ಕೆಎಂಎಫ್ ಹಾಲಿನ ದರವನ್ನು ಪ್ರತಿ ಲೀಟರ್ಗೆ 8 ರು. ಹೆಚ್ಚಿಸುವ ಮೂಲಕ ರೈತರ ಹಿತ ಕಾಪಾಡಲು ಮುಂದಾಗಿದೆ. ರಾಜ್ಯ ಸರ್ಕಾರ ರೈತರು ಹಾಗೂ ಜನಸಾಮಾನ್ಯರ ಪರವಾಗಿ ನಿಂತು ಅವರ ಆರ್ಥಿಕ ಹಿತಾಸಕ್ತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ.
ಕನ್ನಡಪ್ರಭ ವಾರ್ತೆ ಹಲಗೂರು
ಎಂಡಿಸಿಸಿ ಬ್ಯಾಂಕ್ ನೂತನವಾಗಿ ಜಾರಿಗೆ ತಂದಿರುವ ಕೆವಿಎಸ್ ಯೋಜನೆಯಡಿ ಆಸಕ್ತರು ಹಣ ಹೂಡಿಕೆ ಮಾಡಿದರೆ 8.5 ವರ್ಷಗಳಲ್ಲಿ ಹೂಡಿಕೆ ಮೊತ್ತ ದುಪ್ಪಟ್ಟಾಗಲಿದೆ. ಗ್ರಾಮೀಣ ಪ್ರದೇಶದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ ತಿಳಿಸಿದರು.ಡಿ.ಹಲಸಹಳ್ಳಿ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘದ ಆವರಣದಲ್ಲಿ ರಾಜ್ಯ ಸಹಕಾರ ಮಹಾ ಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟ, ಎಂಡಿಸಿಸಿ, ಮನ್ಮುಲ್ ಆಶ್ರಯದಲ್ಲಿ ನಡೆದ 73 ನೇ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ಉದ್ಘಾಟಿಸಿ ಮತ್ತು ಆವರಣದಲ್ಲಿ ಗಿಡ ನೆಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೆಎಂಎಫ್ ಹಾಲಿನ ದರವನ್ನು ಪ್ರತಿ ಲೀಟರ್ಗೆ 8 ರು. ಹೆಚ್ಚಿಸುವ ಮೂಲಕ ರೈತರ ಹಿತ ಕಾಪಾಡಲು ಮುಂದಾಗಿದೆ. ರಾಜ್ಯ ಸರ್ಕಾರ ರೈತರು ಹಾಗೂ ಜನಸಾಮಾನ್ಯರ ಪರವಾಗಿ ನಿಂತು ಅವರ ಆರ್ಥಿಕ ಹಿತಾಸಕ್ತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ನಂದೀಶ್ ಮಾತನಾಡಿ, ಸಹಕಾರ ಸಂಘಗಳ ಒಕ್ಕೂಟದಿಂದ ಸಹಕಾರ ಕ್ಷೇತ್ರದ ಬೆಳವಣಿಗೆ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಹಲವು ವಿಚಾರ ಸಂಕಿರಣಗಳು, ಸಮಸ್ಯೆ ಪರಿಹಾರ ಶಿಬಿರಗಳು ಮತ್ತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಆದರೆ, ಕೆಲವರು ಇಂತಹ ಕಾರ್ಯಕ್ರಮಗಳಿಗೆ ಕೇವಲ ಹಾಜರಾತಿ ದಾಖಲಿಸಲು ಬಂದು ಹೋಗುವ ಪರಿಪಾಠ ಬೆಳೆಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಹಕಾರ ಕ್ಷೇತ್ರದ ಸದಸ್ಯರು ತಮ್ಮ ಜವಾಬ್ದಾರಿ ಅರಿತು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಜ್ಯದ ಎಂಟು ಕಾಲೇಜುಗಳಲ್ಲಿ ಪ್ರಸ್ತುತ ವರ್ಷದಿಂದ ಆರು ತಿಂಗಳ ‘ಡಿಪ್ಲೊಮಾ ಇನ್ ಕೋ-ಆಪರೇಟಿವ್’ ಕೋರ್ಸ್ ಆರಂಭಿಸಲಾಗಿದೆ. ಬಿ.ಕಾಂ ಪದವಿ ಪಡೆದ ಆಸಕ್ತರು ಈ ಕೋರ್ಸ್ಗೆ ಪ್ರವೇಶ ಪಡೆದು ಸಹಕಾರ ಕ್ಷೇತ್ರದ ಕುರಿತು ಅಗತ್ಯ ಜ್ಞಾನ ಮತ್ತು ತರಬೇತಿ ಪಡೆಯಬೇಕು ಎಂದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಇತರೆ ವರ್ಗದ ಅಭ್ಯರ್ಥಿಗಳು 10 ಸಾವಿರ ಶುಲ್ಕ ಪಾವತಿಸಿ ಕೋರ್ಸ್ಗೆ ಸೇರಬಹುದಾಗಿದೆ. ಆರು ತಿಂಗಳ ಡಿಪ್ಲೊಮಾ ಕೋರ್ಸ್ ಪೂರ್ಣಗೊಳಿಸಿದವರಿಗೆ ಸಹಕಾರ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಿದ್ದು, ಆಸಕ್ತರು ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಫಾರೂಕ್ ಪಾಷಾ ಮಾತನಾಡಿ, ಸಹಕಾರ ಸಂಘಗಳು ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು. ಇದೇ ಸಂಘದ ಮಾಜಿ ಅಧ್ಯಕ್ಷರು ಹಾಗೂ ವಿವಿಧ ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಂಘದಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ವಿವಿಧ ಸಂಘ ಸಂಸ್ಥೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಮನ್ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ, ಡಿಸಿಸಿ ಬ್ಯಾಂಕ್ ಸಿಇಒ ವನಜಾಕ್ಷಿ, ಸಹಕಾರ ಸಂಘದ ಉಪ ನಿಬಂಧಕರಾದ ಶೀಲಾ, ಉಪಾಧ್ಯಕ್ಷೆ ಜ್ಯೋತಿ, ನಿರ್ದೇಶಕ ಎಸ್.ಸೋಮಸುಂದರ್, ಸಹಕಾರ ಸಂಘಗಳ ಉಪ ನಿಬಂಧಕಿ ಅನಿತಾ, ಕೆ.ಜೆ.ದೇವರಾಜು, ಮನ್ಮುಲ್ ವಿಸ್ತರಣಾಧಿಕಾರಿ ಶೋಭಿತ್ ಕುಮಾರ್, ಸಿಡಿಒ ರಾಮಕೃಷ್ಣ, ಅಗಸನಪುರ ಸಂಘದ ಕಾರ್ಯದರ್ಶಿ ವೆಂಕಟೇಶ್, ಸಂಘದ ಉಪಾಧ್ಯಕ್ಷ ನಾಗರಾಜು, ಸಂಘದ ಮಾಜಿ ಅಧ್ಯಕ್ಷ ಮತ್ತು ಹಾಲಿ ನಿರ್ದೇಶಕ ಸಿದ್ದಾಚಾರಿ, ನಿಕಟಪೂರ್ವ ಅಧ್ಯಕ್ಷ ಮತ್ತು ಹಾಲಿ ನಿರ್ದೇಶಕ ಬಾಣಸಮುದ್ರ ಶ್ರೀಧರ್, ನಿರ್ದೇಶಕ ದೊಡ್ಡಸ್ವಾಮಿ, ಮಲ್ಲೇಶ್ ಸೇರಿದಂತೆ ಹಲವರು ಇದ್ದರು.