಿಕೆಗಳು ಹಾಗೂ ಕೆಲಸದ ಪರಿಸ್ಥಿತಿಗಳ ಕುರಿತು ಮಾಹಿತಿ ಪಡೆದುಕೊಂಡರು.ಸಂವಾದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ಸಮಸ್ಯೆ ಅಲಿಸಿ ಮಾತನಾಡಿದ ರಾಜ್ಯ ಸಫಾಯಿ ಕರ್ಮಾಚಾರಿ ಆಯೋಗದ ಸದಸ್ಯ ಶಂಕರ ಅಂಕನಶೆಟ್ಟಿಪುರ, ಪೌರ ಕಾರ್ಮಿಕರು ಪಟ್ಟಣದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.
ಅವರ ಶ್ರಮದಿಂದ ಪಟ್ಟಣ ಸ್ವಚ್ಛ ಹಾಗೂ ಸುಂದರವಾಗಿ ಉಳಿದಿವೆ. ಆದ್ದರಿಂದ ಕಾರ್ಮಿಕರ ಹಿತಾಸಕ್ತಿಗೆ ಸಂಬಂಧಿಸಿದ ಎಲ್ಲ ಸೌಲಭ್ಯಗಳು ಸಮರ್ಪಕವಾಗಿ ದೊರಕಿಸಿಕೊಡಲು ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಂವಾದದ ವೇಳೆ ಪೌರ ಕಾರ್ಮಿಕರು ತಮ್ಮ ಸೇವಾ ಭದ್ರತೆ, ವೇತನ, ಆರೋಗ್ಯ ವಿಮೆ, ವಸತಿ ಸೌಲಭ್ಯ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸದಸ್ಯರ ಗಮನಕ್ಕೆ ತಂದರು. ಕಾರ್ಮಿಕರ ಅಹವಾಲುಗಳನ್ನು ಆಲಿಸಿದ ಸದಸ್ಯರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಮಾತನಾಡಿ, ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲಾಗುತ್ತಿದೆ. ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಪರಿಕರಗಳು, ಆರೋಗ್ಯ ತಪಾಸಣೆ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.ಪೌರ ಕಾರ್ಮಿಕರು ತಮ್ಮ ಸಮುದಾಯಕ್ಕೆ ಸಂಬಂಧಿಸಿದ ಹಲವು ಮೂಲಭೂತ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ವಿಶೇಷವಾಗಿ ಸ್ಮಶಾನ ಭೂಮಿ, ನಿವೇಶನ ಹಂಚಿಕೆ ಹಾಗೂ ಸಮುದಾಯ ಭವನ ನಿರ್ಮಾಣದ ಬೇಡಿಕೆಯನ್ನು ಪ್ರಮುಖವಾಗಿ ಮಂಡಿಸಿದರು.
ಕಾರ್ಮಿಕರ ಪ್ರತಿನಿಧಿಗಳು ಮಾತನಾಡಿ, ಹಲವು ವರ್ಷಗಳಿಂದ ಪೌರ ಕಾರ್ಮಿಕರ ಸಮುದಾಯಕ್ಕೆ ಪ್ರತ್ಯೇಕ ಸ್ಮಶಾನ ವ್ಯವಸ್ಥೆ ಇಲ್ಲದಿರುವುದರಿಂದ ಮೃತರ ಅಂತ್ಯಸಂಸ್ಕಾರ ನಡೆಸಲು ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದರು.ಇರುವ ಶ್ಮಶಾನದಲ್ಲಿ ಮೃತ ಪಟ್ಟವರಿಗೆ ಗೋರಿಗಳನ್ನು ನಿರ್ಮಿಸಿರುವುದರಿಂದ ತೀವ್ರ ಸಮಸ್ಯೆ ಎದುರಾಗಿದೆ,ಮುಂದುವರೆದ ಸಮಾಜದವರಿಗೆ ಎರಡೆರಡು ಸ್ನಶಾನಗಳನ್ನು ನೀಡಲಾಗಿದೆ.ಆದರೆ ಪೌರ ಕಾರ್ಮಿಕರಾದ ನಮಗೆ ಸಮರ್ಪಕ ವ್ಯವಸ್ಥೆ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.ಕಾರ್ಮಿಕರ ಮನವಿಗೆ ಸ್ಪಂದಿಸಿದ ಸಫಾಯಿ ಕರ್ಮಾಚಾರಿ ಆಯೋಗದ ಸದಸ್ಯರು, ಮುಖ್ಯಾಧಿಕಾರಿ ಶ್ರೀನಿವಾಸ್ ಹಾಗೂ ತಹಸೀಲ್ದಾರ್ ಟಿ. ಜೆ. ಸುರೇಶಾಚಾರ್ ಅವರು ಸ್ಮಶಾನ, ನಿವೇಶನ ಹಾಗೂ ಸಮುದಾಯ ಭವನಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗುವುದು. ಸಮಸ್ಯೆಗಳ ಪರಿಹಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕಚೇರಿ ವ್ಯವಸ್ಥಾಪಕ ಮಹೇಂದ್ರ, ಸಮುದಾಯ ಸಂಘಟನಾಧಿಕಾರಿ ನಳಿನಿ, ಕಂದಾಯಾಧಿಕಾರಿ ತ್ರಿವೇಣಿ, ಕಂದಾಯ ನಿರೀಕ್ಷಕ ಅಶೋಕ್, ಸಿಬ್ಬಂದಿ ವರ್ಗದ ಆಶಾ, ಗೋಪಾಲ್, ನಿಂಗರಾಜು, ಸ್ಯಾನಿಟರಿ ಸೂಪರ್ ವೈಸರ್ ಪ್ರಸನ್ನ, ಪೌರ ಕಾರ್ಮಿಕರಾದ ಶಿವಣ್ಣ, ಸೋಮ, ಮಹದೇವ, ಸರೋಜ, ಜ್ಯೋತಿ, ಭಾಗ್ಯ, ಗಣೇಶ್, ಸತೀಶ, ನಿಂಗರಾಜು, ಮನೋಜ್, ಮಣಿರಾಜು, ನವೀನ್ ಇದ್ದರು.--------------