ಸಾರಾಂಶ
ಹುಬ್ಬಳ್ಳಿ: ಸುಪ್ರಿಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿಗೆ ಒತ್ತಾಯಿಸಿ ಆ. 1ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಾಗೂ ಆ. 14ರ ನಂತರ ಅಸಹಕಾರ ಚಳವಳಿ ನಡೆಸಲಾಗುವುದು ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿಗೆ ಆದೇಶ ನೀಡಿ ಆ. 1ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಆದರೆ, ರಾಜ್ಯ ಸರ್ಕಾರ ಒಳ ಮೀಸಲಾತಿ ಅನುಷ್ಠಾನದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ. ಇನ್ನು ಆ. 11ರಂದು ಅಧಿವೇಶನ ಆರಂಭವಾಗಲಿದ್ದು, ಅಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳದಿದ್ದರೆ ಆ. 14ರ ನಂತರ ರಾಜ್ಯಾದ್ಯಂತ ಅಸಹಕಾರ ಚಳವಳಿ ಸೇರಿದಂತೆ ತೀವ್ರ ಹೋರಾಟ ಆರಂಭಸಲಿದ್ದೇವೆ ಎಂದು ತಿಳಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರು ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್ ಹಾಗೂ ಕಾನೂನು ಇಲಾಖೆ ಅಧಿಕಾರಿಗಳನ್ನು ಕರೆದು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವುದು ನನ್ನ ಉದ್ದೇಶವಾಗಿದೆ. ಅವರಿಗೆ ನ್ಯಾಯ ದೊರೆಕಿಸಿಕೊಡುವಂತೆ ಸೂಚಿಸಿದ್ದರು. ಅದರ ಪರಿಣಾಮ ಇಷ್ಟು ದಶಕಗಳ ಹೋರಾಟಕ್ಕೆ ಯಶಸ್ಸು ದೊರೆತಿದೆ. ಆದರೆ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸುಪ್ರಿಂ ಕೋರ್ಟ್ ಆದೇಶದ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದರು.
ಸಾಮಾಜಿಕ ನ್ಯಾಯದ ಪರವಾಗಿರುವ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಮೊದಲ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. ಶೋಷಿತ ಜನಾಂಗ ಮೇಲೆ ಬರಬಾರದು ಎನ್ನುವ ಕೀಳು ಮನಸ್ಥಿತಿ ಕಾಂಗ್ರೆಸ್ ಪಕ್ಷ ಹೊಂದಿದೆ ಎಂದು ದೂರಿದರು.ಒಳ ಮೀಸಲಾತಿ ವಿಚಾರದಲ್ಲಿ ಭೋವಿ, ಲಂಬಾಣಿ, ಕೊರಮ ಸೇರಿದಂತೆ ಇತರೆ ಸಮಾಜಗಳಿಗೆ ನಿಮ್ಮ ಮೀಸಲಾತಿ ತಪ್ಪಲಿದೆ ಎನ್ನುವ ಗೊಂದಲ ಸೃಷ್ಟಿಸುವ ಕೆಲಸ ಕಾಂಗ್ರೆಸ್‌ನಿಂದ ಆಗಿದೆ. ಹಿಂದೆ ಎಸ್ಸಿಯಲ್ಲಿ 6 ಹಾಗೂ ಎಸ್ಟಿಯಲ್ಲಿ 6 ಜಾತಿಗಳಿದ್ದವು. ಆದರೆ, ಇಂದು ಎಸ್ಸಿಯಲ್ಲಿ 101 ಹಾಗೂ ಎಸ್ಟಿಯಲ್ಲಿ 56 ಜಾತಿಗಳನ್ನು ಸೇರಿಸಲಾಗಿದೆ ಎಂದರು.
ಪ್ರಮುಖರಾದ ಮಂಜುನಾಥ ಕೊಂಡಪಲ್ಲಿ, ಸಂತೋಷ ಸವಣೂರು, ಸಹದೇವ ಮಾಳಗಿ, ಮೋಹನ ಹಿರೇಮನಿ, ಸುರೇಶ ಖಾನಾಪುರ ಸೇರಿದಂತೆ ಇನ್ನಿತರರಿದ್ದರು.