ಹಾವೇರಿ:ಸಿಎಂ ಸಿದ್ದರಾಮಯ್ಯ ಅವರು ಹಂಚಿಕೆ ಮಾಡಿರುವ ಒಳ ಮೀಸಲಾತಿ ಅವೈಜ್ಞಾನಿಕವಾಗಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಡಗೈ ಹಾಗೂ ಬಲಗೈ ಸಮುದಾಯಕ್ಕೆ ಸಮನಾಗಿ ಶೇ.5.25ರಷ್ಟು ನೀಡಿದ್ದಾರೆ. ಆದರೆ, ಇತರ 63 ಉಪಜಾತಿಗಳಿಗೆ ಶೇ. 4.5 ಕೊಟ್ಟು ಕೈತೊಳೆದುಕೊಂಡಿದ್ದಾರೆ. ಇದು ಅವೈಜ್ಞಾನಿಕವಾಗಿದ್ದು, ಬಹಳಷ್ಟು ವರ್ಗಕ್ಕೆ ಅನ್ಯಾಯ ಆಗಿದೆ. ಲಂಬಾಣಿ, ಕೊರಚ, ಕೊರಮ, ಅಲೆಮಾರಿ ಮುಂತಾದ ಉಪ ಜಾತಿಗಳಿಗೆ ಶೇ.4.5 ಮೀಸಲು ಕೊಟ್ಟಿದ್ದು ಸರಿಯಾಗಿಲ್ಲ. ತಮ್ಮ ಸ್ಥಾನ ಭದ್ರವಾಗಿಸಲು ಈ ಹುನ್ನಾರ ನಡೆಸಿದ್ದಾರೆ. ಒಳ ಮೀಸಲಾತಿಯಿಂದ ಯಾರಿಗೂ ನ್ಯಾಯ ಸಿಕ್ಕಿಲ್ಲ. ಸಾಮಾಜಿಕ ನ್ಯಾಯ ಕಾಪಾಡುವ ಕೆಲಸವಾಗಿಲ್ಲ ಎಂದು ದೂರಿದರು.

ಮೋದಿ ಕುರಿತಾಗಿ ಟೆರರಿಸ್ಟ್‌ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅಪ್ಪ ಹಾಗೂ ಅವರ ಮಗ ಪ್ರಿಯಾಂಕ ಖರ್ಗೆ ಅವರಿಗೆ ಪ್ರಚಾರದ ಗೀಳು ಹೆಚ್ಚಾಗಿದೆ. ಸದಾ ಸುದ್ದಿಯಲ್ಲಿ ಇರಬೇಕೆಂದು ಬಯಸಿ ತಂದೆ ಪ್ರಧಾನಿ ಮೋದಿಯವರನ್ನು ಟೆರರಿಸ್ಟ್ ಎಂದೂ, ಮಗ ದಿನಾಲು ಆರೆಸ್ಸೆಸ್‌ನ್ನು ಬೈಯುವುದೇ ರೂಢಿಯಾಗಿಸಿಕೊಂಡಿದ್ದಾರೆ. ಈ ರೀತಿಯ ಕೀಳು ಧೋರಣೆಯನ್ನು ಬಿಡಬೇಕು. ಮಲ್ಲಿಕಾರ್ಜುನ ಖರ್ಗೆ ಅವರು ಸ್ವಾತಂತ್ರ್ಯ ಬಂದಾಗಿನಿಂದಲೂ ಹೆಚ್ಚು ಕಾಲ ರಾಜಕಾರಣದಲ್ಲಿ ಇದ್ದವರು. ದೇಶದ ಪ್ರಗತಿ ಬಗ್ಗೆ ಯೋಚನೆ ಮಾಡಬೇಕೆ ವಿನಃ ಪ್ರಧಾನಿಯವರನ್ನು ಹೀಯಾಳಿಸುವುದಲ್ಲ. ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಪರಿಸ್ಥಿತಿ 11ನೇ ಸ್ಥಾನದಲ್ಲಿ ಇದ್ದಿದ್ದನ್ನು, ನಾಲ್ಕನೇ ಸ್ಥಾನಕ್ಕೆ ತಂದಿದ್ದಾರೆ. ಇನ್ನೊಂದು ವರ್ಷದಲ್ಲಿ 3ನೇ ಸ್ಥಾನಕ್ಕೆ ತರುವ ಸಾಧ್ಯತೆ ಇದೆ. ಯಾರು ಉತ್ತಮ ಕೆಲಸ ಮಾಡುತ್ತಾರೆ ಅವರನ್ನು ಹೊಗಳಬೇಕೆ ಹೊರತು ತೆಗಳಬಾರದು ಎಂದರು.