ಮಾದಿಗರ ಉಜ್ವಲ ಭವಿಷ್ಯಕ್ಕೆ ಒಳಮೀಸಲಾತಿಯೇ ಆಧಾರ

| Published : Apr 05 2025, 12:52 AM IST

ಸಾರಾಂಶ

ಮಾದಿಗ ಜನಾಂಗ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ರಾಜ್ಯ ಸರ್ಕಾರ ನೀಡುವ ಒಳಮೀಸಲಾತಿ ವರದಿ ಆಧಾರದ ಮೇಲೆ ನಮ್ಮ ಭವಿಷ್ಯ ನಿಂತಿದೆ. ನಮ್ಮ ಗಮನ ಈಗ ಒಳಮೀಸಲಾತಿಯ ಕಡೆ ಇದೆ. ಇದನ್ನು ಮನಗಂಡು ಸರ್ಕಾರ ನ್ಯಾಯ ಒದಗಿಸಿಕೊಡಬೇಕು ಎಂದು ಪುರಸಭಾಧ್ಯಕ್ಷ ಮೈಲಪ್ಪ ಮನವಿ ಮಾಡಿದ್ದಾರೆ.

- ಒಳಮೀಸಲಾತಿ ಸಮೀಕ್ಷೆ ಪೂರ್ವಭಾವಿ ಸಭೆಯಲ್ಲಿ ಹೊನ್ನಾಳಿ ಪುರಸಭಾಧ್ಯಕ್ಷ ಮೈಲಪ್ಪ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮಾದಿಗ ಜನಾಂಗ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ರಾಜ್ಯ ಸರ್ಕಾರ ನೀಡುವ ಒಳಮೀಸಲಾತಿ ವರದಿ ಆಧಾರದ ಮೇಲೆ ನಮ್ಮ ಭವಿಷ್ಯ ನಿಂತಿದೆ. ನಮ್ಮ ಗಮನ ಈಗ ಒಳಮೀಸಲಾತಿಯ ಕಡೆ ಇದೆ. ಇದನ್ನು ಮನಗಂಡು ಸರ್ಕಾರ ನ್ಯಾಯ ಒದಗಿಸಿಕೊಡಬೇಕು ಎಂದು ಪುರಸಭಾಧ್ಯಕ್ಷ ಮೈಲಪ್ಪ ಮನವಿ ಮಾಡಿದರು.

ಶುಕ್ರವಾರ ಪುರಸಭೆ ಆವರಣದ ಕನಕದಾಸ ರಂಗಮಂದಿರದಲ್ಲಿ ಏರ್ಪಡಿಸಿದ್ದ ಒಳಮೀಸಲಾತಿ ಸಮೀಕ್ಷೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರ ಈಗಾಗಲೇ ಒಳಮೀಸಲಾತಿ ಸಮೀಕ್ಷೆ ಮಾಡಲು ತಯಾರಿ ಮಾಡಿಕೊಂಡಿದೆ. ಸಮೀಕ್ಷೆಗೆ ತಮ್ಮ ಮನೆಗಳ ಹತ್ತಿರ ಬಂದಾಗ ಮನೆಯ ಹಿರಿಯರು ಇದ್ದು, ಜಾತಿ ಕಾಲಂನಲ್ಲಿ ಮಾದಿಗ ಎಂದು ನಮೂದಿಸಲು ಹೇಳಿ, ಆಗ ಮೀಸಲಾತಿ ಹಂಚಿಕೆಯಲ್ಲಿ ನಮಗೆ ಸಹಕಾರಿಯಾಗಲಿದೆ ಎಂದರು.

ದಲಿತ ಮುಖಂಡ ದಿಡಗೂರು ತಮ್ಮಣ್ಣ ಮಾತನಾಡಿ, 30 ವರ್ಷಗಳಿಂದಲೂ ನಮ್ಮ ಒಳಮೀಸಲಾತಿ ಹಕ್ಕಿಗಾಗಿ ಹಿರಿಯರಾದಿಯಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಯಾವುದೇ ಸರ್ಕಾರಗಳು ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಿಲ್ಲ. ಆದ್ದರಿಂದ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿವೆ. ಆದರೆ, ಇದರಲ್ಲಿ ಮೀಸಲಾತಿ ಸಮೀಕ್ಷೆ ಮುಖಾಂತರ ಒಳ ಮೀಸಲಾತಿ ನೀಡಬೇಕು. ಸದಾಶಿವ ಆಯೋಗ, ಕಾಂತರಾಜ್ ಆಯೋಗ, ಮಾಧುಸ್ವಾಮಿ ಆಯೋಗಳು ವರದಿ ನೀಡಿದರೂ ಇದುವರೆವಿಗೂ ಆಡಳಿತ ನಡೆಸಿದ ಯಾವುದೇ ಸರ್ಕಾರಗಳು ನಮಗೆ ನ್ಯಾಯಯುತ ಮೀಸಲಾತಿ ನೀಡುವಲ್ಲಿ ವಿಫಲವಾಗಿವೆ ಎಂದರು.

ಹಿಂದುಳಿದ ವರ್ಗಗಳ ಧೀಮಂತ ನಾಯಕ ಎಂದು ಕರೆಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲಾದರೂ ಒಳಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ದಲಿತ ವರ್ಗದ ಜನ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಹಿರಿಯ ಮುಖಂಡರಾದ ಬೇಲಿಮಲ್ಲೂರು ಉಮೇಶ್, ಮಾರಿಕೊಪ್ಪ ಮಂಜಪ್ಪ ಮಾತನಾಡಿದರು. ಕೆಂಗಲಹಳ್ಳಿ ಪ್ರಭಾಕರ್, ಹಾಲೇಶ ರಾಂಪುರ, ಕುಂಕುವ ಕೃಷ್ಣಪ್ಪ, ನವೀನ್‌ಕುಮಾರ್, ಕೆ.ಪಿ.ಹಾಲೇಶ್, ದಲಿತ ಮುಖಂಡರು ಉಪಸ್ಥಿತರಿದ್ದರು.

- - - -4ಎಚ್.ಎಲ್.ಐ2:

ಪುರಸಭೆ ಆವರಣದ ಕನಕದಾಸ ರಂಗಮಂದಿರದಲ್ಲಿ ಏರ್ಪಡಿಸಿದ್ದ ಒಳಮೀಸಲಾತಿ ಸಮೀಕ್ಷೆ ಪೂರ್ವಭಾವಿ ಸಭೆಯನ್ನು ಪುರಸಭೆ ಅಧ್ಯಕ್ಷ ಮೈಲಪ್ಪ ಉದ್ಘಾಟಿಸಿದರು.