ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇನ್ ಫಾರ್ಮೇಶನ್ ಸೈನ್ಯ ಎಂಜಿನಿಯರಿಂಗ್ ವಿಭಾಗದಿಂದ ಡಿಸೆಂಬರ್ 19 ಮತ್ತು 20 ರಂದು ಮೂರನೇ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಎಸ್ಐಟಿ ಪ್ರಾಂಶುಪಾಲ ಎಸ್.ವಿ. ದಿನೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ, ತುಮಕೂರುಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇನ್ ಫಾರ್ಮೇಶನ್ ಸೈನ್ಯ ಎಂಜಿನಿಯರಿಂಗ್ ವಿಭಾಗದಿಂದ ಡಿಸೆಂಬರ್ 19 ಮತ್ತು 20 ರಂದು ಮೂರನೇ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಎಸ್ಐಟಿ ಪ್ರಾಂಶುಪಾಲ ಎಸ್.ವಿ. ದಿನೇಶ್ ತಿಳಿಸಿದರು. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ದೇಶವು ಭಾರತ ಹಾಗೂ ವಿದೇಶಗಳ ಪ್ರಮುಖ ಸಂಶೋಧಕರು, ಪ್ರಾಧ್ಯಾಪಕರು, ಕೈಗಾರಿಕಾ ತಜ್ಞರು ಮತ್ತು ವೃತ್ತಿಪರರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಉದಯೋನ್ಮುಖ ಗಣಕ ಮತ್ತು ಮಾಹಿತಿ ತಂತ್ರಜ್ಞಾನಗಳ ಕ್ಷೇತ್ರದಲ್ಲಿನ ಇತ್ತೀಚಿನ ಅಭಿವೃದ್ಧಿಗಳು, ಸವಾಲುಗಳು ಹಾಗೂ ನವೀನ ಆವಿಷ್ಕಾರಗಳ ಕುರಿತು ಚರ್ಚೆ ಮತ್ತು ಜ್ಞಾನ ವಿನಿಮಯ ನಡೆಸುವುದಾಗಿದೆ ಎಂದರು. ಅಮೇರಿಕಾ, ಯುಕೆ, ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶಗಳ ವಿಜ್ಞಾನಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು, ಭಾರತದ ಖ್ಯಾತ ಸಂಸ್ಥೆಗಳು ಹಾಗೂ ಕೈಗಾರಿಕಾ ವೃತ್ತಿಪರರಿಂದ ಸಂಶೋಧನಾ ಪ್ರಬಂಧಗಳ ಪ್ರಸ್ತುತೀಕರಣ ನಡೆಯಲಿದೆ ಎಂದರು. ಭಾರತ ಹಾಗೂ ವಿದೇಶಗಳಿಂದ ಒಟ್ಟು 1027 ಸಂಶೋಧನಾ ಪ್ರಬಂಧಗಳು ಸ್ವೀಕೃತವಾಗಿದ್ದು, ಪ್ರತಿಯೊಂದು ಪ್ರಬಂಧವನ್ನೂ ಮೂರು ಸ್ವತಂತ್ರ ವಿಮರ್ಶಕರು ಪರಿಶೀಲಿಸಿದ್ದಾರೆ. ಅವುಗಳಲ್ಲಿ 202 ಗುಣಮಟ್ಟದ ಪ್ರಬಂಧಗಳನ್ನು ಅಂಗೀಕರಿಸಲಾಗಿದ್ದು, 120 ಪ್ರಬಂಧಗಳು ಎರಡು ದಿನಗಳ ಸಮ್ಮೇಳನದಲ್ಲಿ ಪ್ರಸ್ತುತಗೊಳ್ಳಲಿದೆ ಎಂದರು. ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭ ಅಂದು ಬೆಳಿಗ್ಗೆ 9.30ಕ್ಕೆ ಬಿರ್ಲಾ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮ ಶಿವಕುಮಾರ ಸ್ವಾಮಿಗಳು ಆಶೀರ್ವಾದಗಳೊಂದಿಗೆ ಹಾಗೂ ಸಿದ್ಧಲಿಂಗ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿದೆ ಎಂದರು.