ಭಾರತೀಯ ಪಾರಂಪರಿಕ ಜ್ಞಾನ ಪದ್ಧತಿಯ ಸಮಕಾಲೀನ ಪ್ರಸ್ತುತತೆ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ಕಲೆ, ವಾಸ್ತುಶಿಲ್ಪ, ಆಡಳಿತ ಹಾಗೂ ಅಂತರ್ ಶಿಸ್ತೀಯ ಕಲಿಕೆಯಲ್ಲಿ ಅವುಗಳ ಅನ್ವಯ ಕುರಿತು ಎರಡು ದಿನಗಳ ವಿಚಾರ ವಿನಿಮಯ ನಡೆಯಲಿದೆ.
ಧಾರವಾಡ:
ಭಾರತೀಯ ಪಾರಂಪರಿಕ ಜ್ಞಾನ ಪದ್ಧತಿ ಕುರಿತು ಧಾರವಾಡ ಐಐಟಿಯಲ್ಲಿ ಸೆ. 5, 6ರಂದು 3ನೇ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಐಐಟಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಹೇಳಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಪಾರಂಪರಿಕ ಜ್ಞಾನ ಪದ್ಧತಿಯ ಸಮಕಾಲೀನ ಪ್ರಸ್ತುತತೆ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ಕಲೆ, ವಾಸ್ತುಶಿಲ್ಪ, ಆಡಳಿತ ಹಾಗೂ ಅಂತರ್ ಶಿಸ್ತೀಯ ಕಲಿಕೆಯಲ್ಲಿ ಅವುಗಳ ಅನ್ವಯ ಕುರಿತು ಎರಡು ದಿನಗಳ ವಿಚಾರ ವಿನಿಮಯ ನಡೆಯಲಿದೆ. 12 ಆಹ್ವಾನಿತ ಉಪನ್ಯಾಸ, 24 ಮೌಖಿಕ ಪ್ರಸ್ತುತಿ, 20 ಭಿತ್ತಿಪತ್ರ ಪ್ರಸ್ತುತಿ ನಡೆಯಲಿವೆ. ದೇಶದ 23 ಐಐಟಿಗಳ ಪೈಕಿ ಏಳು ಐಐಟಿಗಳ ನಿರ್ದೇಶಕರು, ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕರು ಸೇರಿದಂತೆ ಹಲವು ಶೈಕ್ಷಣಿಕ ಸಂಸ್ಥೆಗಳ ವಿದ್ವಾಂಸರು, ಸಂಶೋಧಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಸೆ. 5ರಂದು ಬೆಳಗ್ಗೆ 9ಕ್ಕೆ ಪದ್ಮಭೂಷಣ ಪುರಸ್ಕೃತ ಡಾ. ಆರ್. ಗಣೇಶ ಹಾಗೂ ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಸಮ್ಮೇಳನಕ್ಕೆ ಚಾಲನೆ ನೀಡುವರು. ಎರಡು ದಿನ ಒಟ್ಟು 8 ಗೋಷ್ಠಿಗಳು ನಡೆಯಲಿವೆ. ಇದೇ ವೇಳೆ ಎಐ ಮತ್ತು ಆರ್ಯುವೇದದ ಮೂಲಕ ರೋಗನಿರ್ಣಯ, ಪಾರಂಪರಿಕ ಕಟ್ಟಡಗಳ ಭೂಕಂಪ ನಿರೋಧಕ ಮೌಲ್ಯಮಾಪನ, ದೇವಾಲಯ ವಾಸ್ತುಶಿಲ್ಪ ಸೇರಿದಂತೆ ಹಲವು ಸಂಶೋಧನೆಗಳು ಮಂಡಣೆ ಆಗಲಿವೆ ಎಂದ ಅವರು, ಪದ್ಮಶ್ರೀ ಪುರಸ್ಕೃತ ಪ್ರೊ. ಎಮರಿಟಸ್ ಕಿರಣ್ ಸೇಠ್, ಐಐಟಿ ಕಾನ್ಪುರದ ಪ್ರೊ. ದೇಬಿ ಪ್ರಸಾದ್ ಮಿಶ್ರಾ, ಡಾ. ಚಂದ್ರಶೇಖರ ಟೆಕಲ್, ಪ್ರೊ. ಕೆ. ರಾಮಸುಬ್ರಮಣಿಯನ್, ಪ್ರೊ. ಕೆ.ಎಸ್. ಕಣ್ಣನ್ ಅನೇಕ ವಿದ್ವಾಂಸರು ವಿಷಯಗಳನ್ನು ಮಂಡಣೆ ಮಾಡಲಿದ್ದಾರೆ. ಸೆ. 5ರಂದು ಮಧ್ಯಾಹ್ನ 2ರಿಂದ 5.15ರ ವರೆಗೆ ಪಂ. ವೆಂಕಟೇಶ ಕುಮಾರ್ ಅವರಿಂದ ಹಿಂದೂಸ್ಥಾನಿ ಸಂಗೀತ ಸಹ ಆಯೋಜಿಸಿದೆ ಎಂದು ತಿಳಿಸಿದರು.ಸೆ. 6ರಂದು ಪ್ರೊ. ದೇಬಿ ಪ್ರಸಾದ್ ಮಿಶ್ರಾ ಅವರ “An Introduction to Ancient Indian Technology” ಹಾಗೂ ಪ್ರೊ.; ಕೆ. ರಾಮಸುಬ್ರಮಣಿಯನ್ ಅವರ “The Elusive Ratio and the Advent of Calculus in India” ಕೃತಿಗಳು ಬಿಡುಗಡೆ ಆಗಲಿವೆ. ಅದೇ ದಿನ ಸಂಜೆ 5.40ಕ್ಕೆ ಸಮಾರೋಪ ನಡೆಯಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಪ್ರೊ. ರಮೇಶ್ ನಾಯಕ್, ಪ್ರೊ. ಸುಭಾಷ ಮೆಹತೋ, ಪಿಆರ್‌ಒ ಪ್ರೊ. ವಿಜೇತ್ ಕೊಟಗಿ ಇದ್ದರು.