ಇಸ್ರೋ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ ಉದ್ಘಾಟನೆ: ಪ್ರಾಂಶುಪಾಲ ಡಾ. ಎಂ.ಎ.ಗೌತಮ್ ಮಾಹಿತಿಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಗರದ ಆದಿಚುಂಚನಗಿರಿ ಮಹಾ ವಿದ್ಯಾಲಯದಲ್ಲಿ ಇಂಟರ್ ನ್ಯಾಷನಲ್ ಕಾನ್ಫರೆನ್ಸ್ ಆನ್ ಎಮರ್ಜಿಂಗ್ ರಿಸರ್ಚ್ ಇನ್ ಸ್ಮಾರ್ಟ್ ಎಲೆಕ್ಟ್ರಾನಿಕ್ಸ್ ಅಂಡ್ ಮಷಿನ್ ಇನ್ಫಾರ್ಮ್ಯಾಟಿಕ್ಸ್ ಎಂಬ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಏ.9 ಮತ್ತು 10 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎ.ಗೌತಮ್ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಬೆಂಗಳೂರು ಹಾಗೂ ಕಂಪ್ಯೂಟೇಷನಲ್ ಇಂಟೆಲಿಜೆನ್ಸ್ ಸೊಸೈಟಿ ಸಹಯೋಗದಲ್ಲಿ ಏರ್ಪಡಿಸಲಾಗಿದೆ. ಸಮ್ಮೇಳನವನ್ನು ಏ.9ರ ಬೆಳಗ್ಗೆ 9.30ಕ್ಕೆ ಇಸ್ರೋ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ ಉದ್ಘಾಟಿಸಲಿದ್ದಾರೆ. ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾ ಸ್ವಾಮಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶೃಂಗೇರಿ ಗುಣನಾಥ ಸ್ವಾಮಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಡಾ. ಚೆಂಗಪ್ಪ ಮುಂಜಂದಿರ, ಡಾ. ಸುಮನಾ ಮರದಿತ್ಯ ವಿಶೇಷ ಆಹ್ವಾನಿತರಾಗಿದೆ. ಸಮ್ಮೇಳನದಲ್ಲಿ ಸಂಶೋಧಕರು, ಶಿಕ್ಷಕರು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಸ್ಮಾರ್ಟ್ ಎಲೆಕ್ಟ್ರಾನಿಕ್ಸ್, ಇನ್ಫಾರ್ಮ್ಯಾಟಿಕ್ಸ್ ಮತ್ತು ಮಷಿನ್ ಇಂಟೆಲಿಜೆನ್ಸ್ ಈ ಮೂರು ಉದಯೋನ್ಮುಖ ಕ್ಷೇತ್ರಗಳಲ್ಲಿ ನವೀನ ವಿಚಾರಗಳು ಮತ್ತು ಸಂಶೋಧನಾ ಫಲಿತಾಂಶ ಹಂಚಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.ದೇಶ ಮತ್ತು ವಿದೇಶಗಳಿಂದ 544 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಬಂದಿದ್ದು, ವಿಮರ್ಶೆಗೆ ಒಳಪಡಿಸಿ 141 ಉತ್ತಮ ಗುಣಮಟ್ಟದ ಪ್ರಬಂಧವನ್ನು ಪ್ರಸ್ತುತಿಗೆ ಆಯ್ಕೆಮಾಡಲಾಗಿದೆ. ಈ ಪೈಕಿ ತಮಿಳುನಾಡಿನ 12, ಮಹಾರಾಷ್ಟ್ರದ 4, ಆಂದ್ರ ಪ್ರದೇಶದ 6, ತೆಲಂಗಾಣದ 10, ಉತ್ತರಖಂಡ 8, ಜರ್ಮನಿಯ 6, ಯುಎಸ್‌ಎ 2, ಇಂಗ್ಲೆಡ್‌ನ 4 ಪ್ರಬಂಧ ಬಂದಿವೆ. ಕಾಲೇಜಿನ 20ಕ್ಕೂ ಅಧಿಕ ಪ್ರಬಂಧ ಆಯ್ಕೆಯಾಗಿವೆ ಎಂದು ತಿಳಿಸಿದರು.

ಇರಾನ್‌, ಅಮೇರಿಕಾ, ಇಸ್ರೇಲ್‌ ಯುದ್ಧದ ಹಿನ್ನೆಲೆಯಲ್ಲಿ ಆನ್‌ಲೈನ್‌ ಮೂಲಕ ಪ್ರಬಂಧ ಮಂಡನೆಗೆ ವ್ಯವಸ್ಥೆ ಮಾಡಲಾಗಿದೆ. ಐದು ವೇದಿಕೆ ಸಿದ್ಧಪಡಿಸಲಾಗಿದೆ. ಈ ಪೈಕಿ ಒಂದು ಆನ್‌ಲೈನ್‌ನಲ್ಲಿ ಪ್ರಬಂಧ ಮಂಡನೆಗೆ ಮೀಸಲಿಡಲಾಗಿದೆ ಎಂದು ವಿವರಿಸಿದರು.


ಈ ಸಮ್ಮೇಳನ ಉನ್ನತ ಮಟ್ಟದ ಸಂಶೋಧನೆ ಮತ್ತು ನವೀನತೆ ಉತ್ತೇಜನ ನೀಡುವ ಜೊತೆಗೆ ಶಿಕ್ಷಣ ಮತ್ತು ಉದ್ಯಮಗಳ ನಡುವಿನ ಸಹಕಾರ ಬಲಪಡಿಸುತ್ತದೆ. ಜ್ಞಾನ ಹಂಚಿಕೆ, ನೆಟ್‌ವರ್ಕಿಂಗ್ ವೇದಿಕೆ ಆಗುವುದರ ಮೂಲಕ ಯುವ ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಜೊತೆಗೆ ಜಾಗತಿಕ ತಾಂತ್ರಿಕ ಸಂಶೋಧನೆಯಲ್ಲಿ ಭಾರತ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಸಂಘಟನಾಧ್ಯಕ್ಷೆ ಡಾ. ಸುಮಾ, ಪ್ರಕಾಶನ ಅಧ್ಯಕ್ಷ ಡಾ. ಅನಿಲ್‌ಕುಮಾರ್, ಪ್ರಾಧ್ಯಾಪಕರಾದ ಸಂಗಾರೆಡ್ಡಿ ಕುರ್ತಕೋಟಿ, ಮುಧುಪ್ರಕಾಶ್ ಉಪಸ್ಥಿತರಿದ್ದರು.