ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಂಬಂಧದ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಸಂಗ್ರಹಣೆ ಸಮೀಕ್ಷೆ ಕಾರ್ಯಕ್ಕೆ ಸೋಮವಾರ ಚಿತ್ರದುರ್ಗದ ಗಾಂಧಿನಗರದಲ್ಲಿ ವಿದ್ಯುಕ್ತವಾಗಿ ಚಾಲನೆ ದೊರೆಯಿತು. ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ. ಸೋಮಶೇಖರ್, ಮಾಜಿ ಸಚಿವ ಹೆಚ್. ಆಂಜನೇಯ ಹಾಗೂ ವಿವಿಧ ಮುಖಂಡರುಗಳ ಖುದ್ದು ಉಪಸ್ಥಿತರಿದ್ದು ಸಮೀಕ್ಷೆಗೆ ಹಸಿರು ನಿಶಾನೆ ತೋರಿದರು.ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಸಮಾನತೆ ಮತ್ತು ಸಾಮಾಜಿಕ ನ್ಯಾಯ ಎಲ್ಲಾ ವರ್ಗದವರಿಗೆ ಎಲ್ಲಾ ಕಾಲದಲ್ಲಿಯೂ ನೀಡುವುದು ಸರ್ಕಾರದ ಅತಿ ದೊಡ್ಡ ಆಕಾಂಕ್ಷೆಯಾಗಿದೆ. ಈ ಸಮಾನತೆಯ ಪರಿಕಲ್ಪನೆ ಅನೇಕ ಶ್ರೇಷ್ಠ ಚಿಂತನಶೀಲರು ಮತ್ತು ದಾರ್ಶನಿಕರಿಂದ ಸ್ಪೂರ್ತಿ ಪಡೆದಿದೆ. ಭಾರತ ಸಂವಿಧಾನದ 15ನೇ ಪರಿಚ್ಛೇದವು ಕುಲ, ಜಾತಿ, ಲಿಂಗ ಮತ್ತು ಜನ್ಮ ಸ್ಥಳಗಳ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ. ಅದೇ ರೀತಿ ಪರಿಚ್ಛೇದ 16ರಲ್ಲಿ ಎಲ್ಲರಿಗೂ ಸಾರ್ವತ್ರಿಕ ಉದ್ಯೋಗ ವಲಯದಲ್ಲಿ ಸರಿಸಮಾನ ಅವಕಾಶಗಳ ಒದಗಿಸಲು ಅನುವು ಮಾಡಿಕೊಡಲಾಗಿದೆ ಎಂದರು.
ವಿಭಿನ್ನ ಸ್ಥಳಗಳಲ್ಲಿ ವಾಸವಾಗಿರುವ ಅಥವಾ ವಿಭಿನ್ನ ವೃತ್ತಿಗಳಲ್ಲಿ ತೊಡಗಿರುವ ವ್ಯಕ್ತಿಗಳು ಹಾಗೂ ಜನ ಸಮೂಹಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಮತ್ತು ಸ್ಥಾನಮಾನ ಸೌಲಭ್ಯ ಹಾಗೂ ಅವಕಾಶಗಳಲ್ಲಿ ತಾರತಮ್ಯವನ್ನು ತೊಡೆದು ಹಾಕಲು ಕಾರ್ಯಕ್ರಮ ರೂಪಿಸುವುದಕ್ಕಾಗಿ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ಮಾಡಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ವೋಚ್ಛ ನ್ಯಾಯಾಲಯವು ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ತೀರ್ಪು ನೀಡಿದೆ. ಕರ್ನಾಟಕ ಸರ್ಕಾರ ಒಳಮೀಸಲಾತಿ ಜಾರಿ ಮಾಡಲು ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ವ್ಯಕ್ತಿ ವಿಚಾರಣಾ ಆಯೋಗ ನೇಮಿಸಿದ್ದು ಅವರ ಆಶಯದಂತೆ ಒಳ ಮೀಸಲಾತಿ ವರ್ಗೀಕರಿಸಲು ದತ್ತಾಂಶ ಸಂಗ್ರಹಿಸಲು ಸಮೀಕ್ಷೆ ಕೈಗೊಳ್ಳಲಾಗಿದೆ ಎಂದರು.ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ, ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿರುವ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯತೆ ಇತ್ಯಾದಿ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಮಾಡುವುದು ನ್ಯಾಯಮೂರ್ತಿ ಡಾ.ಹೆಚ್.ಎಸ್.ನಾಗಮೋಹನ್‍ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಉದ್ದೇಶವಾಗಿದೆ. ಪರಿಶಿಷ್ಟ ಜಾತಿಗಳ ಸ್ಥಿತಿಗತಿಗಳ ಬಗ್ಗೆ ವೈಜ್ಞಾನಿಕವಾಗಿ ಮತ್ತು ವಾಸ್ತವಿಕ ಮಾಹಿತಿ ಪಡೆದುಕೊಂಡು ಒಳ ಮೀಸಲಾತಿಯನ್ನು ವರ್ಗೀಕರಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ ಎಂದರು.
ಸಮೀಕ್ಷೆಯಿಂದ ಹೊರಹೊಮ್ಮಿದ ಅಂಶಗಳ ಆಧಾರದಲ್ಲಿ ಅಂತಹ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಾನಮಾನವನ್ನು ಅಧ್ಯಯನ ಮಾಡಿ ಒಳ ಮೀಸಲಾತಿ ವರ್ಗೀಕರಣವನ್ನು ಮಾಡುವುದಕ್ಕಾಗಿ ಎಲ್ಲಾ ಪರಿಶಿಷ್ಟ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಕುರಿತು ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಮನೆ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಸೂಕ್ತ ರೀತಿಯಲ್ಲಿ ಮಾಹಿತಿ ನೀಡಿ, ಅಗತ್ಯ ಸಹಕಾರ ನೀಡುವ ಮೂಲಕ ಸಮೀಕ್ಷಾ ಕಾರ್ಯ ಯಶಸ್ವಿಗೊಳಿಸಿ, ಒಳ ಮೀಸಲಾತಿಯ ಹಂಚಿಕೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಈ ವೇಳೆ ಉಪಸ್ಥಿತರಿದ್ದರು.
ಜಾತಿ ಗಣತಿಗೆ 1,825 ಶಿಕ್ಷಕರ ನಿಯೋಜನೆ:
ಸಮೀಕ್ಷಾ ಕಾರ್ಯ ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ 3 ಮಾಸ್ಟರ್ ಟ್ರೈನರ್ಸ್‍ಗಳನ್ನು ಹಾಗೂ ತಾಲೂಕು ಮಟ್ಟದಲ್ಲಿ ಪ್ರತಿ ತಾಲೂಕಿನಿಂದ 5 ರಂತೆ ಒಟ್ಟು 30 ಮಾಸ್ಟರ್ಸ್ ಟ್ರೈನರ್ಸ್‍ಗಳು, 1,661 ಗಣತೀದಾರರು, 164 ಮೇಲ್ಚಿಚಾರಕರು ಸೇರಿದಂತೆ ಒಟ್ಟು 1,825 ಶಿಕ್ಷಕರನ್ನು ಶಿಕ್ಷಣ ಇಲಾಖೆಯಿಂದ ನಿಯೋಜಿಸಲಾಗಿದೆ. ಸಮಗ್ರ ಮೇಲ್ಚಿಚಾರಣೆಗೆ ತಾಲೂಕಿಗೆ ಒಬ್ಬರಂತೆ ಜಿಲ್ಲಾ ಮಟ್ಟದ 6 ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.ಸಮೀಕ್ಷೆ ಕುರಿತು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ಎಲ್ಲಾ ಪರಿಶಿಷ್ಟ ಜಾತಿ ಜನಾಂಗದ ಸಮುದಾಯಗಳಿಗೆ ಸ್ಥಳೀಯ ಸಂಸ್ಥೆಗಳ ಮೂಲಕ, ದಿನಪತ್ರಿಕೆ ಹಾಗೂ ಆಕಾಶವಾಣಿ ಪ್ರಸಾರ ಕೇಂದ್ರದ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದ್ದು, ಎಲ್ಲಾ ಪರಿಶಿಷ್ಟ ಜಾತಿ ಜನಾಂಗದವರ ಮನೆ ಮನೆಗೆ ಸಮೀಕ್ಷಾ ಕಾರ್ಯಕ್ಕೆ ಭೇಟಿ ನೀಡುವ ಗಣತಿದಾರರು ಮನೆಯ ಮುಖ್ಯಸ್ಥರ ಒಪ್ಪಿಗೆ ಪಡೆದು ದತ್ತಾಂಶವನ್ನು ಸಂಗ್ರಹಿಸಲು ನಿರ್ದೇಶಿಸಲಾಗಿದೆ. ಸಮೀಕ್ಷೆ ನಡೆಸುವ ಎಲ್ಲಾ ಗಣತಿದಾರರಿಗೆ ಅಗತ್ಯ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದರು.