ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗಿರುವುದರಿಂದ ಒಳ ಮೀಸಲಾತಿ ಜಾರಿಯಲ್ಲಿ ಗೊಂದಲ ಸೃಷ್ಟಿಸಿ ನೇಮಕಾತಿ ಮುಂದೂಡಲಾಗಿದೆ ಎಂದು ಸಂಸದ ಹಾಗೂ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಆರೋಪಿಸಿದ್ದಾರೆ.ರಾಜ್ಯ ಬಿಜೆಪಿ ದಲಿತ ನಾಯಕರ ನಿಯೋಗವು ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ವಿಳಂಬ ಕುರಿತು ಸೋಮವಾರ ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರವು ಆರ್ಥಿಕವಾಗಿ ದಿವಾಳಿ ಆಗಿದೆ. ಸರ್ಕಾರದಲ್ಲಿ 2.85 ಲಕ್ಷ ಹುದ್ದೆಗಳು ಖಾಲಿ ಇದ್ದು, ಹಣ ಇಲ್ಲದ ಕಾರಣಕ್ಕೆ ಒಳ ಮೀಸಲಾತಿಯ ಗೊಂದಲ ಸೃಷ್ಟಿಸಿ ನೇಮಕಾತಿ ಮುಂದೂಡಿದೆ ಎಂದು ಕಿಡಿಕಾರಿದರು.
ನೇಮಕಾತಿ ಇಲ್ಲದೇ ವಿದ್ಯಾವಂತ ಯುವಜನತೆ ನಿರಾಸೆ ಹಾಗೂ ಹತಾಶರಾಗಿದ್ದಾರೆ. ಒಳ ಮೀಸಲಾತಿ ಕುರಿತ ಸುಪ್ರೀಂ ಕೋರ್ಟಿನ ಆದೇಶ ಪಾಲಿಸಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರವು ವರದಿಗಳನ್ನು ಗಮನಿಸಿ ಬಳಿಕ ಒಳ ಮೀಸಲಾತಿ ಜಾರಿ ಮಾಡಬೇಕಿತ್ತು. ತರಾತುರಿಯಲ್ಲಿ ಸದನದಲ್ಲಿ ಒಳ ಮೀಸಲಾತಿ ಮಸೂದೆ ಮಂಡಿಸಿ ಚರ್ಚೆ ಇಲ್ಲದೆ ಅಂಗೀಕರಿಸಿಕೊಂಡು ಓಡಿ ಹೋದರು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಪರಿಶಿಷ್ಟ ಸಮುದಾಯಗಳಿಗೆ ಮೀಸಲಾದ 39 ಸಾವಿರ ಕೋಟಿ ರು. ಹಣವನ್ನು ಸಿದ್ದರಾಮಯ್ಯ ಸರ್ಕಾರ ಬೇರೆ ಉದ್ದೇಶಗಳಿಗೆ ಬಳಸಿರುವುದು ಖಂಡನೀಯ. ಮುಂಬರುವ ಬಜೆಟ್‌ನಲ್ಲಿ ನೀಡಲಾಗುವ 42 ಸಾವಿರ ಕೋಟಿ ರು. ಅನುದಾನವನ್ನು ಗ್ಯಾರಂಟಿಗಳು ಹಾಗೂ ಅನ್ಯ ಉದ್ದೇಶಗಳಿಗೆ ಬಳಸಬಾರದು. ಒಂದು ವೇಳೆ ಬಳಸಿದರೆ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಎಸ್‍ಸಿ ಪಟ್ಟಿಯಲ್ಲಿ ಬರುವ 101 ಜಾತಿಗೆ ಸಮರ್ಪಕ ಮೀಸಲಾತಿ ಸೌಲಭ್ಯ ದೊರಕುತ್ತಿಲ್ಲ. ಮಾದಿಗರ ಸಮುದಾಯದವರು ಹಲವು ದಶಕಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿನಲ್ಲಿ ಅಫಿಡವಿಟ್ ಹಾಕಿಸಿ ಸಮರ್ಥ ವಾದ ಮಂಡಿಸಿತ್ತು. ಮೋದಿ ಸರ್ಕಾರವು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದ್ದು, ಒಳ ಮೀಸಲಾತಿ ಕೊಡಲು ಒಪ್ಪಿಗೆ ಸೂಚಿಸಿತ್ತು. ಸುಪ್ರೀಂ ಕೋರ್ಟ್ ಆದೇಶ ಸಹ ಇದೆ. ಹೀಗಾಗಿ ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಹೇಳಿದರು.
ಈ ಒಳ ಮೀಸಲಾತಿ ಮಸೂದೆ ಮಂಡನೆಗೂ ಮುನ್ನ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಸರ್ವ ಪಕ್ಷಗಳ ಅಭಿಪ್ರಾಯ ಪಡೆಯದೆ ಏಕಪಕ್ಷೀಯ ನಿರ್ಣಯ ಕೈಗೊಂಡಿತು. ಬಳಿಕ ಶಾಸನಬದ್ಧ, ಸಂವಿಧಾನ ಆಶಯಕ್ಕೆ ಅನುಗುಣ ಅಥವಾ ಮಾಧುಸ್ವಾಮಿ ಸಮಿತಿ ಅಥವಾ ನಾಗಮೋಹನ್ ದಾಸ್ ಸಮಿತಿ ವರದಿಯಂತೆಯೂ ಒಳ ಮೀಸಲಾತಿ ಜಾರಿ ಮಾಡಲಿಲ್ಲ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.