ಕನ್ನಡಪ್ರಭ ವಾರ್ತೆ ಬೆಳಗಾವಿ ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ಸಮಗ್ರ ಜಾರಿಗೆ ತರುವ ಸಂಬಂಧ ಹೊಸದಾಗಿ ಕಾಯ್ದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ಸಮಗ್ರ ಜಾರಿಗೆ ತರುವ ಸಂಬಂಧ ಹೊಸದಾಗಿ ಕಾಯ್ದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಕರ್ನಾಟಕ ಮಾದರ ಸಮಾಜದ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. ಸುಪ್ರೀಂಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿಗೆ ತರಲಾಗಿದೆ. ಸಮರ್ಪಕ ಅನುಷ್ಠಾನಕ್ಕಾಗಿ ನೂತನ ಕಾಯ್ದೆ ತರಲಾಗುತ್ತಿದೆ. ನಿಮ್ಮೆಲ್ಲರ ನಿರಂತರ ಹೋರಾಟ ನಮಗೆ ಶಕ್ತಿ ತುಂಬಿದೆ. ಸುಪ್ರೀಂಕೋರ್ಟ್‌ ತೀರ್ಮಾನ ಆದಮೇಲೆ ನಾವೆಲ್ಲರೂ ಭೇಟಿಯಾದ ವೇಳೆ ಇದನ್ನು ಮಾಡುವುದಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಭರವಸೆ ಕೊಟ್ಟಿದ್ದಾಗಿ ತಿಳಿಸಿದರು.

ಈಗಾಗಲೇ ಒಳ ಮೀಸಲಾತಿ ಸಂಬಂಧ ಸಂಪುಟ ಸಭೆಯಲ್ಲಿ ತೀರ್ಮಾನ ಆಗಿದೆ. ಒಳ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಇದೇ ಅಧಿವೇಶನದಲ್ಲಿ ಮಸೂದೆ ಪಾಸ್‌ ಆಗುತ್ತದೆ. ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಬೇಕು. ರಾಜ್ಯದಲ್ಲಿ ನಮ್ಮ ಸಮಾಜದ ಜನಸಂಖ್ಯೆ 36 ಲಕ್ಷ ಇದೆ ಎಂಬುದನ್ನು ಗುರುತಿಸಲಾಗಿದೆ. ನಮ್ಮ ಜನಸಂಖ್ಯೆ 45 ಲಕ್ಷ ಇರಬಹುದು. 2026ರಲ್ಲಿ ನಡೆಯುವ ಜನಗಣತಿಯಲ್ಲಿ ಮನೆ ಮನೆಗೆ ಹೋಗಿ ಬರೆಸಬೇಕಿದೆ. ಪ್ರತಿಯೊಂದು ಮನೆಯಲ್ಲಿ ಮಾದರ ಸಮಾಜದ ಸದಸ್ಯರು ಆಗಬೇಕು. ಹೊಸದಾಗಿ 10 ಲಕ್ಷ ಜನಸಂಖ್ಯೆ ನೋಂದಣಿ ಆಗುತ್ತದೆ. ಸಮುದಾಯಕ್ಕೆ ಬಡವ, ಬುದ್ಧಿವಂತ, ಶ್ರೀಮಂತ ಜನರು ಇದ್ದಾರೆ. ಸಂಘದಲ್ಲಿ ಠೇವಣಿ ಸಂಗ್ರಹವಾಗುತ್ತದೆ. ಈ ಠೇವಣಿ ಹಣವನ್ನು ಶೇ.80ರಷ್ಟು ಬಡ ಮಕ್ಕಳ ಶಿಕ್ಷಣಕ್ಕೆ, ಉತ್ತಮ ಪ್ರಜ್ಞೆ ಮೂಡಿಸಲು ವಿನಿಯೋಗ ಮಾಡಲಾಗುವುದು. ಸಮುದಾಯದ ಅಭಿವೃದ್ಧಿಗೆ ಹಣ ನೆರವಾಗಲು ಚಿಂತನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಮಾತನಾಡಿ, ನಮ್ಮನ್ನು ಬ್ರಾಹ್ಮಣರು ಹೊಗಳಿದ್ದಾರೆ. ಬೌದ್ಧರು ಹೊಗಳಿದ್ದಾರೆ. ಆದರೆ, ನಾವ್ಯಾರು ಅವರ ಧರ್ಮಕ್ಕೆ ಹೋಗಲಿಲ್ಲ. ಕ್ರಿಶ್ಟಿಯನ್‌ ಧರ್ಮಕ್ಕೆ ಹೆಚ್ಚಾಗಿ ಹೋಗಿದ್ದೇವೆ. ಕರ್ನಾಟಕದಲ್ಲಿ ಕ್ರಿಶ್ಚಿಯಾನಿಟಿಗೆ ಜಾಸ್ತಿಗೆ ನಾವು ಹೋಗಿದ್ದೇವೆ. ಇದಕ್ಕೆ ಕಾರಣ ಏನು ಎನ್ನುವುದನ್ನು ಇತಿಹಾಸಕಾರರು ಹೇಳಬೇಕು. ಕ್ರಿಶ್ಚಿಯನ್ ಸಂಸ್ಥೆಗಳು ನಮ್ಮನ್ನು ಎತ್ತಿ ಹಿಡಿದವು. ದೇವಸ್ಥಾನಗಳಲ್ಲಿ ನಮ್ಮನ್ನು ಹೋಗಲು ಬಿಡಲಿಲ್ಲ. ಆಗ ನಮ್ಮನ್ನು ಎತ್ತಿಕೊಂಡಿದ್ದು ಕ್ರಿಶ್ಚಿಯನ್ ಸಂಸ್ಥೆಗಳು. ನಮಗೆ ಶಾಲೆ ಕಲಿಸುವ ಕೆಲಸ ಕ್ರಿಶ್ಚಿಯನ್ ಸಂಸ್ಥೆಗಳು ಮಾಡಿವೆ. ಬರೀ ಸಂಸ್ಕಾರ, ಸಂಸ್ಕೃತದಿಂದ ಅಷ್ಟೇ ನಾವು ಹಿಂದೆ ಸರಿಲಿಲ್ಲ. ಶಿಕ್ಷಣ, ಆರ್ಥಿಕ ದೃಷ್ಟಿಯಲ್ಲೂ ರಾಜಕಾರಣದಲ್ಲೂ ಬಹುದೂರ ಹಿಂದೆ ಸರಿದಿದ್ದೇವೆ. ಮುಂದೆ ಏನು ಹೆಜ್ಜೆ ಇಡಬೇಕೆಂಬುದರ ಬಗ್ಗೆ ಅವಲೋಕನ ಆಗಬೇಕು. ಮೀಸಲಾತಿ ಹೋರಾಟ ಎಲ್ಲಿಂದ ಎಲ್ಲಿಗೆ ಬಂತು ಎಂಬುದರ ಕುರಿತು ಚರ್ಚೆ ಆಗಬೇಕು ಎಂದರು.

ಇದು ಒಬ್ಬರ ಹೋರಾಟದಿಂದ ಒಳಮೀಸಲಾತಿ ಆಗಿಲ್ಲ. ಬಹಳ ಜನರ ಹೋರಾಟದಿಂದ ಆಗಿದೆ. ಆಂಧ್ರ ಪ್ರದೇಶ ಮಾದರಿಯಲ್ಲಿ ಕಾನೂನು ಆಗುತ್ತದೆ, ನಮಗೂ ಶಕ್ತಿ ಕೊಡುತ್ತದೆ. ಏನೇ ಒಳ್ಳೆಯ ಕೆಲಸ ಮಾಡಿದರೂ ನಮ್ಮ ಬೆಂಬಲ ಇದೆ. ಆಂಧ್ರ, ತೆಲಂಗಾಣ ಚನ್ನಾಗಿ ಮಾಡಿದ್ದಾರೆ. ಆದರೆ ನಮ್ಮಲ್ಲಿ ಟಚಬಲ್ ಸೇರಿದ್ದರಿಂದ ನಮಗೆ ಸಮಸ್ಯೆ ಆಗುತ್ತಿದೆ. ಡೋರ, ಸಮಗಾರ ಸಮಾಜವೂ ಜೊತೆಗೂಡಿ ಹೋಗಬೇಕು. ಅಲೆಮಾರಿ ಉಳಿದ ಐದು ಲಕ್ಷ ಜನರು ಜಾತಿ ಹುಡುಕಿ ನೋಡಿದರೂ ಅಲ್ಲಿಯೂ ಟಚಬಲ್ ಇದ್ದಾರೆ. ಎಲ್ಲ ಅಲೆಮಾರಿಗಳು ನಮ್ಮವರೇ ಎನ್ನುವುದರಿಂದ ನಮಗೆ ತೊಂದರೆ ಆಗುತ್ತದೆ ಎಂದು ತಿಮ್ಮಾಪುರ ಹೇಳಿದರು.

-------

ಕೋಟ್‌.....

ಕ್ಯಾಬಿನೆಟ್‌ನಲ್ಲಿ ಒಳಮೀಸಲಾತಿಯ ಹಲವು ಕಾನೂನು ತೊಡಕುಗಳ ಬಗ್ಗೆ ಚರ್ಚೆ ನಡೆಯಿತು. ಕ್ಯಾಬಿನೆಟ್‌ನಲ್ಲಿ ತಂದಾಗ ಕಾನೂನು ತರುವ ಕೆಲಸ ಮಾಡಿ ಮುದ್ರೆ ಒತ್ತುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಒಳಮೀಸಲಾತಿ ಆಗಬಾರದೆಂದು ಸಿಎಂ ಸಿದ್ದರಾಮಯ್ಯಗೆ ಸಾಕಷ್ಟು ಒತ್ತಡ ಇತ್ತು. ಆದರೂ ಸಿಎಂ ನಾನು ಮಾಡೇ ಮಾಡುತ್ತೇನೆ ಎಂದು ಮಾತು ಕೊಟ್ಟು ಕೊನೆಗೆ ಸಿದ್ದರಾಮಯ್ಯ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವೆ, ಗ್ರೇಟ್ ಸಿದ್ದರಾಮಯ್ಯ ‌ನಿನಗೆ ಇಲ್ಲಿಂದಲೇ ಶೆಲ್ಯೂಟ್ ಹೊಡೆಯುತ್ತೇನೆ.

- ಆರ್‌.ಬಿ.ತಿಮ್ಮಾಪೂರ, ಅಬಕಾರಿ ಸಚಿವ-------------